ADVERTISEMENT

ದೀಪಕ್ ಪೂನಿಯಾಗೆ ಮನೆಯಲ್ಲೇ ಪ್ರತ್ಯೇಕವಾಸ

ಪಿಟಿಐ
Published 6 ಸೆಪ್ಟೆಂಬರ್ 2020, 10:51 IST
Last Updated 6 ಸೆಪ್ಟೆಂಬರ್ 2020, 10:51 IST
ದೀಪಕ್ ಪೂನಿಯಾ -ಪಿಟಿಐ ಚಿತ್ರ
ದೀಪಕ್ ಪೂನಿಯಾ -ಪಿಟಿಐ ಚಿತ್ರ   

ನವದೆಹಲಿ: ಕೋವಿಡ್–19 ಸೋಂಕು ಕಾಣಿಸಿಕೊಂಡಿದ್ದ ಕುಸ್ತಿಪಟು ದೀಪಕ್ ಪೂನಿಯಾ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು ಮನೆಯಲ್ಲೇ ಪ್ರತ್ಯೇಕವಾಸದಲ್ಲಿ ಇರುವಂತೆ ಸಲಹೆ ನೀಡಲಾಗಿದೆ.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ದೀಪಕ್ ಅವರಿಗೆ ರಾಷ್ಟ್ರೀಯ ಶಿಬಿರಕ್ಕೆ ಬರುವ ಮುನ್ನ ಪರೀಕ್ಷೆ ನಡೆಸಿದಾಗ ಸೋಂಕು ಇರುವುದು ದೃಢಪಟ್ಟಿತ್ತು. ಅವರೊಂದಿಗೆ ನವೀನ್ ಮತ್ತು ಕೃಷ್ಣ ಅವರಿಗೂ ಕೋವಿಡ್ ಇರುವುದು ದೃಢಪಟ್ಟಿತ್ತು. ಇವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕ್ರಮವಾಗಿ 86, 65 ಮತ್ತು 125 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಆಯ್ಕೆಯಾಗಿದ್ದಾರೆ. ಸೋನೆಪತ್‌ನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರದ ಕೇಂದ್ರದಲ್ಲಿ ಇವರು ತರಬೇತಿಗೆ ಹಾಜರಾಗಬೇಕಾಗಿತ್ತು.

’ದೀಪಕ್ ಪೂನಿಯಾ ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ. ಅವರ ಆರೋಗ್ಯ ಸುಧಾರಿಸಿದ್ದು ಕೋವಿಡ್‌ನ ಲಕ್ಷಣಗಳು ಇಲ್ಲ. ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿಯು ಅವರ ಪತ್ಯೇಕವಾಸಕ್ಕೆ ಅನುವು ಮಾಡಿದ್ದಾರೆ‘ ಎಂದು ಸಾಯ್ ಟ್ವೀಟ್ ಮಾಡಿದೆ.

ADVERTISEMENT

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗಳಿಸುವುದರೊಂದಿಗೆ ದೀಪಕ್ ಅವರು ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದರು. ಕೋವಿಡ್ ದೃಢವಾಗುತ್ತಿದ್ದಂತೆ ಅವರನ್ನು ಸಾಯ್ ನಿರ್ದೇಶಿಸಿದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನಿಯಮಾವಳಿಯಂತೆ ಎಲ್ಲ ಕುಸ್ತಿಪಟುಗಳು ಮತ್ತು ಸಿಬ್ಬಂದಿ ಶಿಬಿರಕ್ಕೆ ಬರುವ ಮುನ್ನ ಕಡ್ಡಾಯವಾಗಿ ಆರ್‌ಟಿ–ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು. ಸೆ‍ಪ್ಟೆಂಬರ್ ಒಂದರಂದು ಶಿಬಿರಕ್ಕಾಗಿ ಕುಸ್ತಿಪಟುಗಳು ಮತ್ತು ಸಿಬ್ಬಂದಿ ಇಲ್ಲಿಗೆ ಬಂದಿದ್ದರು.

ಏಷ್ಯನ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಾಂಪಿಯನ್ ಆಗಿದ್ದ ವಿನೇಶಾ ಪೋಗಟ್ ಈ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಏಕೈಕ ಮಹಿಳಾ ಕುಸ್ತಿಪಟು ಆಗಿರುವ ಅವರು ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಆದರೆ ಕಳೆದ ವಾರ ವರ್ಚುವಲ್ ಮಾದರಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ.

ಗುಣಮುಖರಾಗಿರುವುದಾಗಿಯೂ ಎರಡು ಬಾರಿ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದೂ ಅವರು ನಂತರ ಟ್ವೀಟ್ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.