ADVERTISEMENT

ಬಾಕ್ಸಿಂಗ್‌: ಸತ್ನಾಮ್ ಸಿಂಗ್‌ ಚಾಂಪಿಯನ್‌

ಪಿಟಿಐ
Published 26 ಮಾರ್ಚ್ 2022, 14:58 IST
Last Updated 26 ಮಾರ್ಚ್ 2022, 14:58 IST
ಕನಸು ನನಸಾದಾಗ ಎಂಬ ಬರಹದೊಂದಿಗೆ ಡಬ್ಲ್ಯುಬಿಸಿ ಅಧ್ಯಕ್ಷ ಮೌರಿಷಿಯೊ ಸುಲೇಮಾನ್ ಟ್ವೀಟ್ ಮಾಡಿರುವ ಸತ್ನಾಮ್ ಸಿಂಗ್ ಚಿತ್ರ
ಕನಸು ನನಸಾದಾಗ ಎಂಬ ಬರಹದೊಂದಿಗೆ ಡಬ್ಲ್ಯುಬಿಸಿ ಅಧ್ಯಕ್ಷ ಮೌರಿಷಿಯೊ ಸುಲೇಮಾನ್ ಟ್ವೀಟ್ ಮಾಡಿರುವ ಸತ್ನಾಮ್ ಸಿಂಗ್ ಚಿತ್ರ   

ನವದೆಹಲಿ: ಭಾರಿ ಪೈಪೋಟಿ ಕಂಡುಬಂದ ಸ್ಪರ್ಧೆಯಲ್ಲಿ ದೆಹಲಿಯ ಸತ್ನಾಮ್ ಸಿಂಗ್ ಅವರು ಅಮೇಯ್‌ ನಿತಿನ್‌ ವಿರುದ್ಧ ಜಯ ಗಳಿಸಿ ಡಬ್ಲ್ಯುಬಿಸಿ ಇಂಡಿಯಾ ಫೆದರ್‌ವೇಟ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಗೆದ್ದುಕೊಂಡರು.

10 ಸುತ್ತುಗಳ ಹಣಾಹಣಿಯಲ್ಲಿ ಉಭಯ ಬಾಕ್ಸರ್‌ಗಳು ಜಿದ್ದಾಜಿದ್ದಿಯ ಪೈಪೋಟಿ ನಡೆಸಿದರು. ಹೀಗಾಗಿ ಫಲಿತಾಂಶ ಪ್ರಕಟಿಸುವುದು ನಿರ್ಣಾಯಕರಿಗೆ ಸವಾಲಾಗಿತ್ತು. ಇಬ್ಬರು ರೆಫರಿಗಳು ಸತ್ನಾಮ್ ಪರವಾಗಿ ತೀರ್ಪು ನೀಡಿದರೆ ಮತ್ತೊಬ್ಬರು ಪಂದ್ಯ ಡ್ರಾ ಎಂದು ಸಾರಿದರು. ಬಹುಮತದ ಹಿನ್ನೆಲೆಯಲ್ಲಿ ಸತ್ನಾಮ್ ಅವರನ್ನು ವಿಜಯಿ ಎಂದು ಘೋಷಿಸಲಾಯಿತು.

ಆರಂಭದ ಸುತ್ತುಗಳಲ್ಲಿ ಸತ್ನಾಮ್‌ ಪಾರಮ್ಯ ಮೆರೆದಿದ್ದರು. ಮಹಾರಾಷ್ಟ್ರದ ಅಮೇಯ್ ನಿತಿನ್ ಪುಟಿದೆದ್ದು ಕೆಲವು ಸುತ್ತುಗಳಲ್ಲಿ ತಿರುಗೇಟು ನೀಡಿದರು. ಸ್ಪರ್ಧೆ ಕೊನೆಯ ಹಂತದತ್ತ ಸಾಗುತ್ತಿದ್ದಂತೆ ಸತ್ನಾಮ್ ಮತ್ತೊಮ್ಮೆ ಮೇಲುಗೈ ಸಾಧಿಸಿದರು. ಈ ಜಯದೊಂದಿಗೆ 25 ವರ್ಷದ ಸತ್ನಾಮ್ ಇತ್ತೀಚಿನ 11 ಪಂದ್ಯಗಳ ಪೈಕಿ 10ರಲ್ಲಿ ಜಯ ಗಳಿಸಿದ ಸಾಧನೆ ಮಾಡಿದರು.

ADVERTISEMENT

ಗುರುವಾಂವ್‌ನಲ್ಲಿ ಶುಕ್ರವಾರ ರಾತ್ರಿ ಕೊನೆಗೊಂಡ ಚಾಂಪಿಯನ್‌ಷಿಪ್‌ನ ಅಂಗವಾಗಿ ನಡೆದ ಮತ್ತೊಂದು ಸ್ಪರ್ಧೆಯಲ್ಲಿ ಸೌರಭ್ ಕುಮಾರ್ ಏಕಪಕ್ಷೀಯವಾಗಿ ಆದಿಲ್ ರಾಜೇಶ್ ವಿರುದ್ಧ ಜಯ ಗಳಿಸಿದರು. ಅಮರನಾಥ್‌ ಯಾದವ್ ಎದುರು ರಾಕೇಶ್ ಲೋಚನ್ ಗೆದ್ದರು. ಭಾರತೀಯ ಸೇನೆಯ ಸಂದೀಪ್ ನಯನ್ ಅವರನ್ನು ಪವನ್‌ ಗೋಯತ್ ಸೋಲಿಸಿದರು. ವಿಶ್ವಾಸ್ ಲಹೋರಿ ಅವರು ಸುಮಿತ್ ಕುಮಾರ್ ಎದುರು ಮತ್ತು ವರುಣ್ ಫರ್ತ್ಯಾಳ್ ಅವರು ಪವನ್ ಕುಮಾರ್ ಎದುರು ಜಯ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.