ಬಟುಮಿ: ಭಾರತದ ಇಂಟರ್‌ನ್ಯಾಷನಲ್ ಮಾಸ್ಟರ್ ದಿವ್ಯಾ ದೇಶಮುಖ್ ಅವರು ರ‍್ಯಾಪಿಡ್ ಟೈಬ್ರೇಕರ್‌ನಲ್ಲಿ ಸ್ವದೇಶದ ದ್ರೋಣವಲ್ಲಿ ಹಾರಿಕಾ ಅವರನ್ನು 2–0 ಯಿಂದ ಸೋಲಿಸಿ ಫಿಡೆ ಮಹಿಳಾ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ಗೆ ಮುನ್ನಡೆದರು.
ಇವರಿಬ್ಬರ ನಡುವಣ ಎರಡೂ ಕ್ಲಾಸಿಕಲ್ ಪಂದ್ಯಗಳು ‘ಡ್ರಾ’ ಆಗಿದ್ದರಿಂದ ಸೋಮವಾರ ನಿಯಮದಂತೆ ಅಲ್ಪಾವಧಿಯ ಟೈಬ್ರೇಕ್ ಪಂದ್ಯಗಳನ್ನು ಆಡಿಸಲಾಯಿತು. ದಿವ್ಯಾ ಎರಡೂ ಆಟಗಳಲ್ಲಿ ಅನುಭವಿ ಆಟಗಾರ್ತಿಯ ಎದುರು ಜಯಗಳಿಸಿದರು. ಭಾರತದ ಅಗ್ರ ಆಟಗಾರ್ತಿ ಕೋನೇರು ಹಂಪಿ ಕ್ವಾರ್ಟರ್‌ಫೈನಲ್‌ನಲ್ಲಿ ಚೀನಾದ ಯುಕ್ಸಿನ್ ಸಾಂಗ್ ಅವರನ್ನು 1.5–0.5 ರಿಂದ ಸೋಲಿಸಿ ಭಾನುವಾರವೇ ಅಂತಿಮ ನಾಲ್ಕರ ಸುತ್ತು ತಲುಪಿದ್ದರು.
ಇದರಿಂದ ಸೆಮಿಫೈನಲ್‌ನಲ್ಲಿ ಭಾರತದ ಮತ್ತು ಚೀನಾದ ತಲಾ ಇಬ್ಬರು ಸೆಮಿಫೈನಲ್ ತಲುಪಿದಂತಾಗಿದೆ.
ವಿಶ್ವಕಪ್‌ನಲ್ಲಿ ಮೊದಲ ಮೂರು ಸ್ಥಾನ ಪಡೆದವರು ಮುಂದಿನ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಆಡುವ ಅವಕಾಶ ಪಡೆಯಲಿದ್ದಾರೆ. ಕ್ಯಾಂಡಿಡೇಟ್ಸ್ ಟೂರ್ನಿಯ ವಿಜೇತ ಆಟಗಾರ್ತಿಯು ಹಾಲಿ ವಿಶ್ವ ಚಾಂಪಿಯನ್‌ಗೆ (ಈಗ ಚೀನಾದ ಜು ವೆನ್ಜುನ್ ಅವರಿಗೆ) ಚಾಲೆಂಜರ್ ಆಗಲಿದ್ದಾರೆ.
ನಾಲ್ಕನೇ ಶ್ರೇಯಾಂಕದ ಹಂಪಿ, ಸೆಮಿಫೈನಲ್‌ನಲ್ಲಿ ಚೀನಾದ ಗ್ರ್ಯಾಂಡ್‌ಮಾಸ್ಟರ್, ಅಗ್ರ ಶ್ರೇಯಾಂಕದ ಟಿಂಗ್ಜೀ ಲೀ ಅವರನ್ನು ಎದುರಿಸಲಿದ್ದಾರೆ. ನಾಗ್ಪುರದ 19 ವರ್ಷ ವಯಸ್ಸಿನ ದಿವ್ಯಾ ಇನ್ನೊಂದು ಸೆಮಿಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ತಾನ್ ಝೊಂಗ್ವಿ ಅವರ ವಿರುದ್ಧ ಸೆಣಸಾಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.