ADVERTISEMENT

ವಿಶ್ವದ ಜೊತೆಗೆ ಆಡುವ ಅವಕಾಶ ಬಿಡಬೇಡಿ: ಕ್ರೀಡಾಭಿಮಾನಿಗಳು

ಕ್ರಿಕೆಟಿಗ ಮಯಂಕ್ ಅಗರವಾಲ್ ಸಂದೇಶ; ಅಶ್ವಿನ್ ಅಚ್ಚರಿ; ರಾಹುಲ್ ಕಾಳಜಿ; ರಾಣಿ ಅಭ್ಯಾಸದ ಛಲ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2020, 20:30 IST
Last Updated 22 ಮಾರ್ಚ್ 2020, 20:30 IST
ಕೆ.ಎಲ್. ರಾಹುಲ್
ಕೆ.ಎಲ್. ರಾಹುಲ್   

ಬೆಂಗಳೂರು: ‘ವಿಶ್ವದ ಎಲ್ಲೆಡೆಯ ಜನರ ಮುಂದೆ ಮತ್ತು ಅವರ ಜೊತೆಗೆ ಆಡುವ ನಿಮ್ಮ ಕನಸು ಕೈಗೂಡುವ ಹೊತ್ತು ಇದು. ಪ್ರತಿಯೊಬ್ಬರಿಗೂ ಈ ಅವಕಾಶ ಕೂಡಿಬಂದಿದೆ. ಬನ್ನಿ ಕೊರೊನಾ ವಿರುದ್ಧ ಎಲ್ಲರೂ ಹೋರಾಡೋಣ’

ಭಾರತ ಟೆಸ್ಟ್‌ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಮಯಂಕ್ ಅಗರವಾಲ್ ಅವರು ತಮ್ಮ ಟ್ವಿಟರ್‌ನಲ್ಲಿ ಹಾಕಿರುವ ಸಂದೇಶ ಇದು. ಇದರೊಂದಿಗೆ ತಮ್ಮ ಮನೆಯಲ್ಲಿಯೇ ವ್ಯಾಯಾಮ ಮಾಡುತ್ತಿರುವ ಚಿತ್ರವನ್ನೂ ಲಗತ್ತಿಸಿದ್ದಾರೆ.

ಕೊರೊನಾ ವಿರುದ್ಧದ ಹೋರಾಟದ ಅಂಗವಾಗಿ ಭಾನುವಾ ಆಚರಿಸಲಾದ ಜನತಾ ಕರ್ಫ್ಯೂನ ಯಶಸ್ಸಿಗಾಗಿ ಮಯಂಕ್ ಮತ್ತು ಹಲವಾರು ಖ್ಯಾತನಾಮ ಕ್ರೀಡಾಪಟುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನೂ ಹಾಕಿದ್ದಾರೆ. ಕೆಲವರು ತಾವು ಮನೆಯಲ್ಲಿ ಕಾಲ ಕಳೆದದ್ದು ಹೇಗೆ ಎಂಬುದರ ವಿಡಿಯೋ ಕೊಡ ಹಾಕಿದ್ದಾರೆ.

ADVERTISEMENT

ಅಚ್ಚರಿಯಾಗಿದೆ: ‘ಅಬ್ಬಾ ಇದೊಂದು ಅದ್ಬುತವಾದ ಸ್ಪಂದನೆಯಾಗಿದೆ. ಎಲ್ಲ ಕಡೆಯೂ ನಿಶ್ಯಬ್ದ. ಸೂಜಿ ಬಿದ್ದ ಸಪ್ಪಳ ಕೇಳುವಷ್ಟು ಶಾಂತತೆ. ಇಡೀ ದೇಶವೇ ಕೊರೊನಾ ವಿರುದ್ಧ ಹೋರಾಟಕ್ಕೆ ತೋರಿಸಿರುವ ಈ ಸ್ಪಂದನೆಯು ಆಶಾದಾಯಕ’ ಎಂದು ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಟ್ವೀಟ್ ಮಾಡಿದ್ದಾರೆ. ಹಿಂದೆಂದೂ ಕಾಣದಂತಹ ಸ್ಥಿತಿ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ರಾಣಿ ಒಳಾಂಗಣದಲ್ಲಿಯ ಅಭ್ಯಾಸ ಭಾರತ ಮಹಿಳಾ ಹಾಕಿ ತಂಡದ ನಾಯಕಿ ‘ಜನತಾ ಕರ್ಫ್ಯೂ’ ಗೆ ಬೆಂಬಲ ವ್ಯಕ್ತಪಡಿಸುವುದರ ಜೊತೆಗೆ ತಮ್ಮ ಆಟದ ಆಭ್ಯಾಸವನ್ನೂ ಮುಂದುವರಿಸಿದ್ದಾರೆ. ಆದರೆ, ತಮ್ಮ ಮನೆಯೊಳಗಡೆಯೇ ಅವರು ತಾಲೀಮು ಮಾಡುತ್ತಿದ್ದಾರೆ.

ವಿಶಾಲವಾದ ಒಳಾಂಗಣದಲ್ಲಿ ಗೋಡೆಗೆ ಗುರಿ ಇಟ್ಟು ಚೆಂಡನ್ನು ಹಾಕಿ ಸ್ಟಿಕ್‌ನಿಂದ ಹೊಡೆದು ಗೋಲು ಮಾಡುವ ಅಭ್ಯಾಸ ಮಾಡಿದ್ದಾರೆ. ಅದರ ವಿಡಿಯೋವನ್ನು ಟ್ವಿಟರ್, ಇನ್ಸ್ಟಾಗ್ರಾಮ್‌ಗಳಲ್ಲಿ ಹಾಕಿದ್ದಾರೆ.

ಇನ್ನೊಂದಡೆ ಮನೆಯಲ್ಲಿ ವಿಶ್ರಾಂತಿಯಲ್ಲಿಯೇ ಇರುವ ಕುಸ್ತಿಪಟು ಗೀತಾ ಪೋಗಟ್ ಅವರು ತಮ್ಮ ಮಗುವಿನೊಂದಿಗೆ ಆಟವಾಡುವ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ‘ನಿಮ್ಮ ಹಾಗು ಕುಟುಂಬದವರ ಸುರಕ್ಷೆಗಾಗಿ ಸರ್ಕಾರದ ಸಲಹೆಗಳನ್ನು ಪಾಲಿಸಿ’ ಎಂದು ಬರೆದಿದ್ದಾರೆ.

ಬೆಂಗಳೂರಿನ ತಮ್ಮ ಮನೆಯಲ್ಲಿರುವ ಕ್ರಿಕೆಟಿಗ ಕೆ.ಎಲ್. ರಾಹುಲ್ , ‘ನೀವು ಮತ್ತು ನಿಮ್ಮ ಪ್ರೀತಿಪಾತ್ರರ ಸುರಕ್ಷೆಗೆ ಎಚ್ಚರ ವಹಿಸಿ. ಹೊರಗಡೆ ಹೋಗಬೇಡಿ. ಆದಷ್ಟು ಮನೆಯಲ್ಲಿಯೇ ಇರಿ. ಕುಟುಂಬದೊಂದಿಗೆ ಸಮಯ ಕಳೆಯಿರಿ’ ಎಂದು ಸಂದೇಶ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.