ADVERTISEMENT

ಸ್ಪ್ರಿಂಟ್‌ನಲ್ಲಿ ಮೋನಿಷ್‌, ಸ್ವರ ’ಡಬಲ್‘ ಸಾಧನೆ

ರಾಜ್ಯ ಮಿನಿ ಒಲಿಂಪಿಕ್ಸ್‌: ಅನುರಾಗ್ ಉತ್ತಮ ಅಥ್ಲಿಟ್; ಬ್ಯಾಸ್ಕೆಟ್‌ಬಾಲ್‌ನಲ್ಲಿ ಎಂಎನ್‌ಕೆ, ಮೌಂಟ್ಸ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 21 ಮೇ 2022, 13:56 IST
Last Updated 21 ಮೇ 2022, 13:56 IST
ಬಾಲಕಿಯರ 200 ಮೀ ಓಟದಲ್ಲಿ ಚಿನ್ನ ಗೆದ್ದ ಸ್ವರ ಸಂತೋಷ್ ಶಿಂಧೆ ಅವರ ಗೆಲುವಿನ ಸಂಭ್ರಮ –ಪ್ರಜಾವಾಣಿ ಚಿತ್ರ/ಎಸ್‌.ಕೆ.ದಿನೇಶ್
ಬಾಲಕಿಯರ 200 ಮೀ ಓಟದಲ್ಲಿ ಚಿನ್ನ ಗೆದ್ದ ಸ್ವರ ಸಂತೋಷ್ ಶಿಂಧೆ ಅವರ ಗೆಲುವಿನ ಸಂಭ್ರಮ –ಪ್ರಜಾವಾಣಿ ಚಿತ್ರ/ಎಸ್‌.ಕೆ.ದಿನೇಶ್   

ಬೆಂಗಳೂರು: ಟ್ರ್ಯಾಕ್‌ನಲ್ಲಿ ಮತ್ತೊಮ್ಮೆ ಮಿಂಚಿನ ಸಂಚಾರ ಮೂಡಿಸಿದ ಬೆಂಗಳೂರು ಜಿಲ್ಲೆಯ ಮೋನಿಷ್‌ ಚಂದ್ರಶೇಖರ್ ಮತ್ತು ಬೆಳಗಾವಿ ಜಿಲ್ಲೆಯ ಸ್ವರ ಸಂತೋಷ್ ಶಿಂಧೆ ಅವರು ಸ್ಪ್ರಿಂಟ್‌ನಲ್ಲಿ ಡಬಲ್ ಸಾಧನೆ ಮಾಡಿದರು.

ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ) ಸಹಯೋಗದಲ್ಲಿ ಆಯೋಜಿಸಿರುವರಾಜ್ಯ ಮಿನಿ ಒಲಿಂಪಿಕ್ಸ್‌ನ 100 ಮೀಟರ್ಸ ಓಟದಲ್ಲಿ ಚಿನ್ನ ಗೆದ್ದಿದ್ದರ ಇವರಿಬ್ಬರು ಶನಿವಾರ 200 ಮೀಟರ್ಸ್‌ನಲ್ಲೂ ಮೊದಲಿಗರಾದರು.

ಬಾಲಕರ ವಿಭಾಗದಲ್ಲಿ ಮೋನಿಷ್ ಎರಡು ಸೆಕೆಂಡುಗಳ ಅಂತರದಲ್ಲಿ ಧಾರವಾಡದ ಸೈಯದ್ ಸಬೀರ್ ಅವರನ್ನು ಹಿಂದಿಕ್ಕಿದರೆ ಬಾಲಕಿಯರ ವಿಭಾಗದಲ್ಲಿ ಸ್ವರ ಬೆಂಗಳೂರಿನ ಸುಚಿತ್ರಾ ಅವರ ಸವಾಲನ್ನು ಸುಳಭವಾಗಿ ಮೆಟ್ಟಿನಿಂತರು. ಶನಿವಾರ ಮುಕ್ತಾಯಗೊಂಡ ಅಥ್ಲೆಟಿಕ್ಸ್‌ನಲ್ಲಿ ಸ್ವರ ಉತ್ತಮ ಅಥ್ಲಿಟ್ ಆಗಿ ಹೊರಹೊಮ್ಮಿದರು. ಬಾಲಕರ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಅನುರಾಗ್ ಉತ್ತಮ ಕ್ರೀಡಾಪಟು ಪ್ರಶಸ್ತಿ ಗಳಿಸಿದರು.

ADVERTISEMENT

ಫಲಿತಾಂಶಗಳು: ಬಾಲಕರ 200 ಮೀಟರ್ಸ್‌: ಮೋನಿಷ್ ಚಂದ್ರಶೇಖರ್ (ಬೆಂಗಳೂರು)–1. ಕಾಲ: 23.6 ಸೆ, ಸೈಯದ್ ಸಬೀರ್ (ಧಾರವಾಡ)–2, ಸಾಯಿನಾಥ್ ಎಚ್‌.ವಿ (ಉತ್ತರ ಕನ್ನಡ)–3; ಲಾಂಗ್ ಜಂಪ್‌: ಮನ್ವಿತ್ (ಚಾಮರಾಜನಗರ)–1. ಅಂತರ: 5.42 ಮೀ, ಆದಿತ್ಯ ಸುರೇಶ್ ನಾಯಕ್ (ಬೆಳಗಾವಿ)–2, ಸುಮಿತ್ ಸತೀಶ್ (ಧಾರವಾಡ)–3; ಡಿಸ್ಕಸ್ ಥ್ರೋ: ಅನುರಾಗ್ ಜಿ (ಉಡುಪಿ)–1. ದೂರ: 41.67 ಮೀ, ಅವಿನಾಶ್ ತಲಕೇರಿ (ವಿಜಯಪುರ)–2, ರುದ್ರಗೌಡ ರಾವ್ (ಬೆಳಗಾವಿ)–3; 4x100 ಮೀ ರಿಲೆ: ಧಾರವಾಡ–1, ಉಡುಪಿ–2, ರಾಯಚೂರು–3.

ಬಾಲಕಿಯರ 200 ಮೀ ಓಟ: ಸ್ವರ ಸಂತೋಷ್ ಶಿಂಧೆ (ಬೆಳಗಾವಿ)–1. ಕಾಲ: 26.6, ಸುಚಿತ್ರಾ (ಬೆಂಗಳೂರು)–2, ಗಗನಾ (ಕೊಡಗು)–3; ಲಾಂಗ್ ಜಂಪ್‌: ಅಪೇಕ್ಷ ಬಿ.ಆರ್‌ (ಮೈಸೂರು)–1. ಅಂತರ: 4.93 ಮೀ, ಅದ್ವಿಕಾ ಆದಿತ್ಯ (ಬೆಂಗಳೂರು)–2, ಆವನಿ (ಉಡುಪಿ)–3; ಡಿಸ್ಕಸ್ ಥ್ರೋ: ವರ್ಷಾ ಗೌಡ (ಮೈಸೂರು)–1. ದೂರ: 21.68 ಮೀ, ಭೂಮಿಕಾ (ಚಾಮರಾಜನಗರ)–2, ಶ್ರೀಮಾಯಿ ಕುಲಕರ್ಣಿ (ಬೆಂಗಳೂರು)–3; 4x100 ಮೀ ರಿಲೆ: ಬೆಂಗಳೂರು–1, ಬೆಳಗಾವಿ–2, ಉಡುಪಿ–3.

ಬ್ಯಾಸ್ಕೆಟ್‌ಬಾಲ್: ಎಂಎನ್‌ಕೆ, ಮೌಂಟ್ಸ್‌ಗೆ ಪ್ರಶಸ್ತಿ

ಎಂಎನ್‌ಕೆ ರಾವ್ ಬಿ.ಸಿ ಮತ್ತು ಮೌಂಟ್ಸ್ ಬಿ.ಸಿ ತಂಡದವರು ಬ್ಯಾಸ್ಕೆಟ್‌ಬಾಲ್‌ನಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.

ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಬಾಲಕರ ವಿಭಾಗದ ಫೈನಲ್‌ನಲ್ಲಿ ಎಂಎನ್‌ಕೆ ರಾವ್ ತಂಡ 64–46ರಲ್ಲಿ ಎಚ್‌ಬಿಆರ್‌ ಬಿ.ಸಿಯನ್ನು ಮಣಿಸಿತು. ಎಂಎನ್‌ಕೆ ಪರವಗಿ ವಿಜೇಂದ್ರ ಮತ್ತು ಅಕ್ಷತ್ ತಲಾ 22 ಪಾಯಿಂಟ್ ಗಳಿಸಿದರು. ಎಚ್‌ಬಿಆರ್‌ಗಾಗಿ ಸಂವೇಗ್‌ 19 ಪಾಯಿಂಟ್ ಕಲೆ ಹಾಕಿದರು. ಭರತ್ ಎಸ್‌ಯು ವಿರುದ್ಧ 55–33ರಲ್ಲಿ ಗೆದ್ದ ಜೆಎಸ್‌ಸಿ ಮೂರನೇ ಸ್ಥಾನ ಗಳಿಸಿತು.

ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಮೌಂಟ್ಸ್ ಬಿ.ಸಿ 56–33ರಲ್ಲಿ ಎಂಸಿಎಚ್‌ಸಿಯನ್ನು ಸೋಲಿಸಿತು. ನಿಧಿ 30 ಮತ್ತು ತಾರುಶ್ರೀ 10 ಪಾಯಿಂಟ್ಸ್‌ಗಳೊಂದಿಗೆ ಮೌಂಟ್ಸ್ ಪರ ಮಿಂಚಿದರು. ಎಂಸಿಎಚ್‌ಎಸ್‌ಗಾಗಿ ಅದಿತಿ 19 ಪಾಯಿಂಟ್ಸ್ ಗಳಿಸಿದರು. ಕೋರಮಂಗಲ ಎಸ್‌ಸಿ ಮೂರನೇ ಸ್ಥಾನ ಗಳಿಸಿತು. ಮೈಸೂರಿನ ನ್ಯಾಷನಲ್ಸ್ ತಂಡವನ್ನು ಅದು 47–33ರಲ್ಲಿ ಮಣಿಸಿತು. ಕೋರಮಂಗಲ ತಂಡಕ್ಕಾಗಿ ರೂತ್ 15, ಜಯಶ್ರೀ 10 ಪಾಯಿಂಟ್ ಗಳಿಸಿದರು. ಮೈಸೂರು ತಂಡದ ಧ್ರುತ್‌ಶ್ರೀ 21 ಪಾಯಿಂಟ್‌ಗಳೊಂದಿಗೆ ಮಿಂಚಿದರು.

ಸಮಾರೋಪ ಸಮಾರಂಭ ಇಂದು

ಕ್ರೀಡಾಕೂಟದ ಸಮಾರೋಪ ಸಮಾರಂಭ ಭಾನುವಾರ ಸಂಜೆ 3 ಗಂಟೆಗೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಟ್ರೋಫಿಗಳನ್ನು ವಿತರಿಸುವರು. ಸಚಿವರಾದ ಬಿ.ಸಿ.ನಾಗೇಶ್, ಎನ್‌.ಮುನಿರತ್ನ ಪಾಲ್ಗೊಳ್ಳುವರು. ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.