ADVERTISEMENT

ವರ್ಚುವಲ್ ಶೂಟಿಂಗ್: ಇಳವೆನ್ನಿಲಗೆ ಚಿನ್ನ

ಪಿಟಿಐ
Published 18 ಅಕ್ಟೋಬರ್ 2020, 13:15 IST
Last Updated 18 ಅಕ್ಟೋಬರ್ 2020, 13:15 IST
ಇಳವೆನ್ನಿಲ ವಾಳರಿವನ್ –ಪಿಟಿಐ ಚಿತ್ರ
ಇಳವೆನ್ನಿಲ ವಾಳರಿವನ್ –ಪಿಟಿಐ ಚಿತ್ರ   

ನವದೆಹಲಿ: ಭಾರತದ ಇಳವೆನ್ನಿಲ ವಾಳರವಿನ್ ಅವರು ವರ್ಚುವಲ್ ಮಾದರಿಯಲ್ಲಿ ನಡೆದಶೇಕ್ ರಸೆಲ್ ಅಂತರರಾಷ್ಟ್ರೀಯ ಏರ್ ರೈಫಲ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗಳಿಸಿದರು. ಪುರುಷರ ವಿಭಾಗದಲ್ಲಿ ಶಾಹು ತುಷಾರ್ ಮಾನೆ ಅವರಿಗೆ ಬೆಳ್ಳಿ ಪದಕ ಒಲಿಯಿತು. ಬಾಂಗ್ಲಾದೇಶ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಷನ್‌ ಚಾಂಪಿಯನ್‌ಷಿಪ್ ಆಯೋಜಿಸಿತ್ತು.

ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನದಲ್ಲಿರುವ ಇಳವೆನ್ನಿಲ ಆರು ದೇಶಗಳ ಶೂಟರ್‌ಗಳನ್ನು ಹಿಂದಿಕ್ಕಿದರು. 60 ಶಾಟ್‌ಗಳ ಸ್ಪರ್ಧೆಯಲ್ಲಿ ಅವರು 627.5 ಸ್ಕೋರು ಕಲೆ ಹಾಕಿದರು. 622.6 ಸ್ಕೋರು ಗಳಿಸಿದ ಜಪಾನ್‌ನ ಶೊಯಿರಿ ಹಿರಾತ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರೆ ಇಂಡೊನೇಷ್ಯಾದ ವಿದ್ಯಾ ತೊಯಿಬಾ621.1 ಸ್ಕೋರು ಸಂಗ್ರಹಿಸಿ ಕಂಚಿನ ಪದಕ ಕೊರಳಿಗೇರಿಸಿಕೊಂಡರು.

ಪುರುಷರ ವಿಭಾಗದ ಚಿನ್ನ ಜಪಾನ್ ಪಾಲಾಯಿತು. 630.9 ಸ್ಕೋರು ಗಳಿಸಿದ ಆ ದೇಶದ ನಯೋ ಒಕಾಡ ಮೊದಲಿಗರಾದರೆ ಶಾಹು 623.8 ಸ್ಕೋರಿನೊಂದಿಗೆ ದ್ವಿತೀಯರಾದರು. ಬಕಿ ಅಬ್ದುಲ್ಲ (617.3) ಕಂಚಿನ ಪದಕ ಗಳಿಸಿದರು.

ADVERTISEMENT

ಶೇಕ್ ರಸೆಲ್ ಅವರ ಜನ್ಮಶತಮಾನೋತ್ಸವದ ಅಂಗವಾಗಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ‌ಕೊರಿಯಾ ಮತ್ತು ಭೂತಾನ್‌ ಶೂಟರ್‌ಗಳು ಕೂಡ ಪಾಲ್ಗೊಂಡಿದ್ದರು.ಶೇಕ್ ರಸೆಲ್, ಬಾಂಗ್ಲಾದೇಶದ ನಿರ್ಮಾತೃ ಶೇಕ್ ಮುಜೀಬ್ ಉರ್ ರಹಮಾನ್ ಅವರ ಕಿರಿಯ ಪುತ್ರ ಮತ್ತು ಪ್ರಧಾನಿ ಶೇಕ್ ಹಸೀನಾ ಅವರ ಸಹೋದರ.

ಮಹಿಳೆಯರ 10 ಮೀಟರ್ಸ್ ಏರ್ ರೈಫಲ್ ವಿಭಾಗದಲ್ಲಿ ವಿಶ್ವದ ಅಗ್ರ ಶೂಟರ್ ಆಗಿರುವ ಇಳವೆನ್ನಿಲ, ದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಳ್ಳುತ್ತಿಲ್ಲ. ಹೀಗಾಗಿ ಅವರಿಗೆ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಪರೀಕ್ಷೆಗಳು ಇರುವುದರಿಂದ ಅವರು ಶಿಬಿರಕ್ಕೆ ಹಾಜರಾಗದೇ ಇರಲು ನಿರ್ಧರಿಸಿದ್ದರು. ಮಾರ್ಚ್ 18ರಂದು ಪ್ರಕಟಿಸಲಾದ ರಾಷ್ಟ್ರೀಯ ರ‍್ಯಾಂಕಿಂಗ್ ಆಧಾರದಲ್ಲಿ ಶಾಹು ಅವರಿಗೆ ಅವಕಾಶ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.