ADVERTISEMENT

‘ಒಲಿಂಪಿಕ್ಸ್ ಸಿದ್ಧತೆ ನಿರಂತರವಾಗಲಿ...’: ಸಂವಾದದಲ್ಲಿ ಮಾಜಿ ಒಲಿಂಪಿಯನ್ನರ ಮಾತು

ಪಿಟಿಐ
Published 13 ಜುಲೈ 2024, 23:30 IST
Last Updated 13 ಜುಲೈ 2024, 23:30 IST
ದೀಪಾ ಕರ್ಮಾಕರ್
ದೀಪಾ ಕರ್ಮಾಕರ್   

ಕೋಲ್ಕತ್ತ: ಒಲಿಂಪಿಕ್ಸ್‌ಗೆ ಭಾರತದ ಸಿದ್ಧತೆ ನಿರಂತರ ಪ್ರಕ್ರಿಯೆಯಾಗಿರಬೇಕು. ಭುವಿಯ ಮೇಲಿನ ದೊಡ್ಡ ಕ್ರೀಡಾಮೇಳಕ್ಕೆ ಕೆಲವೇ ತಿಂಗಳು ಇರುವಾಗ ಎಚ್ಚೆತ್ತುಕೊಳ್ಳುವುದು ಸರಿಯಾದ ಕ್ರಮವಲ್ಲ ಎಂದು ಮಾಜಿ ಒಲಿಂಪಿಯನ್ನರು ಅಭಿಪ್ರಾಯಪಟ್ಟಿದ್ದಾರೆ.

ನಗರದ ಹೋಟೆಲ್‌ ಒಂದರಲ್ಲಿ ಭಾರತ ವಾಣಿಜ್ಯೋದ್ಯಮ ಮಂಡಳಿ ಶುಕ್ರವಾರ ಹಮ್ಮಿಕೊಂಡಿದ್ದ ‘2024ರ ಒಲಿಂಪಿಕ್ಸ್‌ನಲ್ಲಿ ಭಾರತದ ಅವಕಾಶಗಳು’ ವಿಷಯ ಮೇಲೆ ನಡೆದ ಸಂವಾದದಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು.

1968ರ ಮೆಕ್ಸಿಕೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಹಾಕಿ ತಂಡದಲ್ಲಿ ಆಡಿದ್ದ ಗುರುಬಕ್ಷ್‌ ಸಿಂಗ್, ‘ಯುವ ಸಮೂಹದಲ್ಲಿ ಕ್ರೀಡಾ ಸಂಸ್ಕೃತಿ ಬೆಳೆಸಬೇಕಾಗಿದೆ. ಪ್ರತಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಕ್ರೀಡಾ ಸೌಕರ್ಯಗಳು, ಮೈದಾನಗಳು ಇರಬೇಕು’ ಎಂದರು.

ADVERTISEMENT

ಒಲಿಂಪಿಕ್ಸ್‌ ಹತ್ತಿರ ಬರುವಾಗ ನಾವು ಜಾಗೃತರಾಗುತ್ತೇವೆ. ಇಡೀ ದೇಶ ಎಚ್ಚೆತ್ತುಕೊಳ್ಳುತ್ತದೆ. ಈ ಪ್ರವೃತ್ತಿ ಬದಲಾಗಬೇಕಿದೆ ಎಂದರು.

ಹಾಕಿಯಲ್ಲಿ ಭಾರತದ ಸಾಧ್ಯತೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಾವು ಇರುವ ಗುಂಪು ಕಠಿಣವಾಗಿದೆ. ಸೆಮಿಫೈನಲ್‌ ಪ್ರವೇಶ ಪಡೆಯುವುದು ನಮ್ಮ ಮೊದಲ ಗುರಿಯಾಗಿರಬೇಕು. ಕಣಕ್ಕಿಳಿಯುವಾಗ ಗೆಲ್ಲುವುದೊಂದೇ ಮನಸ್ಸಿನಲ್ಲಿರಬೇಕು’ ಎಂದು ಕಿವಿಮಾತು ಹೇಳಿದರು.

‘ಸಾಧಿಸಬಲ್ಲೆವು ಎಂಬ ಗಟ್ಟಿ ಮನೋಬಲ ನಮ್ಮದಾಗಿಬೇಕು’ ಎಂದು 2016ರ ರಿಯೊ ಒಲಿಂಪಿಕ್ಸ್‌ನ ಜಿಮ್ನಾಸ್ಟಿಕ್ಸ್‌ನಲ್ಲಿ ಸ್ವಲ್ಪದರಲ್ಲೇ ಪದಕ ತಪ್ಪಿಸಿಕೊಂಡ ದೀಪಾ ಕರ್ಮಾಕರ್‌ ಹೇಳಿದರು.

ವಿದೇಶದ ಮಾಜಿ ಕೋಚ್‌ ಒಬ್ಬರು, ಜಿಮ್ನಾಸ್ಟಿಕ್ಸ್‌ನ ಕಠಿಣ ವಾಲ್ಟ್‌ ಸ್ಪರ್ಧೆಯಲ್ಲಿ ತಾವು ಪ್ರಯತ್ನ ನಡೆಸುವುದನ್ನು ಪ್ರೋತ್ಸಾಹಿಸದೇ ಹೇಗೆ  ಆತ್ಮವಿಶ್ವಾಸ ಕುಂದಿಸಿದರು ಎಂದು ದೀಪಾ ನೆನಪಿಸಿಕೊಂಡರು. ‘ಸಾಧಿಸಬೇಕೆಂಬ ಹಂಬಲವಿರುವ ಪ್ರತಿಯೊಬ್ಬ ಬಾಲಕಿಯೂ, ಪ್ರತಿಕೂಲಕರ ಪರಿಸ್ಥಿತಿಯನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳಬೇಕು. ಅನ್ಯಾಯದ ವಿರುದ್ಧ ಹೋರಾಡಬೇಕು’ ಎಂದರು.

ಚರ್ಚೆ ನಡೆಸಿಕೊಟ್ಟ ಬೋರಿಯಾ ಮಜುಂದಾರ್ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ದೀಪಾ, ‘ಮುಂಬರುವ ಒಲಿಂಪಿಕ್ಸ್‌ನಲ್ಲಿ ಅಥ್ಲೆಟಿಕ್ಸ್‌ನಿಂದ ಹತ್ತು ಪದಕಗಳನ್ನು ನಿರೀಕ್ಷಿಸುತ್ತಿರುವುದಾಗಿ’ ಹೇಳಿದರು. ಆದರೆ ನಮ್ಮ ಸಿದ್ಧತೆ ಕೆಲವೇ ತಿಂಗಳಿಗೆ ಸೀಮಿತಗೊಳ್ಳಬಾರದು. ಅದು ನಿರಂತರವಾಗಿಬೇಕು ಎಂದರು.

‘ಭಾರತದಲ್ಲಿ 5–6 ರಾಜ್ಯಗಳಲ್ಲಿ ಮಾತ್ರ ಜಿಮ್ನಾಸ್ಟಿಕ್ಸ್ ಅಭ್ಯಾಸ ನಡೆಯುತ್ತಿದೆ. ಕರ್ಮಾಕರ್‌ ಅವರ ಹಾದಿಯಲ್ಲಿ ಇತರ ಹೆಣ್ಣು ಮಕ್ಕಳು ನಡೆಯಬೇಕಾದರೆ ಇದು ಬದಲಾಗಬೇಕು’ ಎಂದು ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಜಿಮ್ನಾಸ್ಟಿಕ್ಸ್‌ ಕೋಚ್‌ ವಿಶ್ವೇಶ್ವರ ನಂದಿ ಅಭಿಪ್ರಾಯಪಟ್ಟರು.

ಹಿರಿಯ ಚೆಸ್‌ ಜಿಎಂ ಪ್ರವೀಣ್ ತಿಪ್ಸೆ ಮಾತನಾಡಿ, ‘ಚೆಸ್‌ನಲ್ಲಿ ಭಾರತ ಸೂಪರ್‌ ಪವರ್‌ ಆಗಿದೆ. ವಿಶ್ವನಾಥನ್ ಆನಂದ್ ಅವರು ಸೂರ್ಯಶೇಖರ ಗಂಗೂಲಿ ಅಂಥ ಆಟಗಾರರಿಗೆ ಪ್ರೇರಣೆಯಾದರು. ನಂತರ ಈ ಪರಂಪರೆ ಮುಂದುವರಿಯಿತು’ ಎಂದರು. ಒಲಿಂಪಿಕ್ಸ್‌ನಲ್ಲಿ ಚೆಸ್‌ ಸೇರ್ಪಡೆ ಮಾಡಬೇಕೆಂಬ ಪ್ರಸ್ತಾವವನ್ನು ಗ್ಯಾರಿ ಕ್ಯಾಸ್ಪರೋವ್ ಬಹಳ ಹಿಂದೆಯೇ ಇಟ್ಟಿದ್ದರು. ಒಲಿಂಪಿಕ್ಸ್‌ನಲ್ಲಿ ಸೇರ್ಪಡೆಗೆ ಸಂಬಂಧಿಸಿ ಆಡಳಿತಗಾರರೇ ಆ ನಡೆಗೆ ಮುಂದಾಗಬೇಕು ಎಂದರು. ಚೆಸ್‌ ಒಲಿಂಪಿಯಾಡ್‌ನಲ್ಲಿ 186 ದೇಶಗಳು ಭಾಗವಹಿಸಿದ್ದನ್ನು ಅವರು ಬೊಟ್ಟು ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.