ADVERTISEMENT

ಅಮೆರಿಕ ಓಪನ್ ಗಾಲ್ಫ್‌: ಬ್ರೂಕ್ಸ್‌, ವುಡ್ಸ್ ಆಕರ್ಷಣೆ

ಏಜೆನ್ಸೀಸ್
Published 13 ಜೂನ್ 2019, 19:45 IST
Last Updated 13 ಜೂನ್ 2019, 19:45 IST
ಟೈಗರ್ ವುಡ್ಸ್ –ಎಎಫ್‌ಪಿ ಚಿತ್ರ
ಟೈಗರ್ ವುಡ್ಸ್ –ಎಎಫ್‌ಪಿ ಚಿತ್ರ   

ಪೆಬಲ್ ಬೀಚ್, ಅಮೆರಿಕ: ಟೈಗರ್ ವುಡ್ಸ್ ಮತ್ತು ಬ್ರೂಕ್ಸ್ ಕೋಪ್ಕಾ ಗುರುವಾರ ಆರಂಭಗೊಂಡ ಯುಎಸ್‌ ಓಪನ್ ಗಾಲ್ಫ್ ಚಾಂಪಿಯನ್‌ಷಿಪ್‌ನ ಪ್ರಮುಖ ಆಕರ್ಷಣೆಯಾಗಿದ್ದಾರೆ. ಪ್ರಶಸ್ತಿ ಗೆಲ್ಲುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಲು ಬ್ರೂಕ್ಸ್ ಸಜ್ಜಾಗಿದ್ದರೆ, ಪತನದ ಹಾದಿಯಿಂದ ಮೇಲೆದ್ದು ಬಂದಿರುವ ವುಡ್ಸ್‌ ಮತ್ತೊಂದು ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ.

ಟೈಗರ್ ವುಡ್ಸ್‌ ಒಟ್ಟು ಮೂರು ಬಾರಿ ಯುಎಸ್ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ಪೈಕಿ ಮೊದಲನೆಯದನ್ನು ಪೆಬಲ್ ಬೀಚ್‌ನಲ್ಲಿ ಗೆದ್ದಿದ್ದರು. ಇತ್ತೀಚಿನ ವರ್ಷಗಳಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಏಪ್ರಿಲ್‌ನಲ್ಲಿ ಯುಎಸ್ ಮಾಸ್ಟರ್ಸ್ ಚಾಂಪಿಯನ್ ಆಗುವುದರೊಂದಿಗೆ ಗಮನ ಸೆಳೆದಿದ್ದರು. ಅವರು ಈಗ ವಿಶ್ವ ರ‍್ಯಾಂಕಿಂಗ್‌ನಲ್ಲಿ ಐದನೇ ಸ್ಥಾನದಲ್ಲಿದ್ದಾರೆ.

ರ‍್ಯಾಂಕಿಂಗ್ ಪಟ್ಟಿಯ ಮೊದಲ ಸ್ಥಾನದಲ್ಲಿ ಬ್ರೂಕ್ಸ್ ಕೋಪ್ಕಾ ಇದ್ದಾರೆ. ಎರಡು ವರ್ಷಗಳಲ್ಲಿ ಪ್ರಮುಖ ನಾಲ್ಕು ಪ್ರಶಸ್ತಿಗಳನ್ನು ಬಗಲಿಗೆ ಹಾಕಿಕೊಂಡಿರುವ ಅವರು ಕಳೆದ ಎರಡು ವರ್ಷಗಳಲ್ಲಿ ಯುಎಸ್ ಓಪನ್ ಪ್ರಶಸ್ತಿಯ ಒಡೆಯರಾಗಿದ್ದಾರೆ. ಕಳೆದ ತಿಂಗಳಲ್ಲಿ ನಡೆದಿದ್ದ ಪಿಜಿಎ ಚಾಂಪಿಯನ್‌ಷಿಪ್‌ನಲ್ಲೂ ಅಮೋಘ ಸಾಧನೆ ಮಾಡಿದ್ದರು.

ADVERTISEMENT

ಕಳೆದ ಬಾರಿ ಯುಎಸ್ ಓಪನ್ ಪ್ರಶಸ್ತಿ ಗೆಲ್ಲುವುದರೊಂದಿಗೆ ಬೂಕ್ಸ್‌, ಸತತ ಎರಡು ಬಾರಿ ಪ್ರಶಸ್ತಿ ಗೆದ್ದ ದಾಖಲೆ ಸರಿಗಟ್ಟಿದ್ದರು. 1903 ಮತ್ತು 1905ರಲ್ಲಿ ವಿಲಿ ಆ್ಯಂಡರ್ಸನ್ ಈ ಸಾಧನೆ ಮಾಡಿದ್ದರು. ಈ ಬಾರಿಯೂ ಪ್ರಶಸ್ತಿ ಗೆದ್ದರೆ ಹ್ಯಾಟ್ರಿಕ್ ಸಾಧನೆಯ ದಾಖಲೆ ಅವರದಾಗಲಿದೆ.

ಬ್ರೂಕ್ಸ್ ಕೋಪ್ಕಾ –ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.