ADVERTISEMENT

ಫಾರ್ಮುಲಾ ಒನ್‌ ದಂತಕತೆ ನಿಕಿ ನಿಧನ

ವರ್ಣರಂಜಿತ ವ್ಯಕ್ತಿತ್ವದ ಯುಗಾಂತ್ಯ: ಮೂರು ಸಲ ವಿಶ್ವ ಚಾಂಪಿಯನ್‌

ಏಜೆನ್ಸೀಸ್
Published 21 ಮೇ 2019, 18:53 IST
Last Updated 21 ಮೇ 2019, 18:53 IST
2016ರಲ್ಲಿ ನಿಕಿ – ಎಎಫ್‌ಪಿ ಚಿತ್ರ
2016ರಲ್ಲಿ ನಿಕಿ – ಎಎಫ್‌ಪಿ ಚಿತ್ರ   

ವಿಯೆನ್ನಾ: ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ನಿವೃತ್ತ ಫಾರ್ಮುಲಾ ಒನ್‌ಚಾಲಕ ಅಸ್ಟ್ರಿಯಾದ ನಿಕಿ ಆವುಡಾ (70) ಸೋಮವಾರ ನಿಧನರಾದರು. ಈ ಕುರಿತು ಮಂಗಳವಾರ ಅವರ ಕುಟುಂಬದ ಮೂಲಗಳು ಮಾಹಿತಿ ನೀಡಿವೆ.

ನಿಕಿ ಮೂರು ಬಾರಿ ‘ಫಾರ್ಮುಲಾ ಒನ್‌ ಚಾಲಕರ’ ವಿಶ್ವ ಚಾಂಪಿಯನ್‌ಷಿಪ್‌ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. 1975 ಹಾಗೂ 1977ರಲ್ಲಿ ಫೆರಾರಿ ಹಾಗೂ 1984ರಲ್ಲಿ ಮೆಕ್‌ಲಾರೆನ್‌ ತಂಡದ ಪರವಾಗಿ ಅವರು ಸಾಧನೆ ಮಾಡಿದ್ದರು. 1976ರಲ್ಲಿ ಭೀಕರ ಅಪಘಾತಕ್ಕೆ ತುತ್ತಾದರೂ ಛಲ ಕಳೆದುಕೊಂಡಿರಲಿಲ್ಲ. ಮತ್ತೆ ರೇಸ್‌ಗೆ ಮರಳಿದ್ದರು. ಟ್ರ್ಯಾಕ್‌ನಲ್ಲಿನ ವಿಜಯಗಳಿಂದ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಎಂಟು ತಿಂಗಳ ಹಿಂದೆ ಅವರು ಶ್ವಾಸಕೋಶದ ಕಸಿ ಮಾಡಿಸಿಕೊಂಡಿದ್ದರು.

ಬ್ರಿಟಿಷ್‌ ಚಾಲಕ ಲೂಯಿಸ್ ಹ್ಯಾಮಿಲ್ಟನ್‌ರನ್ನು ಯಶಸ್ಸಿನ ಹಾದಿಗೆ ತರುವಲ್ಲಿ ನಿಕಿ ಅವರ ಪಾತ್ರ ಪ್ರಮುಖವಾಗಿತ್ತು.

ADVERTISEMENT

ಹೋರಾಟಗಾರ, ಯಶಸ್ವಿ ಉದ್ಯಮಿ, ವರ್ಣರಂಜಿತ ವ್ಯಕ್ತಿತ್ವ

* 1949 ಫೆಬ್ರವರಿ 22ರಂದು ಅಸ್ಟ್ರಿಯಾದ ವಿಯೆನ್ನಾದಲ್ಲಿ ನಿಕಿ ಜನಿಸಿದರು. 1968ರಲ್ಲಿ ಮೊದಲ ಮಿನಿ ರೇಸ್‌ನಲ್ಲಿ ಪ್ರಶಸ್ತಿ ಒಡೆಯರಾಗಿದ್ದರು.

* 1976ರ ಆಗಸ್ಟ್‌ 1ರಂದು ಜರ್ಮನಿಯ ನ್ಯೂಯರ್‌ ಬರ್ಗ್‌ರಿಂಗ್‌ನಲ್ಲಿ ನಡೆದ ಘಟನೆ. ಅವರು ಚಲಾಯಿಸುತ್ತಿದ್ದ ಕಾರು ಟ್ರ್ಯಾಕ್‌ನಿಂದಾಚೆ ಉರುಳಿ ಬೆಂಕಿಯ ಜ್ವಾಲೆ ಹೊತ್ತಿಕೊಂಡಿತು. ಇತರ ಚಾಲಕರು ಬಂದು ರಕ್ಷಿಸುವವರೆಗೂ ಸುಮಾರು ಒಂದು ನಿಮಿಷದವರೆಗೆ ಅವರು ಕಾರ್‌ನಲ್ಲೇ ಇದ್ದರು. ತೀವ್ರ ಬೆಂಕಿಯಿಂದಾಗಿ ಇತರ ಚಾಲಕರ ಅಗ್ನಿಶಾಮಕ ರೇಸಿಂಗ್‌ ಬಟ್ಟೆಗಳು ಸುಟ್ಟು ಹೋಗಿದ್ದವು.

* ಅಪಘಾತವಾದ ಆರು ವಾರ ಬಳಿಕ ಇಟಾಲಿಯನ್‌ ಗ್ರ್ಯಾನ್‌ ಪ್ರೀ ರೇಸ್‌ನಲ್ಲಿ ಭಾಗವಹಿಸುವ ಮೂಲಕ ಜಗತ್ತನ್ನು ಅಚ್ಚರಿಯ ಕಡಲಲ್ಲಿ ತೇಲುವಂತೆ ಮಾಡಿದರು. ಬ್ಯಾಂಡೇಜ್‌ ಸುತ್ತಿಕೊಂಡೇ ಕಣಕ್ಕಿಳಿದಿದ್ದ ಅವರು ರೇಸ್‌ನ್ನು ನಾಲ್ಕನೇ ಸ್ಥಾನದೊಂದಿಗೆ ಮುಗಿಸಿದರು. ಮೂರು ಬಾರಿ ವಿಶ್ವ ಚಾಂಪಿಯನ್‌ ಪಟ್ಟವನ್ನು ಗಳಿಸಿದರು.

* ಫಾರ್ಮುಲಾ ಒನ್‌ನಿಂದ ವಿರಾಮ ಪಡೆದ ಪಡೆದ ಅವರು 1979ರಲ್ಲಿ ‘ಆವುಡಾ ಏರ್‌’ ಎಂಬ ವಿಮಾನ ಸಂಸ್ಥೆಯನ್ನು ಸ್ಥಾಪಿಸಿದರು.

* 1982ರಲ್ಲಿ ಮತ್ತೆ ರೇಸ್‌ಗೆ ಮರಳಿದ್ದರು. 2002ರಲ್ಲಿ ಅದನ್ನು ತಮ್ಮ ವಿಮಾನ ಸಂಸ್ಥೆಯನ್ನು ಅಸ್ಟ್ರಿಯನ್‌ ಏರ್‌ಲೈನ್ಸ್‌ಗೆ ಮಾರಾಟ ಮಾಡಿದರು.

* 2004ರಲ್ಲಿ ಅವರು ಲಾಭದಾಯಕ, ಅಗ್ಗದ ನಿಕಿ ಎಂಬ ಸರಕು ಸಾಗಣೆ ವಾಹನವನ್ನು ತಯಾರಿಸಿದರು. ಬಳಿಕ ಅದನ್ನು 2011ರಲ್ಲಿ ಏರ್‌ ಬರ್ಲಿನ್‌ ಸಂಸ್ಥೆಗೆ ಮಾರಾಟ ಮಾಡಿದರು. ಬ್ರಿಟಿಷ್‌ ಏರ್‌ವೇಸ್‌ ಹಾಗೂ ರೈನೇರ್‌ ಎಂಬ ಸಂಸ್ಥೆಗಳಲ್ಲೂ ಅವರು ಪಾಲು ಹೊಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.