ADVERTISEMENT

ಬಿಡಿಎಫ್‌ಎ ಫುಟ್‌ಬಾಲ್‌ ಲೀಗ್‌: ಎಫ್‌ಸಿ ಬೆಂಗಳೂರು ಜಯಭೇರಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 19:40 IST
Last Updated 18 ನವೆಂಬರ್ 2019, 19:40 IST
ಇನ್‌ಕಂ ಟ್ಯಾಕ್ಸ್‌ ಕ್ಲಬ್‌ನ ಕಾರ್ತಿಕ್ ಬಿ ಅವರಿಂದ ಚೆಂಡು ಕಸಿದುಕೊಳ್ಳಲು ಬೆಂಗಳೂರು ಯುನೈಟೆಡ್ ಎಫ್‌ಸಿಯ ಟೊಮಿಯೊ ಶಿಮ್ರಾಯ್ (ಬಲ) ಪ್ರಯತ್ನಿಸಿದರು –ಪ್ರಜಾವಾಣಿ ಚಿತ್ರ
ಇನ್‌ಕಂ ಟ್ಯಾಕ್ಸ್‌ ಕ್ಲಬ್‌ನ ಕಾರ್ತಿಕ್ ಬಿ ಅವರಿಂದ ಚೆಂಡು ಕಸಿದುಕೊಳ್ಳಲು ಬೆಂಗಳೂರು ಯುನೈಟೆಡ್ ಎಫ್‌ಸಿಯ ಟೊಮಿಯೊ ಶಿಮ್ರಾಯ್ (ಬಲ) ಪ್ರಯತ್ನಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಮೊಹಮ್ಮದ್‌ ಅಸ್ರಾರ್‌ ರೆಹಬರ್‌ ಗಳಿಸಿದ ಗೋಲಿನ ಬಲದಿಂದ ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡವು ಇನ್‌ಕಮ್‌ ಟ್ಯಾಕ್ಸ್ ಎಫ್‌ಸಿ ಎದುರು 1–0ಯಿಂದ ಜಯಿಸಿತು. ಬೆಂಗಳೂರು ಫುಟ್‌ಬಾಲ್‌ ಸ್ಟೇಡಿಯಂನಲ್ಲಿ ನಡೆದ ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಪಂದ್ಯದಲ್ಲಿ ರೆಹಬರ್‌ 36ನೇ ನಿಮಿಷ ಗೋಲು ದಾಖಲಿಸಿದರು.

ಎ ಡಿವಿಷನ್‌ನ ಹಣಾಹಣಿಯಲ್ಲಿ ಎಫ್‌ಸಿ ಡೆಕ್ಕನ್‌ ತಂಡವು ಸಿಐಎಲ್‌ ಎಫ್‌ಸಿ ಎದುರು 4–2 ಗೋಲುಗಳಿಂದ ಜಯಭೇರಿ ಮೊಳಗಿಸಿತು. ಡೆಕ್ಕನ್‌ ಪರ ಸೂರ್ಯ (20, 56ನೇ ನಿ) ಮಿಂಚಿದರು. ಇನ್ನೆರಡು ಗೋಲುಗಳನ್ನು ಕೆ.ಡಿ.ಅರವಿಂದ್‌ (30, 52ನೇ ನಿ) ಹೊಡೆದರು. ಸಿಐಎಲ್‌ ತಂಡದ ಪರ ಪ್ರಕಾಶ್‌ (64ನೇ ನಿಮಿಷ) ಹಾಗೂ ಕಿಂಗ್‌ಸೆಲಿ (70+2 ನೇ ನಿಮಿಷ) ಯಶಸ್ಸು ಸಾಧಿಸಿದರು.

ಎ ಡಿವಿಷನ್‌ ಲೀಗ್‌ನ ಪಂದ್ಯದಲ್ಲಿ ಜವಾಹರ್‌ ಯೂನಿಯನ್‌ ಎಫ್‌ಸಿಯು 1–1 ಗೋಲಿನಿಂದ ಪರಿಕ್ರಮ ಎಫ್‌ಸಿ ಎದುರು 1–1ರ ಡ್ರಾ ಸಾಧಿಸಿತು. ಪರಿಕ್ರಮ ತಂಡಕ್ಕೆ ಪ್ರಕಾಶ್‌ 3ನೇ ನಿಮಿಷದಲ್ಲಿ ಮುನ್ನಡೆ ಗಳಿಸಿಕೊಟ್ಟಿದ್ದರು.ಆದರೆ ಜವಾಹರ್‌ ಯೂನಿಯನ್‌ ಪರ ಜೋರ್ಡಾನ್‌ 35ನೇ ನಿಮಿಷ ಗೋಲು ದಾಖಲಿಸಿ ಸಮಬಲ ಸಾಧಿಸುವಂತೆ ಮಾಡಿದರು.

ADVERTISEMENT

ಫ್ರಾಂಕ್ಲಿನ್‌ ತಲೆಗೆ ಪೆಟ್ಟು: ಐಟಿ ತಂಡದ ಫ್ರಾಂಕ್ಲಿನ್‌ ತರುಣ್ ಅಮಲ್‌ರಾಜ್ ಪಂದ್ಯದ ದ್ವಿತೀಯಾರ್ಧದಲ್ಲಿ ರೆಹಬರ್‌ಗೆ ಡಿಚ್ಚಿ ಹೊಡೆದು ತಲೆಗೆ ಗಾಯಗೊಂಡು ಆಸ್ಪತ್ರೆ ಸೇರಿದರು. ಸಿಟಿ ಸ್ಕ್ಯಾನ್‌ಗೆ ಒಳಪಡಿಸಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ತಂಡದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.