ADVERTISEMENT

ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ರಾಜ್ಯದ ವನಿತೆಯರಿಗೆ ‘ಹ್ಯಾಟ್ರಿಕ್‌’ ಗರಿ

ಫೆಡರೇಷನ್‌ ಕಪ್‌ ರಾಷ್ಟ್ರೀಯ ಬಾಲ್‌ ಬ್ಯಾಡ್ಮಿಂಟನ್‌

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2018, 15:32 IST
Last Updated 27 ಅಕ್ಟೋಬರ್ 2018, 15:32 IST
ಫೆಡರೇಷನ್‌ ಕಪ್‌ ರಾಷ್ಟ್ರೀಯ ಬಾಲ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ ಕರ್ನಾಟಕ ತಂಡದವರು ಟ್ರೋಫಿಯೊಂದಿಗೆ ಸಂಭ್ರಮಿಸಿದರು. (ಎಡದಿಂದ) ಆರ್‌.ಚಂದನಾ, ಬಿ.ಎಸ್‌.ಪಲ್ಲವಿ, ಭಾವನಾ ಸಾವಂತ್‌, ಎಂ.ಎಂ.ಕವನ, ಜಿ.ಜಯಲಕ್ಷ್ಮಿ, ಬಿ.ಡಿ.ಲಾವಣ್ಯ, ಎಂ.ಎಸ್‌.ದಿವ್ಯಾ, ಗಾಯತ್ರಿ, ಜಿ.ಆರ್‌.ಮುಕ್ತಾ ಮತ್ತು ಸಿಂಧುಜಾ
ಫೆಡರೇಷನ್‌ ಕಪ್‌ ರಾಷ್ಟ್ರೀಯ ಬಾಲ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ ಕರ್ನಾಟಕ ತಂಡದವರು ಟ್ರೋಫಿಯೊಂದಿಗೆ ಸಂಭ್ರಮಿಸಿದರು. (ಎಡದಿಂದ) ಆರ್‌.ಚಂದನಾ, ಬಿ.ಎಸ್‌.ಪಲ್ಲವಿ, ಭಾವನಾ ಸಾವಂತ್‌, ಎಂ.ಎಂ.ಕವನ, ಜಿ.ಜಯಲಕ್ಷ್ಮಿ, ಬಿ.ಡಿ.ಲಾವಣ್ಯ, ಎಂ.ಎಸ್‌.ದಿವ್ಯಾ, ಗಾಯತ್ರಿ, ಜಿ.ಆರ್‌.ಮುಕ್ತಾ ಮತ್ತು ಸಿಂಧುಜಾ   

ಬೆಂಗಳೂರು: ಕರ್ನಾಟಕದ ಬಾಲಕಿಯರ ತಂಡದವರು ಫೆಡರೇಷನ್‌ ಕಪ್‌ ರಾಷ್ಟ್ರೀಯ ಬಾಲ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ‘ಹ್ಯಾಟ್ರಿಕ್‌’ ಪ್ರಶಸ್ತಿ ಗೆದ್ದು ದಾಖಲೆ ಬರೆದಿದ್ದಾರೆ.

ಭಾರತ ಬಾಲ್‌ ಬ್ಯಾಡ್ಮಿಂಟನ್‌ ಫೆಡರೇಷನ್‌ ಮತ್ತು ತಮಿಳುನಾಡು ಬಾಲ್‌ ಬ್ಯಾಡ್ಮಿಂಟನ್‌ ಸಂಸ್ಥೆಯ ಸಹಯೋಗದಲ್ಲಿ ತಮಿಳುನಾಡಿನ ದಿಂಡಿಗಲ್‌ನಲ್ಲಿ ನಡೆದ ಆರನೇ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡ ಕಿರೀಟ ಮುಡಿಗೇರಿಸಿಕೊಂಡು ಈ ಸಾಧನೆ ಮಾಡಿದೆ.

ಪಿ.ಎಸ್‌.ಎನ್‌.ಎ. ಕಾಲೇಜಿನ ಮೈದಾನದಲ್ಲಿ ಶುಕ್ರವಾರ ನಡೆದ ಫೈನಲ್‌ನಲ್ಲಿ ಕರ್ನಾಟಕ 32–35, 35–30, 35–26ರಲ್ಲಿ ಆತಿಥೇಯ ತಮಿಳುನಾಡು ತಂಡವನ್ನು ಮಣಿಸಿತು.

ADVERTISEMENT

ಮೊದಲ ಸೆಟ್‌ನಲ್ಲಿ ಉಭಯ ತಂಡಗಳೂ ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಹೀಗಾಗಿ ಕುತೂಹಲ ಗರಿಗೆದರಿತ್ತು. ಒತ್ತಡದ ಪರಿಸ್ಥಿತಿಯಲ್ಲಿ ದಿಟ್ಟ ಆಟ ಆಡಿದ ತಮಿಳುನಾಡು ಗೆದ್ದಿತು.

ಇದರಿಂದ ಕರ್ನಾಟಕದ ವನಿತೆಯರು ಎದೆಗುಂದಲಿಲ್ಲ. ಜಿ.ಜಯಲಕ್ಷ್ಮಿ ಬಳಗ ಎರಡನೇ ಸೆಟ್‌ನಲ್ಲಿ ಮೋಡಿ ಮಾಡಿ 1–1ರಲ್ಲಿ ಸಮಬಲ ಸಾಧಿಸಿತು. ನಿರ್ಣಾಯಕ ಎನಿಸಿದ್ದ ಮೂರನೇ ಸೆಟ್‌ನಲ್ಲೂ ರಾಜ್ಯದ ಆಟಗಾರ್ತಿಯರು ಪರಿಣಾಮಕಾರಿ ಸಾಮರ್ಥ್ಯ ತೋರಿ ಗೆಲುವಿನ ತೋರಣ ಕಟ್ಟಿದರು.

ಇದಕ್ಕೂ ಮೊದಲು ನಡೆದಿದ್ದ ಸೆಮಿಫೈನಲ್‌ ಹೋರಾಟಗಳಲ್ಲಿ ಕರ್ನಾಟಕ 35–18, 35–23ರಲ್ಲಿ ಬಿಹಾರ ಎದುರೂ, ತಮಿಳುನಾಡು 35–21, 35–26ರಲ್ಲಿ ಆಂಧ್ರಪ್ರದೇಶ ವಿರುದ್ಧವೂ ಗೆದ್ದಿದ್ದವು.

ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಆರು, ಬೆಂಗಳೂರಿನ ಜಯ ಸ್ಪೋರ್ಟ್ಸ್‌ ಕ್ಲಬ್‌ನ ಇಬ್ಬರು, ಬೆಂಗಳೂರಿನ ಬಿಎಂಎಸ್‌ ಕಾಲೇಜು ಮತ್ತು ತುಮಕೂರಿನ ಎಸ್‌.ಬಿ.ಬಿ.ಸಿ ಕಾಲೇಜಿನ ತಲಾ ಒಬ್ಬರು ರಾಜ್ಯ ತಂಡದಲ್ಲಿ ಆಡಿದ್ದರು. ಜಿ.ಜಯಲಕ್ಷ್ಮಿ ಅವರು ಚಾಂಪಿಯನ್‌ಷಿಪ್‌ನ ಶ್ರೇಷ್ಠ ಆಟಗಾರ್ತಿ ಗೌರವ ಗಳಿಸಿದರು.

ಪುರುಷರ ವಿಭಾಗದಲ್ಲಿ ಕರ್ನಾಟಕ ತಂಡ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿತು.

ದಕ್ಷಿಣ ವಲಯದಲ್ಲೂ ಚಾಂಪಿಯನ್‌: ಇತ್ತೀಚೆಗೆ ನಡೆದಿದ್ದ ದಕ್ಷಿಣ ವಲಯ ಬಾಲ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲೂ ಬಾಲಕಿಯರ ತಂಡ ‘ಹ್ಯಾಟ್ರಿಕ್‌’ ಪ್ರಶಸ್ತಿಯ ಸಾಧನೆ ಮಾಡಿತ್ತು.

ಫೈನಲ್‌ನಲ್ಲಿ ರಾಜ್ಯ ತಂಡ 35–33, 32–35, 35–22ರಲ್ಲಿ ತಮಿಳುನಾಡು ತಂಡವನ್ನು ಸೋಲಿಸಿತ್ತು.

ಪುರುಷರ ತಂಡದವರು ಮೂರನೇ ಸ್ಥಾನ ಗಳಿಸಿದ್ದರು.

ಅಭಿನಂದನೆ: ಫೆಡರೇಷನ್‌ ಕಪ್‌ ಮತ್ತು ದಕ್ಷಿಣ ವಲಯ ಚಾಂಪಿಯನ್‌ಷಿಪ್‌ನಲ್ಲಿ ‘ಹ್ಯಾಟ್ರಿಕ್‌’ ಪ್ರಶಸ್ತಿ ಗೆದ್ದು ದಾಖಲೆ ಬರೆದಿರುವ ಬಾಲಕಿಯರ ತಂಡವನ್ನು ಕರ್ನಾಟಕ ರಾಜ್ಯ ಬಾಲ್‌ ಬ್ಯಾಡ್ಮಿಂಟನ್‌ ಸಂಸ್ಥೆಯ ಕಾರ್ಯದರ್ಶಿ ದಿನೇಶ್‌ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.