ADVERTISEMENT

ಬ್ಯಾಸ್ಕೆಟ್‌ಬಾಲ್: ಜೋರ್ಡಾನ್‌ಗೆ ಮಣಿದ ಭಾರತ

ಫಿಬಾ ವಿಶ್ವಕಪ್‌ ಏಷ್ಯನ್‌ ಅರ್ಹತಾ ಬ್ಯಾಸ್ಕೆಟ್‌ಬಾಲ್ ಟೂರ್ನಿ

ಬಸವರಾಜ ದಳವಾಯಿ
Published 24 ಫೆಬ್ರುವರಿ 2023, 22:30 IST
Last Updated 24 ಫೆಬ್ರುವರಿ 2023, 22:30 IST
ಭಾರತ ತಂಡದ ಪಿಯೂಷ್ ಮೀನಾ ಮತ್ತು ಜೋರ್ಡಾನ್‌ನ ಅಮಿನ್ ಅಬು ಹವ್ವಾಸ್ ನಡುವೆ ಚೆಂಡಿಗಾಗಿ ಪೈಪೋಟಿ
ಭಾರತ ತಂಡದ ಪಿಯೂಷ್ ಮೀನಾ ಮತ್ತು ಜೋರ್ಡಾನ್‌ನ ಅಮಿನ್ ಅಬು ಹವ್ವಾಸ್ ನಡುವೆ ಚೆಂಡಿಗಾಗಿ ಪೈಪೋಟಿ   

ಬೆಂಗಳೂರು: ಉತ್ತಮ ಹೋರಾಟದ ಮಧ್ಯೆಯೂ ಭಾರತ ತಂಡದವರು ಫಿಬಾ ವಿಶ್ವಕಪ್‌ ಏಷ್ಯನ್ ಅರ್ಹತಾ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಜೋರ್ಡಾನ್ ತಂಡದ ಎದುರು ನಿರಾಸೆ ಅನುಭವಿಸಿದರು.

ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಇ ಗುಂಪಿನ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತ 63–98ರಿಂದ ಜೋರ್ಡಾನ್ ತಂಡಕ್ಕೆ ಮಣಿಯಿತು. ಜೋರ್ಡಾನ್ ಪರ ಫ್ರೆಡ್ಡಿ ಇಬ್ರಾಹಿಂ 21 ಪಾಯಿಂಟ್ಸ್ ಗಳಿಸಿ ಗೆಲುವಿನ ರೂವಾರಿ ಎನಿಸಿದರು. ಭಾರತದ ಅರವಿಂದ್‌ ಕುಮಾರ್ ಮುತ್ತುಕೃಷ್ಣನ್‌ (19 ಪಾಯಿಂಟ್ಸ್) ಅವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ.

ಆರಂಭದಲ್ಲಿ ಉಭಯ ತಂಡಗಳ ಮಧ್ಯೆ ತೀವ್ರ ಪೈಪೋಟಿ ಕಂಡುಬಂತು. ಮುಯಿನ್‌ ಬೆಕ್‌ ಹಫೀಜ್‌ ನಾಯಕತ್ವದ ಆತಿಥೇಯ ತಂಡದವರು ಹಲವು ಬಾರಿ ಎದುರಾಳಿಯ ಬ್ಯಾಸ್ಕೆಟ್‌ ಕಡೆಗೆ ಚೆಂಡನ್ನು ಕೊಂಡೊಯ್ದರು. ಆದರೆ ಪಾಯಿಂಟ್ಸ್ ಗಳಿಸುವಲ್ಲಿ ಹೆಚ್ಚು ಯಶಸ್ಸು ಕಾಣಲಿಲ್ಲ. ಮೊದಲ ಕ್ವಾರ್ಟರ್‌ನಲ್ಲಿ ಜೋರ್ಡಾನ್‌ 30–14ರಿಂದ ಮುನ್ನಡೆ ಗಳಿಸಿತು. ಎರಡನೇ ಕ್ವಾರ್ಟರ್‌ನಲ್ಲಿ ಜೋರ್ಡಾನ್‌ ಮತ್ತಷ್ಟು ಶ್ರೇಷ್ಠ ಸಾಮರ್ಥ್ಯ ತೋರಿತು. ಭಾರತ ತಂಡದವರ ತಪ್ಪುಗಳ ಲಾಭ ಪಡೆದು 33–7 ಪಾಯಿಂಟ್ಸ್‌ನಿಂದ ಮೇಲುಗೈ ಸಾಧಿಸಿತು.

ADVERTISEMENT

ಮೂರನೇ ಕ್ವಾರ್ಟರ್‌ನಲ್ಲಿ ಭಾರತ ಚುರುಕಿನ ಆಟದ ಮೂಲಕ ತಿರುಗೇಟು ನೀಡಿತು. ಅಸಿಸ್ಟ್‌ಗಳಲ್ಲಿ ಹೆಚ್ಚು ಹೊಂದಾಣಿಕೆ ತೋರಿದ ಆತಿಥೇಯ ತಂಡದವರು 25–20ರಿಂದ ಮುನ್ನಡೆ ಪಡೆದರು. ನಾಲ್ಕನೇ ಕ್ವಾರ್ಟರ್‌ನಲ್ಲೂ ಉಭಯ ತಂಡಗಳ ನಡುವೆ ತೀವ್ರ ಹೋರಾಟ ನಡೆಯಿತು. ಆದರೆ ಜೋರ್ಡಾನ್‌ 17–15 ಅಲ್ಪ ಅಂತರದಿಂದ ಮುನ್ನಡೆ ತನ್ನದಾಗಿಸಿಕೊಂಡಿತು. ಜೋರ್ಡಾನ್‌ ಈಗಾಗಲೇ ವಿಶ್ವಕಪ್‌ ಅರ್ಹತೆ ಗಳಿಸಿದ್ದರಿಂದ ಈ ಪಂದ್ಯ ಔಪಚಾರಿಕವಾಗಿತ್ತು. ಭಾರತ ಅರ್ಹತೆ ಗಳಿಸಲು ವಿಫಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.