ADVERTISEMENT

ಅರ್ಜುನ ಪ್ರಶಸ್ತಿ ಪುರಸ್ಕೃತ ರ‍್ಯಾಲಿ ಪಟು ಗೌರವ್‌ ಗಿಲ್‌ ವಿರುದ್ಧ ಎಫ್‌ಐಆರ್‌

ಪಿಟಿಐ
Published 22 ಸೆಪ್ಟೆಂಬರ್ 2019, 15:55 IST
Last Updated 22 ಸೆಪ್ಟೆಂಬರ್ 2019, 15:55 IST
ರ‍್ಯಾಲಿ ಪಟು ಗೌರವ್‌ ಗಿಲ್‌
ರ‍್ಯಾಲಿ ಪಟು ಗೌರವ್‌ ಗಿಲ್‌   

ಬಾರ್ಮೆರ್‌: ರಾಷ್ಟ್ರೀಯ ರ್‍ಯಾಲಿ ಚಾಂಪಿಯನ್‌ಷಿಪ್‌ ವೇಳೆ ನಡೆದ ಅಪಘಾತಕ್ಕೆ ಸಂಬಂಧಿಸಿ ಅರ್ಜುನ ಪ್ರಶಸ್ತಿ ಪುರಸ್ಕೃತ ರ‍್ಯಾಲಿ ಪಟು ಗೌರವ್‌ ಗಿಲ್‌ ಮತ್ತು ಇನ್ನೊಬ್ಬ ಚಾಲಕನ ಮೇಲೆ ಭಾನುವಾರ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ರ‍್ಯಾಲಿಯಲ್ಲಿ ಗಿಲ್‌ ಅವರ ಕಾರು ವೇಗವಾಗಿ ಸಾಗುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ದಂಪತಿ ಮತ್ತು ಅವರ ಕಿರಿಯ ಪುತ್ರ ಮೃತಪಟ್ಟಿದ್ದರು. ದೂರಿನಲ್ಲಿ ಇವರ ಜೊತೆ ರ‍್ಯಾಲಿ ಆಯೋಜಕರಾದ ಮ್ಯಾಕ್ಸ್‌ಪೀರಿಯನ್ಸ್‌, ಮಹೀಂದ್ರಾ, ಜೆ.ಕೆ.ಟೈರ್ಸ್‌, ಎಂಆರ್‌ಎಫ್‌ ಟೈರ್ಸ್‌ ಮತ್ತು ಫೆಡರೇಷನ್‌ ಆಫ್‌ ಮೋಟಾರ್‌ ಸ್ಪೋರ್ಟ್ಸ್‌ ಕ್ಲಬ್‌ ಆಫ್‌ ಇಂಡಿಯಾ ಹೆಸರು ಕೂಡ ಎಫ್‌ಐಆರ್‌ನಲ್ಲಿ ಇದೆ ಎಂದು ಎಎಸ್‌ಪಿ ಖಿನ್ವ ಸಿಂಗ್‌ ತಿಳಿಸಿದ್ದಾರೆ. ಜೋಧಪುರದಲ್ಲಿ ಈ ರ್‍ಯಾಲಿ ಆರಂಭವಾಗಿತ್ತು.

ನತದೃಷ್ಟ ದಂಪತಿಯ ಹಿರಿಯ ಪುತ್ರ ರಾಹುಲ್ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದು, ಸಮ್ದಾರಿ ಪೊಲೀಸ್‌ ಠಾಣೆಯಲ್ಲಿ ರಾತ್ರಿ 2 ಗಂಟೆಗೆ ಪ್ರಕರಣ ದಾಖಲಾಗಿದೆ. ‘ನನ್ನ ತಂದೆ ತಾಯಿ ರಸ್ತೆ ಬದಿ ಕಿರಿಯ ಸೋದರನ ಜೊತೆ ಮಾತನಾಡುತ್ತಿದ್ದಾಗ ಗಿಲ್‌ ಅವರ ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ಹಿಂಬಾಲಿಸಿಕೊಂಡು ಬರುತ್ತಿದ್ದ ಮತ್ತೆರಡು ಕಾರುಗಳೂ ಅವರ ಮೇಲೆ ಹರಿದುಹೋಗಿವೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಗಿಲ್‌ ಮತ್ತು ಚಾಲಕ ಮೂಸಾ ಷರೀಫ್‌ ವಿರುದ್ಧ ಪ್ರಕರಣ ದಾಖಲಾಗಿದೆ.

ನರೇಂದ್ರ ಕುಮಾರ್‌, ಅವರ ಪತ್ನಿ ಪುಷ್ಪಾ ದೇವಿ ಮತ್ತು ಪುತ್ರ ಜಿತೇಂದ್ರ ಮೃತಪಟ್ಟಿದ್ದರು.‘ಪರಿಹಾರ ನೀಡಬೇಕು, ಸಂತ್ರಸ್ತರ ಸಂಬಂಧಿಗೆ ಸರ್ಕಾರಿ ಹುದ್ದೆ ನೀಡಬೇಕು ಮತ್ತು ಆರೋಪಿಯನ್ನು ಬಂಧಿಸುವವರೆಗೆ ಮೃತದೇಹ ತೆಗೆಯಲು ಬಿಡುವುದಿಲ್ಲ’ ಎಂದು ಬಂಧುಗಳು ಮತ್ತು ಗ್ರಾಮಸ್ಥರು ಪಟ್ಟುಹಿಡಿದು ಬಹಳ ಹೊತ್ತಿನವರೆಗೆ ಪ್ರತಿಭಟನೆ ನಡೆಸಿದ್ದಾರೆ. ‘ಅಪಘಾತ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ. ರ‍್ಯಾಲಿ ಆಯೋಜಕರು ಸಹಕರಿಸುತ್ತಿಲ್ಲ. ಸ್ಥಳಕ್ಕೆ ಇನ್ನೂ ಬಂದಿಲ್ಲ’ ಎಂದು ಠಾಣೆಯ ಸಿಬ್ಬಂದಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.