ADVERTISEMENT

ಪ್ರೊ ಲೀಗ್ ಹಾಕಿ ಟೂರ್ನಿ: ಭಾರತ ತಂಡಕ್ಕೆ ನಾಯಕಿಯಾಗಿ ಸವಿತಾ ಮುಂದುವರಿಕೆ

ತಂಡಕ್ಕೆ ಮರಳಿದ ರಾಣಿ ರಾಂಪಾಲ್‌

ಪಿಟಿಐ
Published 5 ಏಪ್ರಿಲ್ 2022, 13:06 IST
Last Updated 5 ಏಪ್ರಿಲ್ 2022, 13:06 IST
ಸವಿತಾ ಪೂನಿಯಾ –ಪಿಟಿಐ ಚಿತ್ರ
ಸವಿತಾ ಪೂನಿಯಾ –ಪಿಟಿಐ ಚಿತ್ರ   

ನವದೆಹಲಿ: ಗಾಯದಿಂದ ಬಳಲುತ್ತಿದ್ದ ರಾಣಿ ರಾಂಪಾಲ್ ಚೇತರಿಸಿಕೊಂಡಿದ್ದು, ಭಾರತ ತಂಡಕ್ಕೆ ಮರಳಿದ್ದಾರೆ. ನೆದರ್ಲೆಂಡ್ಸ್ ಎದುರಿನ ಎಫ್‌ಐಎಚ್‌ ಪ್ರೊ ಲೀಗ್‌ ಪಂದ್ಯಗಳಿಗೆ ಮಹಿಳಾ ಹಾಕಿ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದ್ದು, ಸವಿತಾ ಪೂನಿಯಾ ನಾಯಕಿಯಾಗಿ ಮುಂದುವರಿಯಲಿದ್ದಾರೆ.

ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಇದೇ ಶುಕ್ರವಾರ ಮತ್ತು ಶನಿವಾರ ಪಂದ್ಯಗಳು ನಿಗದಿಯಾಗಿದ್ದು, ಮಿಡ್‌ಫೀಲ್ಡರ್‌ ಮಹಿಮಾ ಚೌಧರಿ ಮತ್ತು ಸ್ಟ್ರೈಕರ್‌ ಐಶ್ವರ್ಯ ರಾಜೇಶ್ ಚೌಹಾನ್ ಭಾರತ ತಂಡದಲ್ಲಿರುವ ಹೊಸಮುಖಗಳಾಗಿವೆ.

ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವು ರಾಣಿ ರಾಂಪಾಲ್ ಸಾರಥ್ಯದಲ್ಲಿ ಐತಿಹಾಸಿಕ ನಾಲ್ಕನೇ ಸ್ಥಾನ ಗಳಿಸಿತ್ತು. ಮಂಡಿರಜ್ಜು ಮತ್ತಿತರ ಗಾಯಗಳಿಂದಾಗಿ ರಾಣಿ ಅವರು ಒಲಿಂಪಿಕ್ಸ್‌ ಬಳಿಕ ಯಾವುದೇ ಪಂದ್ಯದಲ್ಲಿ ಆಡಿರಲಿಲ್ಲ. ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್‌) ದಕ್ಷಿಣ ಕೇಂದ್ರ ಬೆಂಗಳೂರಿನ ಶಿಬಿರದಲ್ಲಿದ್ದ ಅವರು ಈಗ ಫಿಟ್ ಆಗಿದ್ದು ತಂಡದ ಪರ ಆಡಲು ಸಜ್ಜಾಗಿದ್ದಾರೆ.

ADVERTISEMENT

ಭಾರತ ತಂಡವು ಎಫ್‌ಐಎಚ್‌ ಪ್ರೊ ಲೀಗ್‌ನಲ್ಲಿ ಇದುವರೆಗೆ ಆರು ಪಂದ್ಯಗಳನ್ನು ಆಡಿದ್ದು, 12 ಪಾಯಿಂಟ್ಸ್‌ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ನೆದರ್ಲೆಂಡ್ಸ್ ಪಾಯಿಂಟ್ಸ್ ಪಟ್ಟಿಯಲ್ಲೂ ಮೊದಲ ಸ್ಥಾನದಲ್ಲಿದೆ. ಆ ತಂಡದ ಬಳಿ ಸದ್ಯ 17 ಪಾಯಿಂಟ್‌ಗಳಿವೆ.

ತಂಡ ಇಂತಿದೆ: ಗೋಲ್‌ಕೀಪರ್ಸ್‌: ಸವಿತಾ (ನಾಯಕಿ), ರಜನಿ ಎತಿಮರ್ಪು.

ಡಿಫೆಂಡರ್ಸ್: ದೀಪ್ ಗ್ರೇಸ್ ಎಕ್ಕಾ (ಉಪನಾಯಕಿ), ಗುರ್ಜಿತ್ ಕೌರ್, ನಿಕ್ಕಿ ಪ್ರಧಾನ್, ಉದಿತಾ, ರಶ್ಮಿತಾ ಮಿಂಜ್, ಸುಮನ್ ದೇವಿ ತೌಡಮ್.

ಮಿಡ್‌ಫೀಲ್ಡರ್ಸ್: ನಿಶಾ, ಸುಶೀಲಾ ಚಾನು ಪುಖ್ರಂಬಮ್, ಜ್ಯೋತಿ, ನವಜೋತ್ ಕೌರ್, ಮೋನಿಕಾ, ನಮಿತಾ ಟೊಪ್ಪೊ, ಸೋನಿಕಾ, ನೇಹಾ, ಮಹಿಮಾ ಚೌಧರಿ.

ಫಾರ್ವರ್ಡ್ಸ್: ಐಶ್ವರ್ಯ ರಾಜೇಶ್ ಚವಾಣ್, ನವನೀತ್ ಕೌರ್, ರಾಜ್ವಿಂದರ್‌ ಕೌರ್, ರಾಣಿ ರಾಂಪಾಲ್, ಮರಿಯಾನಾ ಕುಜೂರ್.

ಕಾಯ್ದಿರಿಸಿದ ಆಟಗಾರ್ತಿಯರು: ಉಪಾಸನಾ ಸಿಂಗ್, ಪ್ರೀತಿ ದುಬೆ, ವಂದನಾ ಕಟಾರಿಯಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.