ಬ್ಯಾಂಕಾಕ್ : ನೀರಜ್, ಇಶಾನ್ ಕಟಾರಿಯಾ, ಯಾತ್ರಿ ಪಟೇಲ್ ಮತ್ತು ಪ್ರಿಯಾ ಅವರು ಬುಧವಾರ ಇಲ್ಲಿ ನಡೆದ 19 ಮತ್ತು 22 ವರ್ಷದೊಳಗಿನ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಿದರು. ನಾಲ್ವರು ಮಹಿಳೆಯರು ಸೇರಿದಂತೆ ಎಂಟು ಬಾಕ್ಸರ್‌ಗಳು ಕಂಚಿನ ಪದಕ ಗೆದ್ದರು.
ಪುರುಷರ 75 ಕೆ.ಜಿ ವಿಭಾಗದ ಸೆಮಿಫೈನಲ್‌ನಲ್ಲಿ ನೀರಜ್ ಅವರು 5–0 ಅಂತರದಿಂದ ದಕ್ಷಿಣ ಕೊರಿಯಾದ ಕಿಯೊಂಗೊ ಬ್ಯಾಂಗ್ ಅವರನ್ನು ಮಣಿಸಿದರು. 90+ ಕೆ.ಜಿ ವಿಭಾಗದಲ್ಲಿ ಇಶಾನ್ ಅವರು ಚೀನಾದ ಚೆನ್ ಚೆನ್ ಅವರಿಗೆ ಬಲವಾದ ಪಂಚ್ ನೀಡಿ ಪಾರಮ್ಯ ಮೆರೆದರು.
ಮಹಿಳೆಯರ 57 ಕೆ.ಜಿ ವಿಭಾಗದಲ್ಲಿ ಯಾತ್ರಿ ಪಟೇಲ್ ಅವರು ವಿಯೆಟ್ನಾಂನ ಥಿ ನುಂಗ್ ಕ್ವಾಂಡ್ ವಿರುದ್ಧ 5–0ರ ಸರ್ವಾನುಮತದ ತೀರ್ಪಿನಿಂದ ಫೈನಲ್ ತಲುಪಿದರು. 60 ಕೆ.ಜಿ ವಿಭಾಗದಲ್ಲಿ ಪ್ರಿಯಾ ಅವರು ಉಜ್ಬೇಕಿಸ್ತಾನದ ಒಡಿನಖೋನ್ ಇಸ್ಮೊಯಿಲೋವಾ ವಿರುದ್ಧ ಗೆಲುವು ಸಾಧಿಸಿದರು.
ನಾಲ್ವರಿಗೆ ಕಂಚು: ಪುರುಷರ ವಿಭಾಗದಲ್ಲಿ ರಾಕಿ ಚೌಧರಿ, ಹರ್ಷ್, ಮಯೂರ್ ಮತ್ತು ಅಂಕುಶ್ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಮಹಿಳೆಯರ ವಿಭಾಗದಲ್ಲಿ ಭಾವನಾ ಶರ್ಮಾ, ಗ್ರೆವಾಲ್, ಪ್ರಾಂಜಲ್ ಯಾದವ್ ಮತ್ತು ಶೃತಿ ಕಂಚು ಗೆದ್ದರು.
ಪುರುಷರ 85 ಕೆ.ಜಿ ವಿಭಾಗದ ಸೆಮಿಫೈನಲ್‌ನಲ್ಲಿ ಚೌಧರಿ ಅವರು ಇರಾನ್‌ನ ಸ್ಯಾಮ್ ಎಸ್ಟಾಕಿ ವಿರುದ್ಧ ಸ್ಪರ್ಧಿಸುವಾಗ ಮೊಣಗೈಗೆ ಗಾಯಗೊಂಡು ಸ್ಪರ್ಧೆಯಿಂದ ಹಿಂದೆ ಸರಿದರು. ಹರ್ಷ್ (60 ಕೆಜಿ) ಉಜ್ಬೇಕಿಸ್ತಾನನ ಶೋಹ್ರುಹ್ ಅಬ್ದುಮಾಲಿಕೋವ್ ವಿರುದ್ಧ; ಮಯೂರ್ (90 ಕೆಜಿ) ಶಖ್ಜೋದ್ ಪೋಲ್ವೊನೊವ್ (ಉಜ್ಬೇಕಿಸ್ತಾನ) ವಿರುದ್ಧ ಪರಾಭವಗೊಂಡರು. ಅಂಕುಶ್ ಅವರು ಕಜಕಿಸ್ತಾನದ ಸಂಝರ್ ಅಲಿ ಬೆಗಾಲಿಯೇವ್ ವಿರುದ್ಧ ಸೋತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.