ADVERTISEMENT

‘ಮಾಸ್ಟರ್‌’ ಮನದ ಮಾತು

ಅನಿಲ್ ಸಾಗರ್
Published 23 ಡಿಸೆಂಬರ್ 2018, 19:30 IST
Last Updated 23 ಡಿಸೆಂಬರ್ 2018, 19:30 IST
ಜಿ.ಎ.ಸ್ಟ್ಯಾನಿ –ಪ್ರಜಾವಾಣಿ ಚಿತ್ರಗಳು/ಶಿವಮೊಗ್ಗ ನಾಗರಾಜ್‌
ಜಿ.ಎ.ಸ್ಟ್ಯಾನಿ –ಪ್ರಜಾವಾಣಿ ಚಿತ್ರಗಳು/ಶಿವಮೊಗ್ಗ ನಾಗರಾಜ್‌   

ಕಠಿಣ ಪರಿಶ್ರಮ, ಶ್ರದ್ಧೆ ಮತ್ತು ಬದ್ಧತೆಯನ್ನು ಮೈಗೂಡಿಸಿಕೊಂಡು ಮುನ್ನಡೆದರೆ ಸಾಧನೆಯ ಶಿಖರಕ್ಕೆ ಏರಬಹುದು ಎಂಬುದಕ್ಕೆ ಜಿ.ಎ.ಸ್ಟ್ಯಾನಿ ಉತ್ತಮ ನಿದರ್ಶನ.

ಕುತೂಹಲಕ್ಕಾಗಿ ಆರಂಭಿಸಿದ ಚೆಸ್‌ ಆಟವೇ ತನಗೆ ಮುಂದೊಂದು ದಿನ ಉತ್ತಮ ಬದುಕು ಕಟ್ಟಿಕೊಡಬಲ್ಲದು, ತನ್ನನ್ನು ಅಪ್ರತಿಮರ ಸಾಲಿನಲ್ಲಿ ನಿಲ್ಲಿಸಬಹುದು ಎನ್ನುವ ಯಾವ ನಿರೀಕ್ಷೆಯೂ ಸ್ಟ್ಯಾನಿ ಅವರಿಗೆ ಇರಲಿಲ್ಲ. ಆದರೆ ಅವರಲ್ಲಿದ್ದ ಆಸಕ್ತಿ, ನಿರಂತರ ಶ್ರಮ ಇದೀಗ ಅವರನ್ನು ರಾಜ್ಯದ ಎರಡನೇ ಗ್ರ್ಯಾಂಡ್‌ ಮಾಸ್ಟರ್‌ ಪಟ್ಟಕ್ಕೇರಿಸಿದೆ.

ಪ್ರಸ್ತುತ ರಾಜ್ಯದ ನಂಬರ್‌–1 ಚೆಸ್‌ ಆಟಗಾರರಾ ಗಿರುವ ಸ್ಟ್ಯಾನಿ, ಎಳವೆಯಲ್ಲಿಯೇ ಅದ್ವಿತೀಯ ಸಾಧನೆ ಮಾಡಿ ಸಾಮರ್ಥ್ಯ ಸಾಬೀತು ಮಾಡಿದ್ದಾರೆ. ಜಾಣ್ಮೆಯ ನಡೆಗಳ ಮೂಲಕ ವಿಶ್ವದ ಬಲಿಷ್ಠ ಆಟಗಾರರನ್ನು ಮಣಿಸುವ ಕೌಶಲವನ್ನು ಕರಗತ ಮಾಡಿ ಕೊಂಡಿದ್ದಾರೆ. ಈ ಮೂಲಕ ಭರವಸೆಯ ತಾರೆಯಾಗಿ ಗೋಚರಿಸಿದ್ದಾರೆ.

ADVERTISEMENT

2017ರ ಸೆಪ್ಟೆಂಬರ್‌ನಲ್ಲಿ ಮೈಸೂರಿನ ತೇಜ್‌ ಕುಮಾರ್‌ ಗ್ರ್ಯಾಂಡ್‌ ಮಾಸ್ಟರ್‌ ಪಟ್ಟ ಅಲಂಕರಿಸಿದ್ದರು. ಅವರು ಈ ಸಾಧನೆ ಮಾಡಿದ ಕರ್ನಾಟಕದ ಮೊದಲ ಚೆಸ್‌ಪಟು ಎಂಬ ಹಿರಿಮೆಗೆ ಪಾತ್ರರಾಗಿದ್ದರು.ಇದೀಗ ಸ್ಟ್ಯಾನಿ ಅವರು ಈ ಸಾಲಿಗೆ ಸೇರಿದ್ದಾರೆ. ಅವರ ಗ್ರ್ಯಾಂಡ್‌ಮಾಸ್ಟರ್ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಹಾಗಂತ ಅವರು ಕೈಕಟ್ಟಿ ಕೂರಲಿಲ್ಲ. ಗುಣಟಮಟ್ಟದ ಆಟದ ಮೂಲಕ ಮಹಾರಾಷ್ಟ್ರದ ಪ್ರವೀಣ್‌ ತಿಪ್ಸೆ, ಕೋಲ್ಕತ್ತಾದ ದೀಪಸೇನ್ ಗುಪ್ತಾ ಹಾಗೂ ಗೋವಾದ ಅನುರಾಗ್‌ ಮಹಮಲ್ ಅವರನ್ನು ಮಣಿಸಿ ಗ್ರ್ಯಾಂಡ್‌ ಮಾಸ್ಟರ್‌ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಅವರು ತಮ್ಮ ಸಾಧನೆಯ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.

* ಗ್ರ್ಯಾಂಡ್‌ ಮಾಸ್ಟರ್‌ ಕಿರೀಟ ಮುಡಿಗೇರಿಸಿ ಕೊಂಡಿದ್ದೀರಿ. ಈ ಸಾಧನೆಯ ಬಗ್ಗೆ ಏನಂತೀರಿ?

ಎಳವೆಯಿಂದಲೇ ಸಾಧಿಸುವ ಛಲ ಮೈಗೂಡಿಸಿಕೊಂಡು ಬಂದಿದ್ದೇನೆ. ಹೀಗಾಗಿ ಗ್ರ್ಯಾಂಡ್‌ ಮಾಸ್ಟರ್‌ ಕಿರೀಟ ಒಲಿದಿದೆ. ಇದು ಜೀವನದ ಅವಿಸ್ಮರಣೀಯ ಕ್ಷಣ. ಈ ಸಾಧನೆಯ ಹಿಂದೆ ಅಪ್ಪ ಅಂಥೋಣಿ ಜ್ಞಾನಪ್ರಕಾಶ್‌ ಅವರ ಶ್ರಮ, ಪ್ರೋತ್ಸಾಹ ಸಾಕಷ್ಟಿದೆ. ಆದರೆ ಈ ಅಮೂಲ್ಯ ಕ್ಷಣವನ್ನು ನೋಡಲು ಅವರಿಲ್ಲದಿರುವುದು ಬೇಸರ ತರಿಸಿದೆ. ಅವರು ಇದ್ದಿದ್ದರೆ ತುಂಬಾ ಖುಷಿಪಡುತ್ತಿದ್ದರು.

* ಚೆಸ್‌ ಆಟದ ಬಗ್ಗೆ ಆಸಕ್ತಿ ಬೆಳೆದದ್ದು ಹೇಗೆ?

ಒಮ್ಮೆ ಬೇಸಿಗೆ ರಜೆಯಲ್ಲಿ ಚಿಕ್ಕಪ್ಪ ನಮ್ಮ ಮನೆಗೆ ಬಂದಿದ್ದರು. ಆಗ ಅವರು ಅಣ್ಣ ಟೋನಿ ಜೊತೆ ನಿತ್ಯವೂ ಚೆಸ್‌ ಆಡುತ್ತಿದ್ದರು. ಅವರ ಆಟ ನೋಡುತ್ತಾ ನನ್ನಲ್ಲೂ ಆಸಕ್ತಿ ಮೂಡಿತು. ಕುತೂಹಲ ಕ್ಕೆಂದು ಅವರೊಂದಿಗೆ ಆಡಲು ಶುರುಮಾಡಿದೆ. ಕೆಲ ದಿನಗಳ ಬಳಿಕ ಮೂವರ ನಡುವೆ ಪಂದ್ಯ ನಡೆಯಿತು. ಆಗ ಇಬ್ಬರನ್ನೂ ಸೋಲಿಸಿದ್ದೆ. ನನ್ನ ಆಟವನ್ನು ಮೆಚ್ಚಿಕೊಂಡ ಅವರು ಚೆಸ್‌ ಆಡು ವುದನ್ನು ಮುಂದುವರಿಸು ಎಂದು ಸಲಹೆ ನೀಡಿದರು. ನಂತರ ಅಮ್ಮ ಪಿ.ಜಿ.ಲಿಜಿ, ಚೆಸ್ ಅಕಾಡೆಮಿಗೆ ಸೇರಿಸಿದರು. ಆರಂಭದಲ್ಲಿ ಶ್ರೀಕೃಷ್ಣ ಉಡುಪ ಅವರ ಬಳಿ ತರಬೇತಿ ಪಡೆದೆ. ಅವರು ನನ್ನ ಪ್ರತಿಭೆಗೆ ಸಾಣೆ ಹಿಡಿಯುವ ಕೆಲಸ ಮಾಡಿದರು. ಅವರು ಕಲಿಸಿಕೊಟ್ಟ ತಂತ್ರಗಳನ್ನು ಶ್ರದ್ಧೆಯಿಂದ ಕಲಿತು ಮೈಗೂಡಿಸಿಕೊಂಡೆ.

* ಮೊದಲಿನಿಂದಲೂ ಭಾರತದಲ್ಲಿಯೇ ಆಡಿ ದ್ದರೆ ಗ್ರ್ಯಾಂಡ್‌ ಮಾಸ್ಟರ್‌ ನಾರ್ಮ್‌ ಬೇಗನೇ ಪೂರೈಸಬಹುದಿತ್ತಲ್ಲವೇ?

ಈ ಹಿಂದೆ ಭಾರತದಲ್ಲಿ ಚೆಸ್‌ಗೆ ಅಷ್ಟೊಂದು ಉತ್ತೇಜನ ಇರಲಿಲ್ಲ. ಚೆಸ್‌ ಆಟ ಕೂಡ ಅಷ್ಟೊಂದು ಅಭಿವೃದ್ಧಿಯಾಗಿರಲಿಲ್ಲ. ಹಾಗಾಗಿ ಅನಿವಾರ್ಯವಾಗಿ ವಿದೇಶಗಳಲ್ಲಿ ಆಡಬೇಕಾಯಿತು. ಇತ್ತೀಚೆಗೆ ಭಾರತ ದಲ್ಲಿ ಚೆಸ್‌ ಹೆಚ್ಚು ಅಭಿವೃದ್ಧಿಯಾಗುತ್ತಿದೆ. ಹಾಗಾಗಿ ಇಲ್ಲೇ ಆಡಿ ಈ ಸಾಧನೆ ಮಾಡಿದ್ದೇನೆ.

* ಎದುರಾಳಿಗಳನ್ನು ಮಣಿಸಲು ಯಾವ ತಂತ್ರ ಅನುಸರಿಸುತ್ತೀರಾ?

ಮೊದಲು ಮನಸ್ಸನ್ನು ಹತೋಟಿಗೆ ತಂದು ಕೊಳ್ಳುತ್ತೇನೆ. ಎದುರಾಳಿಗಳು ದುರ್ಬಲ ಎಂದು ಕಂಡಾಗ ಆರಂಭದಿಂದಲೇ ಮೇಲುಗೈ ಸಾಧಿಸುತ್ತಾ ಸಾಗುತ್ತೇನೆ. ಒಮ್ಮೊಮ್ಮೆ ಆಯ್ಕೆ ಮಾಡಿಕೊಳ್ಳುವ ಕಾಯಿಗಳು ಸಹ ಗೆಲುವನ್ನು ನಿರ್ಧರಿಸುತ್ತವೆ. ಬಿಳಿ ಕಾಯಿ ಸಿಕ್ಕರೆ ಆರಂಭದಿಂದಲೇ ಮೇಲುಗೈ ಸಾಧಿಸಲು ಸಾಧ್ಯವಾಗುತ್ತದೆ. ಕಪ್ಪು ಕಾಯಿ ಸಿಕ್ಕರೆ ಮೊದಲು ರಕ್ಷಣಾತ್ಮಕವಾಗಿ ಆಡಬೇಕು. ನಂತರ ಆಕ್ರಮಣಕಾರಿ ಆಟಕ್ಕೆ ಮುಂದಾಗಬೇಕು.

* ಸಾಧನೆಗೆ ಮುಖ್ಯವಾಗಿ ಏನು ಬೇಕು?

ಮೊದಲು ಆಟದ ಬಗ್ಗೆ ಆಸಕ್ತಿ ಇರಬೇಕು. ಅನೇಕರು ಅಪ್ಪ ಅಮ್ಮನ ಒತ್ತಾಯಕ್ಕೆ ಮಣಿದು ಆಡಲು ಮುಂದಾಗುತ್ತಾರೆ. ಅಂತಹವರಿಂದ ಸಾಧನೆ ನಿರೀಕ್ಷಿಸುವುದು ಸಾಧ್ಯವಿಲ್ಲ. ಅನೇಕರಿಗೆ ಆಸಕ್ತಿ ಇದ್ದರೂ ಬೆಂಬಲ ಸಿಗದೇ ಕ್ರೀಡೆಯಿಂದ ದೂರ ಉಳಿದು ಬಿಡುತ್ತಾರೆ. ಈ ವಿಷಯದಲ್ಲಿ ನಾನು ಅದೃಷ್ಟಶಾಲಿ.

* ಯುವಕರಲ್ಲಿ ಚೆಸ್‌ ಕುರಿತು ಆಸಕ್ತಿ ಮೂಡಿಸಲು ಏನು ಮಾಡಬೇಕು?

ಚೆಸ್‌ ಆಟ ಶಿಕ್ಷಣಕ್ಕೆ ಪೂರಕವಾಗಿದೆ. ಇದರಿಂದ ಏಕಾಗ್ರತೆ, ಜಾಣ್ಮೆ ಹೆಚ್ಚುತ್ತದೆ. ಇದನ್ನು ಮೊದಲು ಪೋಷಕರು ಅರ್ಥೈಸಿಕೊಳ್ಳಬೇಕು. ಇದರಿಂದ ಶಿಕ್ಷಣಕ್ಕೆ ಯಾವುದೇ ತೊಂದರೆ ಇಲ್ಲ ಎಂಬುದನ್ನು ಅರಿಯಬೇಕು. ಇದರ ಜತೆಗೆ ಚೆಸ್‌ ಕ್ರೀಡೆಗೆ ಮತ್ತು ಸಾಧಕರಿಗೆ ಹೆಚ್ಚಿನ ಪ್ರಚಾರ, ಪ್ರೋತ್ಸಾಹ ಸಿಕ್ಕಾಗ ಮುಂದಿನ ಪೀಳಿಗೆಯವರು ಚೆಸ್‌ ನಲ್ಲಿ ತೊಡಗಿಕೊಳ್ಳಲು ಮುಂದಾಗುತ್ತಾರೆ.

* ಚೆಸ್‌ ಆಟಗಾರರಿಗೆ ರಾಜ್ಯದಿಂದ ಯಾವ ರೀತಿಯ ಸಹಕಾರವಿದೆ?

ರಾಜ್ಯದಲ್ಲಿ ಇತ್ತೀಚೆಗೆ ಚೆಸ್‌ ಆಟಗಾರರಿಗೆ ಉತ್ತಮ ಪ್ರೋತ್ಸಾಹ ಸಿಗುತ್ತಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಇಬ್ಬರು ಗ್ರ್ಯಾಂಡ್‌ ಮಾಸ್ಟರ್‌ ಹಾಗೂ ಏಳು ಮಂದಿ ಇಂಟರ್‌ನ್ಯಾಷನಲ್ ಮಾಸ್ಟರ್‌ಗಳು (ಐ.ಎಂ) ಇದ್ದಾರೆ. ಕರ್ನಾಟಕ ಚೆಸ್‌ ಸಂಸ್ಥೆಯು ಸಾಕಷ್ಟು ಬೆಂಬಲ ನೀಡುತ್ತಿದೆ. ರಾಜ್ಯದಿಂದ ಇನ್ನಷ್ಟು ಮಂದಿ ಗ್ರ್ಯಾಂಡ್‌ ಮಾಸ್ಟರ್‌ ಕಿರೀಟ ಮುಡಿಗೇರಿಸಿಕೊಳ್ಳಬೇಕೆಂದು ಶ್ರಮಿಸುತ್ತಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೂಡಾ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ.

* ನಿಮ್ಮ ಮುಂದಿನ ಗುರಿ ಏನು?

ಪ್ರಸ್ತುತ ರಾಜ್ಯದಲ್ಲಿ ನಂ.1 ರ‍್ಯಾಂಕ್‌ ಹಾಗೂ ದೇಶದಲ್ಲಿ 25ರಿಂದ 30ನೇ ರ‍್ಯಾಂಕಿಂಗ್‌ನಲ್ಲಿದ್ದೇನೆ. ಅಗ್ರ 10ರೊಳಗೆ ಬಂದರೆ ಒಲಿಂಯಾಡ್‌ನಲ್ಲಿ ಸ್ಪರ್ಧಿಸಲು ಅವಕಾಶ ಸಿಗುತ್ತದೆ. ಈ ಗುರಿಯೊಂದಿಗೆ ಕಠಿಣ ಅಭ್ಯಾಸ ನಡೆಸುತ್ತಿದ್ದೇನೆ. ಜತೆಗೆ ವಿಶ್ವದ ಅಗ್ರಗಣ್ಯ ಆಟಗಾರರು, ಗ್ರ್ಯಾಂಡ್‌ ಮಾಸ್ಟರ್‌ಗಳ ವಿರುದ್ಧ ಆಡಿ ಗೆಲ್ಲುವ ಗುರಿ ಹೊಂದಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.