ಕಾರ್ತಿಕ್ ವೆಂಕಟರಾಮನ್
ಗುರುಗ್ರಾಮ: ಅಗ್ರ ಶ್ರೇಯಾಂಕದ ಸೂರ್ಯಶೇಖರ ಗಂಗೂಲಿ ಅವರನ್ನು ಹಿಂದೆಹಾಕಿದ ಗ್ರ್ಯಾಂಡ್‌ಮಾಸ್ಟರ್ ಕಾರ್ತಿಕ್ ವೆಂಕಟರಾಮನ್ ಅವರು ಬುಧವಾರ ಮುಕ್ತಾಯಗೊಂಡ 61ನೇ ರಾಷ್ಟ್ರೀಯ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಕಳೆದ ವರ್ಷ ನವದೆಹಲಿಯಲ್ಲಿ ನಡೆದ ಕೂಟದಲ್ಲೂ ಆಂಧ್ರ ಪ್ರದೇಶದ ಆಟಗಾರ ಚಾಂಪಿಯನ್ ಆಗಿದ್ದರು.
11 ಸುತ್ತುಗಳ ನಂತರ, 24 ವರ್ಷ ವಯಸ್ಸಿನ ಕಾರ್ತಿಕ್, ಸೂರ್ಯಶೇಖರ ಗಂಗೂಲಿ ಮತ್ತು ರೈಲ್ವೇಸ್‌ನ ನೀಲಾಶ್ ಸಹಾ ತಲಾ 9 ಪಾಯಿಂಟ್ಸ್ ಸಂಗ್ರಹಿಸಿದ್ದರು. ಆದರೆ ಟೈಬ್ರೇಕ್ ಆಧಾರದಲ್ಲಿ ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದರು.
ಕಾರ್ತಿಕ್ ₹6ಲಕ್ಷ ನಗದು ಬಹುಮಾನ ಪಡೆದರೆ, ಗಂಗೂಲಿ ಮತ್ತು ಐಎಂ ನೀಲಾಶ್ ಕ್ರಮವಾಗಿ ₹5ಲಕ್ಷ, ಮತ್ತು ₹4 ಲಕ್ಷ ನಗದು ಬಹುಮಾನ ಜೇಬಿಗಿಳಿಸಿದರು.
ಒಟ್ಟು ಏಳು ಆಟಗಾರರು ತಲಾ 8.5 ಪಾಯಿಂಟ್ಸ್ ಕಲೆಹಾಕಿದರು. ರೈಲ್ವೇಸ್‌ನ ಜಿಎಂ ದೀಪ್ತಾಯನ ಘೋಷ್, ಐಎಂ ಅರಣ್ಯಕ್ ಘೋಷ್, ಗುಸ್ಸೇನ್ ಹಿಮಾಲ್ ಕ್ರಮವಾಗಿ ನಾಲ್ಕರಿಂದ ಆರರವರೆಗಿನ ಸ್ಥಾನಗಳನ್ನು ಪಡೆದರು.
ಅಂತಿಮ (11ನೇ) ಸುತ್ತಿನಲ್ಲಿ ಗಂಗೂಲಿ, ಗುಸ್ಸೇನ್ ಹಿಮಾಲ್ ಜೊತೆ ಡ್ರಾ ಮಾಡಿಕೊಳ್ಳಬೇಕಾಯಿತು. ಅರಣ್ಯಕ್ ಘೋಷ್, ಎರಡನೇ ಬೋರ್ಡ್‌ನಲ್ಲಿ ಗ್ರ್ಯಾಂಡ್‌ಮಾಸ್ಟರ್ ಎಂ.ಆರ್.ಲಲಿತ್‌ಬಾಬು (8.5) ಜೊತೆ ಡ್ರಾ ಮಾಡಿಕೊಂಡರು. ಮೂರನೇ ಬೋರ್ಡ್‌ನಲ್ಲಿ ಕಾರ್ತಿಕ್ ವೆಂಕಟರಾಮನ್, ಮಿತ್ರಬಾ ಗುಹಾ (ರೈಲ್ವೇಸ್) ಅವರನ್ನು ಸೋಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.