ADVERTISEMENT

ಚಿನ್ನದ ಹುಡುಗ ಪ್ರದೀಪ

ಮಹೇಶ ಕನ್ನೇಶ್ವರ
Published 24 ಮಾರ್ಚ್ 2019, 20:00 IST
Last Updated 24 ಮಾರ್ಚ್ 2019, 20:00 IST
ಪ್ರದೀಪ್‌ ಆಚಾರ್ಯ
ಪ್ರದೀಪ್‌ ಆಚಾರ್ಯ   

‘ಓದಿದ್ದು ಎಂಬಿಎ, ಉತ್ತಮ ನೌಕರಿ ಹಿಡಿದು ಮನೆ ಮಂದಿ ಸಾಕೋದನ್ನು ಬಿಟ್ಟು, ಲಿಫ್ಟರ್‌ ಆಗ್ತೀನಿ, ಹೆಸರು ಮಾಡ್ತೀನಿ ಎಂಬ ಹುಂಬತನ ಬಿಡು, ಒಳ್ಳೆ ಕೆಲಸ ಹುಡುಕಿ ಮನೆಯನ್ನು ನೋಡಿಕೊ. ನೇಮ್‌, ಫೆಮ್‌ನಿಂದ ಹೊಟ್ಟೆ ತುಂಬುತ್ತಾ. ಮೊದಲು ಸರಿ ದಾರಿ ಹಿಡಿ ಎಂದು ಕುಟುಕಿದ್ದವರ ಸಂಖ್ಯೆ ಕಮ್ಮಿಯೇನಿರಲಿಲ್ಲ. ಆದರೆ, ಎಲ್ಲವನ್ನೂ ಶಾಂತಚಿತ್ತದಿಂದಲೇ ಸ್ವೀಕಾರ ಮಾಡಿ, ತಾನೊಬ್ಬ ಅಂತರರಾಷ್ಟ್ರೀಯ ಪವರ್‌ ಲಿಫ್ಟರ್‌ ಆಗುವ ಕನಸನ್ನು ನನಸು ಮಾಡಿಕೊಂಡಿದ್ದಾರೆ ಪ್ರದೀಪ್‌ ಆಚಾರ್ಯ. ಇದೀಗ ಒಟ್ಟು ನಾಲ್ಕು ಬಾರಿ ಅಂತರರಾಷ್ಟ್ರೀಯಮಟ್ಟದ ಪವರ್‌ ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಚಿನ್ನದ ಸಾಧನೆಯ ಮೂಲಕ ಕುಡ್ಲ ಜನರ ಮನಗಳನ್ನೂ ಗೆದ್ದಿದ್ದಾರೆ.

ಮಂಗಳೂರಿನ ಉರ್ವದಲ್ಲಿರುವ ಬಾಡಿಗೆ ಮನೆಯಲ್ಲಿ ತಾಯಿಯೊಂದಿಗೆ ನೆಲೆಸಿರುವ ಪ್ರದೀಪ್‌ಗೆ ಈಗ 30 ವರ್ಷ. ಈಚೆಗೆ ಆಸ್ಟ್ರೇಲಿಯಾದ ಗೋಲ್ಡ್‌ಕೊಸ್ಟ್‌ನಲ್ಲಿ ನಡೆದ ಏಷ್ಯಾ ಪೆಸಿಫಿಕ್‌ ಕ್ಲಾಸಿಕ್‌ ಆ್ಯಂಡ್‌ ಇಕ್ವೀಪ್‌ ಪವರ್‌ ಲಿಫ್ಟಿಂಗ್‌ ಹಾಗೂ ಬೆಂಚ್‌ಪ್ರೆಸ್‌ ಚಾಂಪಿಯನ್‌ ಷಿಪ್‌ನ 74 ಕೆಜಿ ಸೀನಿಯರ್ ವಿಭಾಗದಲ್ಲಿ (ಬೆಂಚ್‌ಪ್ರೆಸ್‌ ಹಾಗೂ ಪವರ್ ಲಿಫ್ಟಿಂಗ್‌) ಎರಡು ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ವಿಶ್ವ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ ಷಿಪ್‌ನಲ್ಲಿ ದೇಶ ಪ್ರತಿನಿಧಿಸುವ ಕನಸು ಪ್ರದೀಪ್‌ ಆಚಾರ್ಯ ಅವರದ್ದು. 2017ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಕಾಮನ್‌ ವೆಲ್ತ್‌ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ ಷಿಪ್‌ನಲ್ಲಿ ಎರಡು ಚಿನ್ನ, ಬೆಳ್ಳಿ ಗೆದ್ದಿದ್ದರು. ಕೆಳಮಧ್ಯಮವರ್ಗದ ಕುಟುಂಬದ ಎಲ್ಲ ರೀತಿಯ ಕಷ್ಟನಷ್ಟಗಳನ್ನು ಅನುಭವಿಸುತ್ತಲೇ ಸಾಧನೆ ಮಾಡುತ್ತಿರುವ ಪ್ರದೀಪ್ ‘ಪ್ರಜಾವಾಣಿ’ಯೊಂದಿಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

l ಆಸ್ಟ್ರೇಲಿಯಾ ಗೋಲ್ಟ್‌ಕೊಸ್ಟ್‌ ಸಾಧನೆಯ ಖುಷಿ ಹೇಗಿದೆ?

ADVERTISEMENT

ವೀಸಾ ಬೇಗ ಸಿಗದ ಕಾರಣ ಸ್ಪರ್ಧೆ ನಡೆಯುವ ನಾಲ್ಕು ತಾಸುಗಳ ಮುಂಚೆ ಆಸ್ಟ್ರೇಲಿಯಾದ ಗೋಲ್ಡ್‌ಕೊಸ್ಟ್‌ ತಲುಪಿದೆ. ಹೆಚ್ಚು ಪ್ರಾಕ್ಟಿಸ್‌ ಮಾಡಿರಲಿಲ್ಲ. ಅಂತರರಾಷ್ಟ್ರೀಯ ಸ್ಪರ್ಧೆ ಬೇರೆ, ಆಸ್ಟ್ರೇಲಿಯಾ ಹಾಗೂ ಕಿರ್ಗಿಸ್ತಾನ್‌ ಸ್ಪರ್ಧಿಗಳು ತುಂಬಾ ಪ್ರಬಲರಾಗಿದ್ದರು. ಇಂತಹ ಸ್ಪರ್ಧೆಯ ನಡುವೆ ಬೇರೆ ಬೇರೆ ದೇಶಗಳ ಸ್ಪರ್ಧಿಗಳನ್ನು ಹಿಮ್ಮೆಟ್ಟಿಸಿ ಪದಕ ಗೆಲ್ಲುವುದು ಸುಲಭವಾಗಿರಲಿಲ್ಲ. ಆದರೂ ಶ್ರದ್ಧೆ ಮತ್ತು ಆತ್ಮಶ್ವಾಸದಿಂದ ಮಾಡಿದ ಪ್ರಯತ್ನ ಕೈಕೊಡಲಿಲ್ಲ. ಎರಡು ಚಿನ್ನದ ಪದಕಗಳನ್ನು ಗೆದ್ದೆ.

ಪವರ್‌ ಲಿಫ್ಟಿಂಗ್‌ ಬಗ್ಗೆ ಆಸಕ್ತಿ ಬೆಳೆದಿದ್ದು ಹೇಗೆ?

ಪವರ್‌ ಲಿಫ್ಟಿಂಗ್‌ ಬಗ್ಗೆ ಹೆಚ್ಚು ಒಲವು ಬೆಳೆಸಿಕೊಂಡಿದ್ದು 23ನೇ ವಯಸ್ಸಿನಲ್ಲಿ. ತಂದೆ ರವೀಶ್‌ ಆಚಾರ್ಯ ಅವರು ಆಚಾರಿ (ಕಾರ್ಪೆಂಟರ್) ಕೆಲಸ ಮಾಡುತ್ತಿದ್ದರು. ಚಿಕ್ಕವನಿದ್ದಾಗ ನಾನು ಕೂಡಾ ಅಪ್ಪನೊಂದಿಗೆ ಕೆಲಸದಲ್ಲಿ ಭಾಗಿಯಾಗುತ್ತಿದ್ದೆ. ಅದು ತುಂಬಾ ಕಷ್ಟದ ಕೆಲಸ ಕೂಡಾ ಹೌದು. ಹೈಸ್ಕೂಲ್‌, ಕಾಲೇಜು ಮಟ್ಟದಲ್ಲಿ ಕ್ರೀಡೆಯ ಬಗ್ಗೆ ಒಲವು ಇತ್ತು. ಕರಾವಳಿಯಲ್ಲಿ ಪವರ್‌ ಹಾಗೂ ವೇಟ್‌ ಲಿಫ್ಟಿಂಗ್‌ನಲ್ಲಿ ಸಾಧನೆ ಮಾಡಿರುವವರು ಹೆಚ್ಚು. ದೈಹಿಕವಾಗಿ ಸದೃಢವಾಗಿದ್ದರಿಂದ, ನಮ್ಮ ತಂದೆಯಿಂದ ಬಂದಿದ್ದ ಅನುವಂಶೀಯ ವೃತ್ತಿಯ ದೈಹಿಕ ಕಸರತ್ತು ಪವರ್‌ ಲಿಫ್ಟಿಂಗ್‌ನತ್ತ ಒಲವು ಬೆಳೆಸಿಕೊಳ್ಳಲು ವೇದಿಕೆ ನೀಡಿತು.

ಮನೆ ಪರಿಸ್ಥಿತಿ, ಪೋಷಕರ ಬೆಂಬಲ ಹೇಗಿದೆ?

ಪವರ್‌ ಲಿಫ್ಟಿಂಗ್‌ ನನಗೆ ಪಂಚಪ್ರಾಣ. ಯಾವತ್ತು ಇದರಿಂದ ದೂರ ಸರಿಯಲ್ಲ. ಎಂಬಿಎ ಮುಗಿಸಿದ್ದರೂ ಬ್ಯಾಂಕ್‌ ಕೆಲಸಕ್ಕೆ ಗುಡ್‌ಬೈ ಹೇಳಿದೆ. ಮುಕ್ಕಾದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದ ನಾವು ಮಂಗಳೂರಿಗೆ ಬಂದೆವು. ತಂದೆ ನಿಧನದ ನಂತರ ಜೀವನ ಕಷ್ಟವಾಗಿತ್ತು. ತಾಯಿ ಪ್ರೇಮಾ ನನ್ನ ಸಾಧನೆಗೆ ಪ್ರೋತ್ಸಾಹ ನೀಡುತ್ತಾರೆ. ತಂಗಿಯ ಮದುವೆ ಮಾಡಿಕೊಟ್ಟಿದ್ದೇವೆ. ನನಗೆ ಒಬ್ಬ ಅಣ್ಣ ಇದ್ದಾರೆ. ಕೇಂದ್ರ ಸರ್ಕಾರದ ಮುದ್ರಾ ಯೋಜನೆ ಅಡಿ ಸಾಲ ಪಡೆದು ಮಂಗಳೂರಿನಲ್ಲಿ ಸದ್ಗುರು ಫಿಟ್‌ನೆಸ್‌ ಸೆಂಟರ್‌ ಆರಂಭಿಸಿದ್ದೇನೆ.

ನಿಮ್ಮ ಸಾಧನೆಗೆ ಬೆಂಬಲ ನೀಡಿದವರು ಯಾರು?

ಮಂಗಳೂರಿನ ಬಾಲಾಂಜನೇಯ ಜಿಮ್ನಾಸಿಯಂನಲ್ಲಿ ಆರಂಭಿಕ ಕಲಿಕೆ ಶುರು ಮಾಡಿದ್ದೆ. ಕೃಷ್ಣಮೂರ್ತಿ ರಾವ್‌ ಅವರ ಗರಡಿಯಲ್ಲಿ ಹಲವಾರು ಪಟ್ಟು ಕಲಿತೆ. ಆದರೆ, ಈಗ ಅವರಿಲ್ಲ, ನಿಧನರಾಗಿದ್ದಾರೆ. ಅವರಿದ್ದಾಗಲೇ ಕಾಮನ್‌ವೆಲ್ತ್‌ನಲ್ಲಿ ಚಿನ್ನ ಬಂದಿತ್ತು. ಪವರ್‌ ಲಿಫ್ಟರ್‌ ವಿನ್ಸೆಂಟ್‌ ಪ್ರಕಾಶ್‌ ಕಾರ್ಲೋ ಬೆಂಚ್‌ ಪ್ರೆಸ್‌ನಲ್ಲಿ ಕೌಶಲ ಕಲಿಸಿದ್ದಾರೆ. ಪವರ್‌ ಲಿಫ್ಟರ್‌ ಸತೀಶ ಕುಮಾರ್‌ ಕುದ್ರೊಳ್ಳಿ ಅವರು ಕೂಡಾ ಮಾರ್ಗದರ್ಶನ ಮಾಡುತ್ತಾರೆ. ಪ್ರತಿ ಬಾರಿ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಹೋಗುವಾಗ ತಾಯಿ ಒಡವೆ ಅಡವು ಇಟ್ಟು ಹೋಗುವಂತಹ ಸ್ಥಿತಿ ಇದೆ. ಫಿಟ್‌ನೆಸ್‌ಗೆ ಪ್ರತಿ ತಿಂಗಳಿಗೆ ₹ 30 ಸಾವಿರ ಖರ್ಚು ಬರುತ್ತದೆ. ಈ ಮೊದಲು ಮಂಗಳೂರಿನ ತಲವಾಲ್ಕರ್ಸ್ ಫಿಟ್‌ನೆಸ್‌ ಸೆಂಟರ್‌ನಲ್ಲಿ ಟ್ರೈನರ್‌ ಆಗಿ ಕೆಲಸ ಮಾಡುತ್ತಿದ್ದೆ

ಅಂತರರಾಷ್ಟ್ರ ಮಟ್ಟದಲ್ಲಿ ಪದಕ ಗೆದ್ದವರಿಗೆ ಸರ್ಕಾರದಿಂದ ಯಾವುದೇ ಪ್ರೋತ್ಸಾಹ ಸಿಗುತ್ತಿಲ್ಲ. ಪ್ರತಿಬಾರಿಯೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಹೋಗುವಾರ ಪ್ರಾಯೋಜಕರಿಗಾಗಿ ಹುಡುಕಾಡಬೇಕು. ವಿಶ್ವ ಪವರ್‌ ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಬಯಕೆ ಇದೆ. ಇದಕ್ಕಾಗಿ ವರ್ಕೌಟ್‌ ಮಾಡುತ್ತಿರುವೆ, ಸಾಲ ಮಾಡಿ ಆದರೂ ಸರಿ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವೆ.

l ಇಲ್ಲಿಯವರೆಗಿನ ಸಾಧನೆಗಳ ಬಗ್ಗೆ ಹೇಳಿ.

ದಕ್ಷಿಣ ಆಫ್ರಿಕಾದಲ್ಲಿ 2017ರಲ್ಲಿ ನಡೆದ ಕಾಮನ್‌ ವೆಲ್ತ್‌ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ ಷಿಪ್‌ನ 83 ಕೆ.ಜಿ ಸೀನಿಯರ್‌ ವಿಭಾಗದಲ್ಲಿ ಎರಡು ಚಿನ್ನ, ಬೆಳ್ಳಿ, ಕೇರಳದ ಅಲೆಪಿಯಲ್ಲಿ ನಡೆದ ಪವರ್‌ಲಿಫ್ಟಿಂಗ್‌ ಚಾಂಪಿಯನ್‌ ಷಿಪ್‌ ಸ್ಪರ್ಧೆಯಲ್ಲಿ ಕಂಚು, 2018ರಲ್ಲಿ ದುಬೈನಲ್ಲಿ ನಡೆದ ಏಷ್ಯನ್ ಬೆಂಚ್‌ಪ್ರೆಸ್‌ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚು, ಆಸ್ಟ್ರೇಲಿಯಾ ಗೋಲ್ಡ್‌ಕೊಸ್ಟ್‌ನಲ್ಲಿ 2 ಚಿನ್ನದ ಸಾಧನೆ. ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳು ಬಂದಿವೆ. ರಾಷ್ಟ್ರಮಟ್ಟದಲ್ಲಿ ಒಂಬತ್ತು ಚಿನ್ನದ ಪದಕಗಳು ಸಂದಿವೆ.

ಚಿತ್ರಗಳು: ಗೋವಿಂದರಾಜ ಜವಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.