ADVERTISEMENT

ಕಾಮನ್‌ ವೆಲ್ತ್‌ನಲ್ಲಿ ಶೂಟಿಂಗ್ ಸೇರ್ಪಡೆಗೆ ಸರ್ಕಾರದ ಪ್ರಯತ್ನ: ಕಿರಣ್ ರಿಜಿಜು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 18:42 IST
Last Updated 27 ಸೆಪ್ಟೆಂಬರ್ 2019, 18:42 IST
   

ಬೆಂಗಳೂರು: ಕಾಮನ್‌ವೆಲ್ತ್‌ ಗೇಮ್ಸ್‌ನಿಂದ ಶೂಟಿಂಗ್‌ ತೆಗೆದುಹಾಕದಂತೆ ಇಂಗ್ಲೆಂಡ್‌ನ ಕ್ರೀಡಾ ಸಚಿವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದೇನೆ. ಆದರೆ ಅದರ ಪರಿಣಾಮದ ಕುರಿತು ಈಗಲೇ ಖಚಿತವಾಗಿ ಹೇಳುವಂತಿಲ್ಲ ಎಂದು ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿದರು.

ಬೆಂಗಳೂರಿಗೆ ಎರಡು ದಿನಗಳ ಭೇಟಿಗಾಗಿ ಬಂದಿರುವ ಅವರು ಶುಕ್ರವಾರ ಕೆಂಗೇರಿ ಸಮೀಪ ಹಿರಿಯ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಅವರು ನಿರ್ಮಾಣ ಮಾಡುತ್ತಿರುವ ಕ್ರೀಡಾ ಅಕಾಡೆಮಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಐಒಎ ಅಧ್ಯಕ್ಷ ನರೀಂದರ್ ಬಾತ್ರಾ ಮತ್ತು ಕಾರ್ಯದರ್ಶಿ ರಾಜೀವ್ ಮೆಹ್ತಾ ನನ್ನನ್ನು ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ 2022ರ ಕಾಮನ್‌ವೆಲ್ತ್‌ ಗೇಮ್ಸ್‌ನಿಂದ ಶೂಟಿಂಗ್ ಕಿತ್ತುಹಾಕಿರುವುದನ್ನು ಗಮನಕ್ಕೆ ತಂದಿದ್ದರು. ಭಾರತವು ಶೂಟಿಂಗ್‌ನಲ್ಲಿ ಹೆಚ್ಚು ಪದಕ ಗಳಿಸುವ ದೇಶವಾಗಿದೆ. ಶ್ರೇಷ್ಠ ಶೂಟಿಂಗ್‌ಪಟುಗಳೂ ಇಲ್ಲಿದ್ದಾರೆ. ಆದ್ದರಿಂದ ಆ ಕ್ರೀಡೆಯನ್ನು ಸಿಡಬ್ಲ್ಯುಜಿಯಲ್ಲಿ ಉಳಿಸಬೇಕೆನ್ನುವ ಕಾಳಜಿ ಇದೆ’ ಎಂದರು.

ADVERTISEMENT

‘ನಾವು ಒಲಿಂಪಿಕ್ಸ್‌ನಲ್ಲಿ ಹೆಚ್ಚು ಪದಕಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿದ್ದೇವೆ. ಅದಕ್ಕೆ ತಕ್ಕಂತೆ ಕ್ರೀಡಾ ಸಾಮರ್ಥ್ಯ ವೃದ್ಧಿಸುವ, ಪ್ರತಿಭಾ ಶೋಧ ಮಾಡುವ ಕೆಲಸ ಮಾಡಬೇಕಿದೆ. ಕ್ರೀಡೆಯು ಪಠ್ಯೇತರ ಚಟುವಟಿಕೆಯಲ್ಲ. ಪಠ್ಯದ ಪ್ರಮುಖ ಭಾಗವಾಗಬೇಕು. ಅದರಿಂದ ಕ್ರೀಡಾ ಸಂಸ್ಕೃತಿಯು ಬೆಳೆಯುತ್ತದೆ’ ಎಂದರು.

‘ಸರ್ಕಾರ ಕಳೆದ ಮೂರು ವರ್ಷಗಳಿಂದ ಖೇಲೊ ಇಂಡಿಯಾ ಆಯೋಜಿಸುತ್ತಿದೆ. ಇದರಿಂದಾಗಿ ದೇಶದ ಎಲ್ಲ ರಾಜ್ಯಗಳಿಂದಲೂ ಪ್ರತಿಭಾವಂತರ ಶೋಧಕ್ಕೆ ಇದು ವೇದಿಕೆಯಾಗಿದೆ’ ಎಂದು ತಿಳಿಸಿದರು.

‘ಎನ್‌ಡಿಟಿಎಲ್ (ರಾಷ್ಟ್ರೀಯ ಉದ್ದೀಪನ ಮದ್ದು ಪರೀಕ್ಷೆ ಪ್ರಯೋಗಾಲಯ) ಮೇಲೆ ನಿಷೇಧವೆನೂ ಇಲ್ಲ. ಅಲ್ಲಿಯ ಎಲ್ಲ ವಿಜ್ಞಾನಿಗಳೊಂದಿಗೆ ಮಾತನಾಡಿದ್ದೇನೆ. ವಾಡಾದಿಂದ ಬಂದಿರುವ ಸೂಚನೆಗಳ ಕುರಿತು ಚರ್ಚಿಸಿದ್ದೇವೆ. ಸ್ಯಾಂಪಲ್‌ಗಳ ‍ಪರೀಕ್ಷಾ ಸಂಖ್ಯೆಯನ್ನು ದುಪ್ಪಟ್ಟು ಮಾಡಲು ಸೂಚಿಸಲಾಗಿದೆ. ಈ ವರ್ಷ 12 ಸಾವಿರ ಅಥ್ಲೀಟ್‌ಗಳ ಸ್ಯಾಂಪಲ್‌ಗಳನ್ನು ಪರೀಕ್ಷಿಸಲು ಉದ್ದೇಶಿಸಲಾಗಿದೆ’ ಎಂದು ಪ್ರತಿಕ್ರಿಯಿಸಿದರು.

ಕ್ರೀಡೆಯಲ್ಲಿ ಬೆಟ್ಟಿಂಗ್ ಕುರಿತು ಪ್ರತಿಕ್ರಿಯಿಸಿದ ಅವರು, ‘ಪ್ರಕರಣಗಳು ಪತ್ತೆಯಾದಾಗಲೆಲ್ಲ ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಂಡಿದ್ದೇವೆ. ಜೂಜಾಟ ನಿಷೇಧ ನಿಯಮದಲ್ಲಿ ಕ್ರಮ ಜರುಗಿಸುವ ಅವಕಾಶ ಇದೆ. ಬೆಟ್ಟಿಂಗ್ ನಿಯಂತ್ರಣ ಕುರಿತು ಆಯಾ ರಾಜ್ಯಗಳೊಂದಿಗೆ ಚರ್ಚಿ ನಡೆಸುವ ಅಗತ್ಯವಿದೆ’ ಎಂದರು.

‘ಅಂಜು ಬಾಬಿ ಜಾರ್ಜ್ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ನಮ್ಮ ದೇಶಕ್ಕೆ ಕಂಚಿನ ಪದಕ ಗೆದ್ದುಕೊಟ್ಟ ಹೆಮ್ಮೆಯ ಕ್ರೀಡಾಪಟು. ಅವರು ಇಲ್ಲಿ ಉತ್ತಮವಾದ ಆಕಾಡೆ ಮಿಯನ್ನು ನಿರ್ಮಿಸುತ್ತಿದ್ದಾರೆ. ಪದಕ ಗೆಲ್ಲುವ ಅಥ್ಲೀಟ್‌ಗಳನ್ನು ರೂಪಿಸುವುದು ಅವರ ಹೊಣೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.