ADVERTISEMENT

ಐದು ಟೆಸ್ಟ್‌ ಪಂದ್ಯಗಳ ಹಾಕಿ ಸರಣಿ: ಭಾರತಕ್ಕೆ ಮತ್ತೆ ನಿರಾಸೆ

ಹಾಕಿ: ಗೋವರ್ಸ್‌ ಹ್ಯಾಟ್ರಿಕ್‌; ಆಸ್ಟ್ರೇಲಿಯಾಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 12:19 IST
Last Updated 27 ನವೆಂಬರ್ 2022, 12:19 IST

ಅಡಿಲೇಡ್‌ (ಪಿಟಿಐ): ಬ್ಲೇಕ್‌ ಗೋವರ್ಸ್‌ ಅವರ ಹ್ಯಾಟ್ರಿಕ್‌ ನೆರವಿನಿಂದ ಆಸ್ಟ್ರೇಲಿಯಾ ತಂಡ ಐದು ಟೆಸ್ಟ್‌ ಪಂದ್ಯಗಳ ಹಾಕಿ ಸರಣಿಯ ಎರಡನೇ ಪಂದ್ಯದಲ್ಲಿ ಭಾರತದ ವಿರುದ್ಧ 7–4 ಗೋಲುಗಳಿಂದ ಗೆದ್ದಿತು.

ಈ ಜಯದ ಮೂಲಕ ಆತಿಥೇಯ ತಂಡ ಸರಣಿಯಲ್ಲಿ 2–0 ಮುನ್ನಡೆ ಗಳಿಸಿತು. ಶನಿವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ 4–5 ಗೋಲುಗಳಿಂದ ಸೋತಿತ್ತು. ಮೂರನೇ ಪಂದ್ಯ ಬುಧವಾರ ನಡೆಯಲಿದೆ.

ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗೋವರ್ಸ್‌ ಅವರು ಭಾರತ ತಂಡವನ್ನು ಮತ್ತೆ ಕಾಡಿದರು.

ADVERTISEMENT

ಮೂರನೇ ನಿಮಿಷದಲ್ಲಿ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌, ಪೆನಾಲ್ಟಿ ಅವಕಾಶದಲ್ಲಿ ಗೋಲು ಗಳಿಸಿ ಭಾರತಕ್ಕೆ ಮುನ್ನಡೆ ತಂದಿತ್ತರು. ಆದರೆ ಗೋವರ್ಸ್‌ ಮತ್ತು ಜಾಕ್‌ ವೆಲ್ಶ್‌ ನೆರವಿನಿಂದ ಆಸ್ಟ್ರೇಲಿಯಾ ತಿರುಗೇಟು ನೀಡಿತು.

ಗೋವರ್ಸ್‌ 12, 27 ಮತ್ತು 53ನೇ ನಿಮಿಷಗಳಲ್ಲಿ ಗೋಲು ಗಳಿಸಿದರೆ, ವೆಲ್ಶ್ 17 ಹಾಗೂ 24ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿದರು. ಇತರ ಗೋಲುಗಳನ್ನು ಜೇಕ್‌ ವೆಟನ್ (48) ಹಾಗೂ ಜೇಕಬ್ ಆ್ಯಂಡರ್‌ಸನ್ (49) ತಂದಿತ್ತರು.

ಭಾರತದ ಪರ ಹರ್ಮನ್‌ಪ್ರೀತ್‌ (3 ಹಾಗೂ 60ನೇ ನಿ.) ಎರಡು ಗೋಲುಗಳನ್ನು ತಂದಿತ್ತರೆ, ಹಾರ್ದಿಕ್‌ ಸಿಂಗ್‌ (25) ಮತ್ತು ಮೊಹಮ್ಮದ್‌ ರಹೀಲ್ (36) ಅವರು ಒಂದು ಗೋಲು ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.