ADVERTISEMENT

ಜಿಮ್ನಾಸ್ಟಿಕ್ಸ್: ಆಡುವವರಿದ್ದಾರೆ; ಆಡಿಸುವವರಿಲ್ಲ

ಮಹಮ್ಮದ್ ನೂಮಾನ್
Published 14 ಅಕ್ಟೋಬರ್ 2018, 19:30 IST
Last Updated 14 ಅಕ್ಟೋಬರ್ 2018, 19:30 IST
ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಜಿಮ್ನಾಸ್ಟಿಕ್ಸ್‌ ಸ್ಪರ್ಧೆಗೆ ಅತ್ಯಾಧುನಿಕ ಸೌಲಭ್ಯ ಕಲ್ಪಿಸಲಾಗಿದೆ. – ಪ್ರಜಾವಾಣಿ ಚಿತ್ರ/ಸವಿತಾ ಬಿ.ಆರ್
ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಜಿಮ್ನಾಸ್ಟಿಕ್ಸ್‌ ಸ್ಪರ್ಧೆಗೆ ಅತ್ಯಾಧುನಿಕ ಸೌಲಭ್ಯ ಕಲ್ಪಿಸಲಾಗಿದೆ. – ಪ್ರಜಾವಾಣಿ ಚಿತ್ರ/ಸವಿತಾ ಬಿ.ಆರ್   

ರಿಯೊ ಒಲಿಂಪಿಕ್ಸ್‌ ಕೂಟದ ಜಿಮ್ನಾಸ್ಟಿಕ್ಸ್‌ನಲ್ಲಿ ದೀಪಾ ಕರ್ಮಾಕರ್ ಅವರು ವಿಶ್ವದ ಘಟಾನುಘಟಿಗಳಿಗೆ ಪೈಪೋಟಿ ಒಡ್ಡಿ ನಾಲ್ಕನೇ ಸ್ಥಾನ ಪಡೆದಾಗ ಇಡೀ ದೇಶವೇ ಸಂಭ್ರಮಿಸಿತ್ತು. ಪದಕದ ಅವಕಾಶವನ್ನು ಅಲ್ಪ ಅಂತರದಿಂದ ಕಳೆದುಕೊಂಡಿದ್ದರೂ ಅವರು ರಾತ್ರಿ ಬೆಳಗಾಗುವಷ್ಟರಲ್ಲಿ ಕ್ರೀಡಾ ಪ್ರೇಮಿಗಳ ಕಣ್ಮಣಿಯಾಗಿದ್ದರು.

ನಿಂತ ನೀರಾಗಿದ್ದ ಭಾರತದ ಜಿಮ್ನಾಸ್ಟಿಕ್ಸ್‌ ಕ್ಷೇತ್ರಕ್ಕೆ ದೀಪಾ ಅವರ ಸಾಧನೆ ಹುರುಪು ತುಂಬಿತ್ತು. ತ್ರಿಪುರಾದ ಅಗರ್ತಲಾದ ಹುಡುಗಿಯ ಪ್ರದರ್ಶನದಿಂದ ಪ್ರೇರಣೆಗೊಂಡು ಹಲವರು ಜಿಮ್ನಾಸ್ಟಿಕ್ಸ್‌ ಕ್ರೀಡೆಯತ್ತ ಆಸಕ್ತಿ ತೋರುತ್ತಿದ್ದಾರೆ.

ಆದರೆ ಜಿಮ್ನಾಸ್ಟಿಕ್ಸ್‌ನಲ್ಲಿ ಮಿಂಚುವ ಕನಸು ಕಟ್ಟಿಕೊಂಡಿರುವ ಯುವ ಪ್ರತಿಭೆಗಳಿಗೆ ಸೂಕ್ತ ಪ್ರೋತ್ಸಾಹ ಸಿಗುತ್ತಿಲ್ಲ. ತರಬೇತಿ ಮತ್ತು ಪ್ರತಿಭೆ ಪ್ರದರ್ಶನಕ್ಕೆ ಸರಿಯಾದ ಸ್ಥಳ, ವೇದಿಕೆ ದೊರೆಯುತ್ತಿಲ್ಲ. ಇದರಿಂದ ರಾಷ್ಟ್ರ, ಅಂತರರಾಷ್ಟ್ರೀಯಮಟ್ಟದಲ್ಲಿ ಮಿಂಚಬಲ್ಲ ಪ್ರತಿಭೆಗಳು ಎಳೆಯದರಲ್ಲೇ ಮುದುಡಿಹೋಗುತ್ತಿವೆ.

ADVERTISEMENT

ಕರ್ನಾಟಕದಲ್ಲೂ ಜಿಮ್ನಾಸ್ಟಿಕ್ಸ್‌ ಪ್ರತಿಭೆಗಳಿಗೆ ಕೊರತೆಯಿಲ್ಲ. ಮೈಸೂರಿನ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ದಸರಾ ಕ್ರೀಡಾಕೂಟದ ಅಂಗವಾಗಿ ನಡೆದ ಜಿಮ್ನಾಸ್ಟಿಕ್ಸ್‌ ಕೂಟವು ರಾಜ್ಯದ ಪ್ರತಿಭೆಗಳ ಶಕ್ತಿಯನ್ನು ಅನಾವರಣಗೊಳಿಸಿತು.

ಈ ಕೂಟದಲ್ಲಿ ಐದು ವರ್ಷ ವಯಸ್ಸಿನ ಪುಟಾಣಿಗಳಿಂದ ಹಿಡಿದು 20–22 ವರ್ಷ ವಯಸ್ಸಿನವರೆಗಿನ ಸುಮಾರು 250 ಜಿಮ್ನಾಸ್ಟ್‌ಗಳು ಪಾಲ್ಗೊಂಡಿದ್ದರು. ರಾಜ್ಯಮಟ್ಟದ ಕೂಟದಲ್ಲಿ ಇಷ್ಟೊಂದು ಸ್ಪರ್ಧಿಗಳು ಪಾಲ್ಗೊಂಡದ್ದು ಇದೇ ಮೊದಲು. ಬೆಂಗಳೂರಿನಿಂದ ಅತಿಹೆಚ್ಚು ಸ್ಪರ್ಧಿಗಳು ಪಾಲ್ಗೊಂಡರೆ, ಮೈಸೂರು, ಧಾರವಾಡದ ಜಿಮ್ನಾಸ್ಟ್‌ಗಳೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಆರ್ಟಿಸ್ಟಿಕ್ ಮಾತ್ರವಲ್ಲದೆ ರಿದಮಿಕ್, ಅಕ್ರೊಬ್ಯಾಟಿಕ್ ಮತ್ತು ಏರೊಬಿಕ್‌ ಜಿಮ್ನಾಸ್ಟಿಕ್ಸ್‌ಗಳನ್ನು ಈ ಬಾರಿಯ ಕೂಟದಲ್ಲಿ ಅಳವಡಿಸಿದ್ದು ಹೆಚ್ಚು ಸ್ಪರ್ಧಿಗಳು ಪಾಲ್ಗೊಳ್ಳಲು ಕಾರಣ. ದಸರಾದಲ್ಲಿ ಇದೇ ಮೊದಲ ಬಾರಿಗೆ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು.

ಕರ್ನಾಟಕದಲ್ಲಿ ಹೆಚ್ಚು ಪ್ರಚಾರದಲ್ಲಿರುವುದು ಆರ್ಟಿಸ್ಟಿಕ್‌ ಜಿಮ್ನಾಸ್ಟಿಕ್ಸ್‌. ಈ ವಿಭಾಗದಲ್ಲಿ ಪುರುಷರಿಗೆ ಫ್ಲೋರ್‌ ಎಕ್ಸರ್‌ಸೈಜ್, ಪೊಮೆಲ್‌ ಹಾರ್ಸ್, ಸ್ಟಿಲ್‌ ರಿಂಗ್ಸ್, ವಾಲ್ಟ್, ಪ್ಯಾರಲಲ್‌ ಬಾರ್ಸ್‌, ಹಾರಿಜಂಟಲ್‌ ಬಾರ್ಸ್‌ ಹಾಗೂ ಮಹಿಳೆಯರಿಗೆ ವಾಲ್ಟ್‌, ಅನ್‌ಈವನ್‌ ಬಾರ್ಸ್, ಬ್ಯಾಲೆನ್ಸ್‌ ಬೀಮ್‌ ಮತ್ತು ಫ್ಲೋರ್ಸ್‌ ಎಕ್ಸರ್‌ಸೈಜ್‌ ಸ್ಪರ್ಧೆಗಳು ಇವೆ.

ಕರ್ನಾಟಕದಲ್ಲಿ ಅತ್ಯುತ್ತಮ ಜಿಮ್ನಾಸ್ಟ್‌ಗಳಿದ್ದಾರೆ. ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ರಾಷ್ಟ್ರ ಮಟ್ಟದಲ್ಲಿ ಪದಕ ಗೆದ್ದ ಹಲವರಿದ್ದಾರೆ. ಉಜ್ವಲ್‌ ನಾಯ್ಡು, ಉದಯ್‌ ನಾಯ್ಡು, ಅಮೃತ್‌ ಅವರು ಪುರುಷರ ಆರ್ಟಿಸ್ಟಿಕ್‌ ಜಿಮ್ನಾಸ್ಟಿಕ್ಸ್‌ನಲ್ಲಿ ಗಮನ ಸೆಳೆಯುವ ಪ್ರದರ್ಶನ ನೀಡಿದ್ದಾರೆ. ಸಹಸ್ರ, ಶ್ರೀವರ್ಷಿಣಿ, ಸಂಧ್ಯಾ ಅವರು ಮಹಿಳೆಯರ ವಿಭಾಗದಲ್ಲಿ ಮಿಂಚುತ್ತಿದ್ದಾರೆ.

ರಿದಮಿಕ್‌ ಜಿಮ್ನಾಸ್ಟಿಕ್ಸ್‌ನಲ್ಲೂ ರಾಜ್ಯ ನಿಧಾನವಾಗಿ ಮುನ್ನೆಲೆಗೆ ಬರುತ್ತಿದೆ. ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದಿದ್ದ 24ನೇ ರಾಷ್ಟ್ರೀಯ ರಿದಮಿಕ್‌ ಜಿಮ್ನಾಸ್ಟಿಕ್ಸ್‌ನಲ್ಲಿ ರಾಜ್ಯ ತಂಡ ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಜಯಿಸಿತ್ತು. ಈ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕಕ್ಕೆ ದೊರೆತ ಮೊದಲ ಪದಕ ಅದಾಗಿತ್ತು.

ಭಾವನಾ, ಕೀರ್ತನಾ, ಖುಷಿ, ರಿಯಾ ಬನ್ಸಾಲಿ ಮತ್ತು ಯಶಿಕಾ ಭಂಡಾರಿ ಅವರು ತಂಡದಲ್ಲಿದ್ದರು. ರಾಜಧಾನಿ ಬೆಂಗಳೂರು ಒಳಗೊಂಡಂತೆ ರಾಜ್ಯದ ಎಲ್ಲೂ ಜಿಮ್ನಾಸ್ಟ್‌ಗಳಿಗೆ ತರಬೇತಿಗೆ ಸೂಕ್ತ ಸೌಲಭ್ಯ ಇಲ್ಲ. ಇದರ ನಡುವೆಯೂ ಈ ಬಾಲಕಿಯರು ಸಾಧನೆ ಮಾಡಿದ್ದರು.

ಸೌಲಭ್ಯಗಳ ಕೊರತೆ: ರಾಜ್ಯದಲ್ಲಿ ತರಬೇತಿಗೆ ಮತ್ತು ಪ್ರತಿಭೆ ತೋರಿಸಲು ಸೂಕ್ತ ವೇದಿಕೆ ಇಲ್ಲದಿರುವುದು ಜಿಮ್ನಾಸ್ಟಿಕ್ಸ್‌ ಬೆಳವಣಿಗೆಗೆ ಅಡ್ಡಿಯಾಗಿ ಪರಿಣಮಿಸಿದೆ ಎಂದು ಕರ್ನಾಟಕ ಜಿಮ್ನಾಸ್ಟಿಕ್ಸ್‌ ಸಂಸ್ಥೆಯ ಅಧ್ಯಕ್ಷ ಮನೋಹರ್‌ ಕಾಮತ್ ಹೇಳುತ್ತಾರೆ.

ಜಿಮ್ನಾಸ್ಟಿಕ್ಸ್‌ ತರಬೇತಿ ಮತ್ತು ಸ್ಪರ್ಧೆಗೆ ಬೇಕಾದ ಸಲಕರಣೆಗಳನ್ನು ಅಳವಡಿಸಲು ಸ್ಥಳಾವಕಾಶವೂ ಇಲ್ಲ. ಒಳಾಂಗಣ ಕ್ರೀಡಾಂಗಣದ ವ್ಯವಸ್ಥೆ ಎಲ್ಲ ಕಡೆಗಳಲ್ಲಿಲ್ಲ. ಒಳಾಂಗಣ ಕ್ರೀಡಾಂಗಣ ಇದ್ದರೂ ಅದು ವಾಲಿಬಾಲ್, ಬ್ಯಾಸ್ಕೆಟ್‌ಬಾಲ್‌ ಒಳಗೊಂಡಂತೆ ಇತರ ಕ್ರೀಡೆಗಳಿಗೆ ಮೀಸಲಾಗಿರುತ್ತದೆ. ಇದರಿಂದ ಕರ್ನಾಟಕದ ಜಿಮ್ನಾಸ್ಟ್‌ಗಳು ಸೌಲಭ್ಯ ಮತ್ತು ಉತ್ತಮ ತರಬೇತಿಯನ್ನು ಅರಸಿಕೊಂಡು ಹೈದರಾಬಾದ್, ಪುಣೆ, ಚೆನ್ನೈ, ಮುಂಬೈ ಮುಂತಾದ ನಗರಗಳಿಗೆ ಹೋಗುತ್ತಿದ್ದಾರೆ ಎನ್ನುತ್ತಾರೆ.

ಕೋಚ್‌ಗಳಿಲ್ಲ: ರಾಜ್ಯದಲ್ಲಿರುವ ಪ್ರತಿಭೆಗಳನ್ನು ಪಳಗಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡಬಲ್ಲ ಕೋಚ್‌ಗಳು ಇಲ್ಲದೇ ಇರುವುದು ಬಲುದೊಡ್ಡ ಕೊರತೆ ಎಂಬುದು ಕಾಮತ್‌ ಅವರ ಮಾತು.

ಪಶ್ಚಿಮ ಬಂಗಾಳ ರಾಜ್ಯವೊಂದರಲ್ಲೇ ಭಾರತ ಕ್ರೀಡಾ ಪ್ರಾಧಿಕಾರದ (ಎಸ್‌ಎಐ) ಮಾನ್ಯತೆ ಹೊಂದಿರುವ 9 ಜಿಮ್ನಾಸ್ಟ್‌ ಕೋಚ್‌ಗಳು ಇದ್ದಾರೆ. ಆದರೆ ಕರ್ನಾಟಕದಲ್ಲಿ ಎಸ್‌ಎಐನಿಂದ ನೇಮಕಗೊಂಡ ಒಬ್ಬನೇ ಒಬ್ಬ ಜಿಮ್ನಾಸ್ಟ್‌ ಕೋಚ್‌ ಇಲ್ಲ. ಬೆಂಗಳೂರಿನಲ್ಲಿ ಇದ್ದ ಒಬ್ಬರು ಕೋಚ್‌ಅನ್ನು ಈಗ ಬೇರೆ ರಾಜ್ಯಕ್ಕೆ ಕಳುಹಿಸಲಾಗಿದೆ. ಸಂಸ್ಥೆಗೆ ನೋಂದಾಯಿತರಾಗಿರುವ 120ಕ್ಕೂ ಅಧಿಕ ಜಿಮ್ನಾಸ್ಟ್‌ಗಳು ಬೆಂಗಳೂರಿನಲ್ಲಿ ಇದ್ದಾರೆ. ಅವರ ತರಬೇತಿಗೆ ಕೋಚ್‌ ಇಲ್ಲದಿರುವುದು ದುರಂತ ಎನ್ನುತ್ತಾರೆ.

ರಾಜ್ಯದಲ್ಲಿ ಹಲವು ಖಾಸಗಿ ಕ್ಲಬ್‌ಗಳು ಇವೆ. ಆದರೆ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪದಕ ಗೆಲ್ಲಬಲ್ಲ ಜಿಮ್ನಾಸ್ಟ್‌ಗಳನ್ನು ಸಜ್ಜುಗೊಳಿಸುವಷ್ಟು ಶಕ್ತಿ ಆ ಕ್ಲಬ್‌ಗಳಿಗಿಲ್ಲ. ಜಿಮ್ನಾಸ್ಟಿಕ್ಸ್‌ ಸ್ಪರ್ಧೆಗೆ ಬಳಸುವ ಸಲಕರಣೆಗಳನ್ನು ಬಳಸಿ ತರಬೇತಿ ನಡೆಸಲೂ ಸಾಧ್ಯವಿಲ್ಲ. ತರಬೇತಿಗಾಗಿ ಪ್ರತ್ಯೇಕ ಜಿಮ್ನಾಸ್ಟಿಕ್ಸ್‌ ಫೋಮ್‌ (ಸ್ಪಾಂಜ್‌) ಪಿಟ್‌ಗಳು ಬೇಕು. ಆದರೆ ರಾಜ್ಯದ ಎಲ್ಲೂ ಆ ಸೌಲಭ್ಯ ಇಲ್ಲ.

**

ಮೈಸೂರಿನಲ್ಲಿ ಅತ್ಯುತ್ತಮ ಸೌಲಭ್ಯ

ಜಿಮ್ನಾಸ್ಟಿಕ್ಸ್‌ ಸ್ಪರ್ಧೆ ಆಯೋಜಿಸಲು ಅಂತರರಾಷ್ಟ್ರೀಯ ಗುಣಮಟ್ಟದ ಸೌಲಭ್ಯ ಹೊಂದಿರುವ ರಾಜ್ಯದ ಏಕೈಕ ನಗರ ಎಂಬ ಗೌರವ ಮೈಸೂರಿಗೆ ಸಲ್ಲುತ್ತದೆ. ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಅತ್ಯಾಧುನಿಕ ಸಲಕರಣೆಗಳನ್ನು ಅಳವಡಿಸಲಾಗಿದೆ. ಈ ಪರಿಕರಗಳನ್ನು ಒಂದು ವರ್ಷದ ಹಿಂದೆಯಷ್ಟೆ ವಿದೇಶದಿಂದ ತರಿಸಲಾಗಿತ್ತು. ಬೆಂಗಳೂರಿನ ಜಿಮ್ನಾಸ್ಟ್‌ಗಳೂ ವಾರಾಂತ್ಯದಲ್ಲಿ ಮೈಸೂರಿಗೆ ಬಂದು ತರಬೇತಿ ನಡೆಸುತ್ತಿದ್ದಾರೆ.

**

ವಿಮೆ ಯೋಜನೆ ಜಾರಿಯಾಗಲಿ

ಜಿಮ್ನಾಸ್ಟಿಕ್ಸ್‌ ಸ್ಪರ್ಧೆಯು ಕ್ರೀಡೆಗಳಲ್ಲಿ ಅತ್ಯಂತ ಕಠಿಣ ಹಾಗೂ ಅಪಾಯಕಾರಿ ಸ್ಪರ್ಧೆ ಒಂದೆನಿಸಿಕೊಂಡಿದೆ. ಆದ್ದರಿಂದ ಕ್ರೀಡಾ ಇಲಾಖೆಯು ಜಿಮ್ನಾಸ್ಟ್‌ಗಳಿಗೆ ವಿಶೇಷ ಆರೋಗ್ಯ ವಿಮೆ ಮತ್ತು ಕ್ರೀಡಾ ವಿಮೆ ಯೋಜನೆ ಜಾರಿಗೊಳಿಸಬೇಕು ಎಂಬುದು ಸ್ಪರ್ಧಿಗಳ ಬೇಡಿಕೆ.

ಕ್ರೀಡಾಪಟು ಪ್ರದರ್ಶನದ ವೇಳೆ ಅಲ್ಪ ಆಯ ತಪ್ಪಿದರೂ ಗಂಭೀರ ಗಾಯಗೊಳ್ಳುವ ಸಾಧ್ಯತೆಗಳಿವೆ. ಕರ್ನಾಟಕದ ಮೂವರು ಜಿಮ್ನಾಸ್ಟ್‌ಗಳು ಈ ಹಿಂದೆ ಪ್ರದರ್ಶನದ ವೇಳೆ ಬಿದ್ದು ಗಂಭೀರ ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.