ADVERTISEMENT

ಎಫ್‌ಐಎಚ್‌: ಹರ್ಮನ್‌ಪ್ರೀತ್‌ ಸಿಂಗ್‌ ‘ವರ್ಷದ ಆಟಗಾರ’

ಹಾಕಿ: ಸತತ ಎರಡನೇ ವರ್ಷ ಎಫ್‌ಐಎಚ್‌ ಗೌರವ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 13:38 IST
Last Updated 7 ಅಕ್ಟೋಬರ್ 2022, 13:38 IST
ಹರ್ಮನ್‌ಪ್ರೀತ್‌ ಸಿಂಗ್‌
ಹರ್ಮನ್‌ಪ್ರೀತ್‌ ಸಿಂಗ್‌   

ನವದೆಹಲಿ: ಭಾರತ ಹಾಕಿ ತಂಡದ ಡಿಫೆಂಡರ್ ಹರ್ಮನ್‌ಪ್ರೀತ್ ಸಿಂಗ್‌ ಅವರು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನ (ಎಫ್‌ಐಎಚ್‌) ‘ವರ್ಷದ ಶ್ರೇಷ್ಠ ಆಟಗಾರ’ ಎನಿಸಿಕೊಂಡಿದ್ದಾರೆ.

26 ವರ್ಷದ ಅವರು ಸತತ ಎರಡನೇ ಸಲ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಮೂಲಕ ಸತತ ಎರಡು ಸಲ ಪ್ರಶಸ್ತಿ ಗೆದ್ದಿರುವ ಪ್ರಮುಖ ಆಟಗಾರರಾದ ಟೆನ್‌ ಡಿ ನುಯೆರ್‌ (ನೆದರ್ಲೆಂಡ್ಸ್‌), ಜೇಮಿ ಡ್ವಾಯೆರ್‌ (ಆಸ್ಟ್ರೇಲಿಯಾ) ಮತ್ತು ಆರ್ಥರ್‌ ವಾನ್‌ ಡೊರೆನ್ (ಬೆಲ್ಜಿಯಂ) ಅವರ ಸಾಲಿಗೆ ಸೇರಿದ್ದಾರೆ.

‘ಹರ್ಮನ್‌ಪ್ರೀತ್‌ ಅವರು ಆಧುನಿಕ ಯುಗದ ಹಾಕಿ ಸೂಪರ್‌ಸ್ಟಾರ್‌ ಆಗಿದ್ದಾರೆ. ಎದುರಾಳಿ ತಂಡದ ಆಕ್ರಮಣವನ್ನು ತಡೆಯಲು ಅವರು ಸೂಕ್ತ ಸಮಯದಲ್ಲಿ ಅಂಗಳದ ಸರಿಯಾದ ಜಾಗದಲ್ಲಿ ನಿಂತಿರುತ್ತಾರೆ’ ಎಂದು ಎಫ್‌ಐಎಚ್‌ ಪ್ರಕಟಣೆ ತಿಳಿಸಿದೆ.

ADVERTISEMENT

ಆನ್‌ಲೈನ್ ಮೂಲಕ ನಡೆದ ಮತದಾನದಲ್ಲಿ ಹರ್ಮನ್‌ಪ್ರೀತ್‌ ಶೇ 29.4 ಮತಗಳನ್ನು ಪಡೆದರು. ಥಿಯೆರಿ ಬ್ರಿಂಕ್‌ಮನ್‌ (ಶೇ 23.6) ಮತ್ತು ಟಾಮ್‌ ಬೂನ್‌ (ಶೇ 23.4) ಅವರನ್ನು ಭಾರತದ ಆಟಗಾರ ಹಿಂದಿಕ್ಕಿದರು.

ಭಾರತ ತಂಡದ ಉಪನಾಯಕನೂ ಆಗಿರುವ ಹರ್ಮನ್‌ಪ್ರೀತ್‌ 2021–22ರ ಎಫ್‌ಐಎಚ್‌ ಹಾಕಿ ಪ್ರೊ ಲೀಗ್‌ನಲ್ಲಿ 16 ಪಂದ್ಯಗಳಿಂದ 18 ಗೋಲುಗಳನ್ನು ಗಳಿಸಿದ್ದರು. ಪ್ರೊ ಲೀಗ್‌ನ ಒಂದು ಋತುವಿನಲ್ಲಿ ಅತಿಹೆಚ್ಚು ಗೋಲು ಗಳಿಸಿದ ದಾಖಲೆಯನ್ನು ಅವರು ಹೊಂದಿದ್ದಾರೆ.

ಕಳೆದ ವರ್ಷ ಢಾಕಾದಲ್ಲಿ ನಡೆದಿದ್ದ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲೂ ಗಮನಾರ್ಹ ಪ್ರದರ್ಶನ ನೀಡಿದ್ದ ಅವರು ಆರು ಪಂದ್ಯಗಳಿಂದ 8 ಗೋಲು ಗಳಿಸಿದ್ದರು. ಆಡಿದ ಎಲ್ಲ ಪಂದ್ಯಗಳಲ್ಲೂ ಗೋಲು ಗಳಿಸಲು ಯಶಸ್ವಿಯಾಗಿದ್ದರು.

ಬರ್ಮಿಂಗ್‌ಹ್ಯಾಂ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತ ತಂಡ ಬೆಳ್ಳಿ ಜಯಿಸುವಲ್ಲೂ ಹರ್ಮನ್‌ಪ್ರೀತ್‌ ನಿರ್ಣಾಯಕ ಪಾತ್ರ ವಹಿಸಿದ್ದರು.

ಭಾರತದ ಪಿ.ಆರ್. ಶ್ರೀಜೇಶ್ ಮತ್ತು ಸವಿತಾ ಪೂನಿಯಾ ಅವರು ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ‘ವರ್ಷದ ಗೋಲ್‌ಕೀಪರ್‌’ ಪ್ರಶಸ್ತಿ ಪಡೆದಿದ್ದರು. ಮುಮ್ತಾಜ್ ಖಾನ್‌ ಅವರು ‘ಉದಯೋನ್ಮುಖ ಆಟಗಾರ್ತಿ’ ಗೌರವಕ್ಕೆ ಪಾತ್ರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.