ADVERTISEMENT

23 ವರ್ಷದೊಳಗಿನವರ ಬ್ಯಾಸ್ಕೆಟ್‌ಬಾಲ್: ಫೈನಲ್‌ಗೆ ಕರ್ನಾಟಕ ಮಹಿಳಾ ತಂಡ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2025, 15:28 IST
Last Updated 23 ಮಾರ್ಚ್ 2025, 15:28 IST
<div class="paragraphs"><p>ಬ್ಯಾಸ್ಕೆಟ್‌ಬಾಲ್</p></div>

ಬ್ಯಾಸ್ಕೆಟ್‌ಬಾಲ್

   

ಬೆಂಗಳೂರು: ಕರ್ನಾಟಕ ತಂಡಗಳು 23 ವರ್ಷದೊಳಗಿನವರ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್  ಚಾಂಪಿಯನ್‌ಷಿಪ್‌ನಲ್ಲಿ ಮಿಶ್ರ ಫಲ ಅನುಭವಿಸಿದವು. ಭಾನುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ದೆಹಲಿ ಮೇಲೆ ಗೆದ್ದ ಮಹಿಳೆಯರ ತಂಡ ಫೈನಲ್ ತಲುಪಿದರೆ, ಪುರುಷರ ತಂಡ ಸೆಮಿಫೈನಲ್‌ನಲ್ಲಿ ಹರಿಯಾಣ ಎದುರು ಸೋಲನುಭವಿಸಿತು.

ಗುವಾಹಟಿಯ ಸರುಸಜಯಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಕರ್ನಾಟಕ ತಂಡ 67–48 ಅಂಕಗಳಿಂದ ದೆಹಲಿ ತಂಡವನ್ನು ಸೋಲಿಸಿತು.

ADVERTISEMENT

ಫೈನಲ್‌ನಲ್ಲಿ ಕರ್ನಾಟಕದ ಎದುರಾಳಿ ತಮಿಳುನಾಡು. ಇನ್ನೊಂದು ಸೆಮಿಫೈನಲ್‌ನಲ್ಲಿ ತಮಿಳುನಾಡು ತಂಡ 70–61 ರಿಂದ ಕೇರಳ ತಂಡವನ್ನು 70–61ರಿಂದ ಮಣಿಸಿತು.

ಅಂತರರಾಷ್ಟ್ರೀಯ ಆಟಗಾರ್ತಿ ಸತ್ಯಾ ಅವರ ಉತ್ತಮ ಆಟದಿಂದ ಕರ್ನಾಟಕ ಮೊದಲ ಕ್ವಾರ್ಟರ್‌ನಲ್ಲಿ ಕರ್ನಾಟಕ 19–11ರಿಂದ ಮುನ್ನಡೆ ಪಡೆಯಿತು. ವಿರಾಮದ ವೇಳೆ ಮುನ್ನಡೆಯನ್ನು 35–23ಕ್ಕೆ ಹೆಚ್ಚಿಸಿತು. ನಾಯಕಿ ನಿಹಾರಿಕಾ ರೆಡ್ಡಿ 27 ಅಂಕ ಗಳಿಸಿ ಮಿಂಚಿದರೆ, ಮೇಖಲಾ ಗೌಡ 18 ಮತ್ತು ಪಾವನಿ ಸಾಂಗ್ವಾನ್ 12 ಅಂಕ ಗಳಿಸಿದರು. ದೆಹಲಿ ರೈಲ್ವೆ ತಂಡದ ರಾಶಿ ಕೊಟಾನಿ 21 ಅಂಕ ಗಳಿಸಿದರು.  

ಪುರುಷರ ವಿಭಾಗದ ಸೆಮಿಫೈನಲ್‌ನಲ್ಲಿ ಕರ್ನಾಟಕ ತಂಡ 70–84 ರಿಂದ ಹರಿಯಾಣ ತಂಡಕ್ಕೆ ಶರಣಾಯಿತು.

ಮೊದಲ ಕ್ವಾರ್ಟರ್‌ನಲ್ಲಿ ಉಭಯ ತಂಡಗಳು 22–22 ಅಂಕಗಳ ಸಮಬಲದ ಹೋರಾಟ ಪ್ರದರ್ಶಿಸಿದವು. ವಿರಾಮದ ವೇಳೆಗೆ ಕರ್ನಾಟಕ 47– 42ರಿಂದ ಮುನ್ನಡೆ ಪಡೆದಿತ್ತು. ಮೂರನೇ ಕ್ವಾರ್ಟರ್‌ನಲ್ಲೂ  63–59ರಿಂದ ಮುನ್ನಡೆ ಉಳಿಸಿಕೊಂಡಿತ್ತು. ಆದರೆ ಕೊನೆಯ ಕ್ವಾರ್ಟರ್‌ನಲ್ಲಿ ಹರಿಯಾಣ ತಂಡ ಅಮೋಘ ಆಟ ಪ್ರದರ್ಶಿಸಿ 84–70 ರಿಂದ ಪಂದ್ಯ ತನ್ನದಾಗಿಸಿಕೊಂಡಿತು. ಕರ್ನಾಟಕದ ಪರ ಮನೋಜ್‌ ಬಿ.ಎಂ. (21 ಅಂಕ), ದಿನೇಶ್‌ ಕೆ.ಪಿ. (15 ಅಂಕ), ಗೌತಮ್‌ ಪಿ.ಕೆ. (11 ಅಂಕ) ಉತ್ತಮ ಪ್ರರ್ದಶನ ನೀಡಿದರು. ಹರಿಯಾಣ ತಂಡದ ನಾಯಕ 21 ಅಂಕ ಮತ್ತು ದೀಪೇಂದರ್ ಜಿ 15 ಅಂಕ ಗಳಿಸಿದರು.    

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.