ADVERTISEMENT

ವಿಶ್ವವಿಖ್ಯಾತ ಹಂಪಿಯಲ್ಲಿ ಹೆರಿಟೇಜ್ ಮ್ಯಾರಾಥಾನ್

ಚುಮು ಚುಮು ಚಳಿಯಲ್ಲೂ ಹೆಜ್ಜೆ ಹಾಕಿದ ಚಿಣ್ಣರು, ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 27 ಜನವರಿ 2019, 6:51 IST
Last Updated 27 ಜನವರಿ 2019, 6:51 IST
   

ಹೊಸಪೇಟೆ: ಮೂಡಣ ದಿಕ್ಕಿನಲ್ಲಿ ಇನ್ನು ಸೂರ್ಯ ಕಣ್ಣು ಬಿಟ್ಟಿರಲಿಲ್ಲ. ಚುಮು, ಚುಮು ಚಳಿ ನಡುವೆಯೂ ಜನರ ಸರಬರ ಓಡಾಟ ಶುರುವಾಗಿತ್ತು. ಎಲ್ಲರ ಮುಖದಲ್ಲೂ ಏನೋ ಮಾಡುವ ಉತ್ಸಾಹ ಎದ್ದು ಕಾಣುತ್ತಿತ್ತು. ಹಂಪಿಯ ರಥಬೀದಿ ಹಳದಿ ವಸ್ತ್ರಧಾರಿಗಳಿಂದ ಕಂಗೊಳಿಸುತ್ತಿತ್ತು.

ಇಂದು ತಾಲ್ಲೂಕಿನ ಹಂಪಿಯಲ್ಲಿ ಭಾನುವಾರ ಬೆಳಗಿನ ಜಾವ ಕಂಡು ಬಂದ ದೃಶ್ಯಗಳಿವು.

ವಿವಿಧ ಸಂಘ ಸಂಸ್ಥೆಗಳಿಂದ ಹಂಪಿಯಲ್ಲಿ ‘ಹೆರಿಟೇಜ್‌ ಮ್ಯಾರಾಥಾನ್‌’ ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಪಾಲ್ಗೊಳ್ಳಲು ವಿವಿಧ ಭಾಗಗಳಿಂದ ಜನರು ಬೆಳಿಗ್ಗೆಯೇ ಹಂಪಿಯಲ್ಲಿ ಸಮಾವೇಶಗೊಂಡಿದ್ದರು. ಬೆಳಕು ಹರಿಯುತ್ತಿದ್ದಂತೆ ಎಲ್ಲರೂ ಉತ್ಸಾಹದಿಂದ ಓಟದಲ್ಲಿ ಪಾಲ್ಗೊಂಡರು.

ADVERTISEMENT

ಹಂಪಿಯ ಸ್ಮಾರಕಗಳನ್ನು ಕಣ್ತುಂಬಿಕೊಳ್ಳುತ್ತ ಅದರ ಪರಿಸರದಲ್ಲಿ ಸಣ್ಣ ಸಣ್ಣ ಹೆಜ್ಜೆಗಳನ್ನು ಹಾಕಿದರು. ಎದುರು ಬಸವಣ್ಣ ಮಂಟಪದಿಂದ ಆರಂಭವಾದ ಮ್ಯಾರಾಥಾನ್‌, ಕಡಲೆಕಾಳು ಗಣಪ, ಸಾಸಿವೆಕಾಳು ಗಣಪ, ಕೃಷ್ಣ ದೇವಸ್ಥಾನ, ಕೆಳಸ್ತರ ಶಿವ ದೇವಾಲಯ, ಗಜಶಾಲೆ, ಮಹಾನವಮಿ ದಿಬ್ಬ, ಕಮಲಾಪುರದ ಮೂಲಕ ವಿಜಯ ವಿಠಲ ದೇಗುಲದ ವರೆಗೆ ನಡೆಯಿತು.

ಮ್ಯಾರಾಥಾನ್‌ಗೂ ಮುನ್ನ ಸ್ಪರ್ಧಿಗಳು ಹಂಪಿ ಎದುರು ಬಸವಣ್ಣ ದೇಗುಲದ ಸಂಗೀತಕ್ಕೆ ಹೆಜ್ಜೆ ಹಾಕಿದರು

ಐದು, 12 ಹಾಗೂ 21 ಕಿ.ಮೀ ಹೀಗೆ ಮೂರು ವಿಭಾಗಗಳಲ್ಲಿ ಏರ್ಪಡಿಸಿದ್ದ ಮ್ಯಾರಾಥಾನ್‌ನಲ್ಲಿ 600 ಜನ ಪಾಲ್ಗೊಂಡಿದ್ದರು. ಚಿಣ್ಣರು, ಮಹಿಳೆಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ತಾಲ್ಲೂಕು ಅಧ್ಯಕ್ಷ ಅಶ್ವಿನ್‌ ಕೋತಂಬ್ರಿ, ಮುನೀರ್‌ ಸಮೂಹದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೈಯದ್‌ ನಾಜಿಮುದ್ದೀನ್‌, ಹಂಪಿ ಪಿ.ಎಸ್‌.ಐ. ಕಾಳಿಂಗ ಎ., ಕಿರ್ಲೊಸ್ಕರ್‌ ವ್ಯವಸ್ಥಾಪಕ ನಿರ್ದೇಶಕ ರವಿ ಗುಮಾಸ್ತೆ ಅವರು ಹಸಿರು ನಿಶಾನೆ ತೋರಿಸಿ ಮ್ಯಾರಾಥಾನ್‌ಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅಶ್ವಿನ್‌ ಕೋತಂಬ್ರಿ, ‘ನಮ್ಮ ಶ್ರೀಮಂತ ಪರಂಪರೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಮ್ಯಾರಾಥಾನ್‌ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ, ಯುನೆಸ್ಕೊ, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ,ರೌಂಡ್‌ ಟೇಬಲ್‌, ಮುನೀರ್‌ ಮೋಟಾರ್ಸ್‌, ಮ್ಯಾಂಗೋ ಟ್ರೀ ಹೋಟೆಲ್‌, ಮಲ್ಲಿಗೆ ಹೋಟೆಲ್‌, ಅರ್ಬನ್‌ ಫಿಟ್ನೆಸ್‌ ಸ್ಟ್ಯಾಂಪ್‌ ಸ್ಟುಡಿಯೊ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಎದುರು ಬಸವಣ್ಣ ಸ್ಮಾರಕದ ಬಳಿ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಅಶ್ವಿನ್ ಕೋತಂಬ್ರಿ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.