ADVERTISEMENT

ಹಾಕಿ ಇಂಡಿಯಾ: ಸಿಐಸಿ ಆದೇಶಕ್ಕೆ ಹೈಕೋರ್ಟ್‌ ತಡೆ

ಪಿಟಿಐ
Published 2 ನವೆಂಬರ್ 2018, 13:45 IST
Last Updated 2 ನವೆಂಬರ್ 2018, 13:45 IST

ನವದೆಹಲಿ: ‍‍ಪ್ರಾಯೋಜಕತ್ವಕ್ಕೆ ಸಂಬಂಧಿಸಿದ ಮಾಹಿತಿ ನೀಡುವಂತೆ ಹಾಕಿ ಇಂಡಿಯಾಗೆ ಕೇಂದ್ರ ಮಾಹಿತಿ ಆಯೋಗ ನೀಡಿದ್ದ ಆದೇಶಕ್ಕೆ ದೆಹಲಿ ಹೈಕೋರ್ಟ್ ಶುಕ್ರವಾರ ತಡೆ ನೀಡಿದೆ.

2013ರಲ್ಲಿ ನಡೆದಿದ್ದ ಹಾಕಿ ಇಂಡಿಯಾ ಲೀಗ್‌ಗೆ ಲಭಿಸಿದ ಪ್ರಾಯೋಜಕತ್ವದ ಮೊತ್ತ, ನೀಡಿದ ಕಮಿಷನ್‌ ಹಣ ಮತ್ತು ವ್ಯಾಜ್ಯಗಳಿಗೆ ಸಂಬಂಧಿಸಿ ಖರ್ಚು ಮಾಡಿದ ಮೊತ್ತದ ಬಗ್ಗೆ ಮಾಹಿತಿ ನೀಡುವಂತೆ ಬಿಜೆಪಿ ಸಂಸದ ಕೀರ್ತಿ ಆಜಾದ್ ಹಾಕಿ ಇಂಡಿಯಾವನ್ನು ಕೋರಿದ್ದರು. ಇದಕ್ಕೆ ಸಂಸ್ಥೆ ಸ್ಪಂದಿಸದ ಕಾರಣ ಮಾಹಿತಿ ಆಯೋಗದ ಮೊರೆ ಹೋಗಿದ್ದರು. ಆಯೋಗವು ಅಕ್ಟೋಬರ್‌ 22ರಂದು ಪೂರಕವಾಗಿ ಆದೇಶ ನೀಡಿತ್ತು. ಷೋ ಕಾಸ್ ನೋಟಿಸ್ ಕೂಡ ಜಾರಿ ಮಾಡಿತ್ತು.

ಇದನ್ನು ಪ್ರಶ್ನಿಸಿ ಹಾಕಿ ಇಂಡಿಯಾ ನ್ಯಾಯಾಲಯದ ಮೊರೆ ಹೋಗಿತ್ತು. ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ಸುರೇಶ್ ಕೇತ್‌ ಅವರು ಹಾಕಿ ಇಂಡಿಯಾದ ಮನವಿಯ ಕುರಿತು ಹೇಳಿಕೆ ನೀಡಲು ಕೀರ್ತಿ ಆಜಾದ್ ಅವರಿಗೆ ನಾಲ್ಕು ವಾರಗಳ ಅವಧಿ ನೀಡಿದರು. ವಿಚಾರಣೆಯನ್ನು ಮುಂದಿನ ವರ್ಷದ ಜನವರಿ 18ಕ್ಕೆ ಮುಂದೂಡಿದರು.

ADVERTISEMENT

ಪ್ರಾಯೋಜಕತ್ವವು ವಾಣಿಜ್ಯ ಉದ್ದೇಶ ಹೊಂದಿರುವುರಿಂದ ಕೀರ್ತಿ ಆಜಾದ್ ಕೋರಿರುವ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ ಎಂದು ಹಾಕಿ ಇಂಡಿಯಾ ನ್ಯಾಯಾಲಯಕ್ಕೆ ತಿಳಿಸಿತು. ಪ್ರತಿ ವಾದ ನಡೆಸಿದ ಕೀರ್ತಿ ಆಜಾದ್ ಅವರ ವಕೀಲರು ‘ಹಾಕಿ ಇಂಡಿಯಾವು ಸಾರ್ವಜನಿಕ ಸಂಸ್ಥೆಯಾಗಿದ್ದು ಸರ್ಕಾರ ಮತ್ತು ಖಾಸಗಿ ವಲಯಗಳಿಂದ ಧಾರಾಳ ಹಣವನ್ನು ಪಡೆಯುತ್ತಿದೆ. ಇದರ ಮಾಹಿತಿಯನ್ನು ಒದಗಿಸುವ ಬದ್ಧತೆ ಸಂಸ್ಥೆಗೆ ಇರಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.