ADVERTISEMENT

ಹಾಕಿ ವಿಶ್ವಕಪ್‌ ಗೆಲ್ಲುವುದೊಂದೇ ‘ಗೋಲು’

ಜಿ.ಶಿವಕುಮಾರ
Published 25 ನವೆಂಬರ್ 2018, 19:30 IST
Last Updated 25 ನವೆಂಬರ್ 2018, 19:30 IST
   

ಹಾಕಿ ವಿಶ್ವಕಪ್‌ಗೆ ಭವ್ಯ ಪರಂಪರೆ ಇದೆ. ಏಕತೆ ಮತ್ತು ಸೌಹಾರ್ದತೆಯ ಆಶಯದೊಂದಿಗೆ 47 ವರ್ಷಗಳ ಹಿಂದೆ ಶುರುವಾದ ಈ ಟೂರ್ನಿ ವಿಶ್ವದ ಬಲಿಷ್ಠ ತಂಡಗಳು ಮತ್ತು ಶ್ರೇಷ್ಠ ಆಟಗಾರರ ಮುಖಾಮುಖಿಗೆ ವೇದಿಕೆಯಾಗಿದೆ. ಹಾಕಿಯ ಕಂಪನ್ನು ಜಗದಗಲಕ್ಕೆ ಪಸರಿಸುವ ಕಾರ್ಯವೂ ಟೂರ್ನಿಯ ಮೂಲಕ ನಡೆಯುತ್ತಿದೆ. ಹಾಕಿ ವಿಶ್ವಕಪ್‌ನ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಅಲ್ಲಿ ಪಾಕಿಸ್ತಾನದ ಪಾರಮ್ಯ ಎದ್ದುಕಾಣುತ್ತದೆ. ಟೂರ್ನಿಯಲ್ಲಿ ಅತಿ ಹೆಚ್ಚು ಪ್ರಶಸ್ತಿ ಗೆದ್ದ ಹಿರಿಮೆ ಈ ತಂಡದ್ದಾಗಿದೆ. ಆಸ್ಟ್ರೇಲಿಯಾ ಮತ್ತು ನೆದರ್ಲೆಂಡ್ಸ್‌ ಕೂಡಾ ಹೆಜ್ಜೆ ಗುರುತು ಮೂಡಿಸಿವೆ. ಭಾರತ, ದಾಖಲೆಯ 14ನೇ ಬಾರಿ ಟೂರ್ನಿಗೆ ಅರ್ಹತೆ ಗಳಿಸಿದೆ. ಆದರೆ ಪ್ರಶಸ್ತಿ ಗೆದ್ದಿದ್ದು ಒಮ್ಮೆ ಮಾತ್ರ. 1975ರಲ್ಲಿ ಅಜಿತ್‌ ‍ಪಾಲ್‌ ಸಿಂಗ್‌ ಸಾರಥ್ಯದ ತಂಡದಿಂದ ಈ ಸಾಧನೆ ಮೂಡಿಬಂದಿತ್ತು. ಅದಾದ ನಂತರ ತಂಡಕ್ಕೆ ಟ್ರೋಫಿ ಕೈಗೆಟುಕದಾಗಿದೆ. 14ನೇ ಆವೃತ್ತಿಯ ಟೂರ್ನಿ ಭಾರತದಲ್ಲೇ ನಡೆಯುತ್ತಿದೆ. ಹೀಗಾಗಿ ಆತಿಥೇಯರ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಡಲಾಗಿದೆ. ಮನಪ್ರೀತ್‌ ಸಿಂಗ್‌ ಬಳಗ 43 ವರ್ಷಗಳಿಂದ ಕಾಡುತ್ತಿರುವ ಪ್ರಶಸ್ತಿಯ ಕೊರಗನ್ನು ದೂರ ಮಾಡುತ್ತದೆಯೇ ಎಂಬ ಕುತೂಹಲವೂ ಈಗ ಗರಿಗೆದರಿದೆ.

**

ನೂರ್‌ ಅವರ ಕನಸಿನ ಕೂಸು

ADVERTISEMENT

ಹಾಕಿ ವಿಶ್ವಕಪ್‌ ಟೂರ್ನಿ ಪಾಕಿಸ್ತಾನದ ಏರ್‌ ಮಾರ್ಷಲ್‌ ನೂರ್‌ ಖಾನ್‌ ಅವರ ಕನಸಿನ ಕೂಸು. 1969, ಅಕ್ಟೋಬರ್‌ 26ರಂದು ನೂರ್‌ ಅವರು ವಿಶ್ವಕಪ್‌ ನಡೆಸುವ ಬಗ್ಗೆ ಎಫ್‌ಐಎಚ್‌ ಗಮನಸೆಳೆದಿದ್ದರು. 1970, ಏಪ್ರಿಲ್‌ 12ರಂದು ಬ್ರಸೆಲ್ಸ್‌ನಲ್ಲಿ ನಡೆದ ಸಭೆಯಲ್ಲಿ ಟೂರ್ನಿಯ ಆಯೋಜನೆಗೆ ಅನುಮೋದನೆ ನೀಡಲಾಗಿತ್ತು.

1971ರ ಅಕ್ಟೋಬರ್‌ನಲ್ಲಿ ಪಾಕಿಸ್ತಾನದಲ್ಲಿ ಚೊಚ್ಚಲ ವಿಶ್ವಕಪ್‌ ನಡೆಯಲು ತೀರ್ಮಾನಿಸಲಾಗಿತ್ತು. ಆದರೆ ಭದ್ರತೆಯ ಕಾರಣದಿಂದಾಗಿ ಟೂರ್ನಿಯನ್ನು ಬಾರ್ಸಿಲೋನಾಕ್ಕೆ ಸ್ಥಳಾಂತರಿಸಲಾಯಿತು. ಸ್ಪೇನ್‌ನ ರಿಯಲ್‌ ಕ್ಲಬ್‌ ಡಿ ಪೊಲೊ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಚಾಂಪಿಯನ್‌ ಆಗಿತ್ತು. ಮೊದಲ ಮೂರು ಟೂರ್ನಿಗಳನ್ನು ಎರಡು ವರ್ಷಕ್ಕೊಮ್ಮೆ ಆಯೋಜಿಸಲಾಗಿತ್ತು. 1978ರ ವಿಶ್ವಕಪ್‌ ಮೂರು ವರ್ಷಗಳ ಬಳಿಕ ನಡೆದಿತ್ತು. ನಂತರ ನಾಲ್ಕು ವರ್ಷಗಳಿಗೊಮ್ಮೆ ಟೂರ್ನಿ ನಡೆಸಲಾಗುತ್ತಿದೆ.

**

ನಿಮಗಿದು ತಿಳಿದಿರಲಿ

*ಭಾರತದಲ್ಲಿ ಮೂರನೇ ಬಾರಿ ಹಾಕಿ ವಿಶ್ವಕಪ್‌ ನಡೆಯುತ್ತಿದೆ.

*47 ವರ್ಷಗಳ ಇತಿಹಾಸದಲ್ಲಿ 25 ದೇಶಗಳು ಟೂರ್ನಿಯಲ್ಲಿ ಆಡಿವೆ.

*ಇದುವರೆಗೂ ಒಟ್ಟು 569 ಪಂದ್ಯಗಳು ನಡೆದಿದ್ದು, 2276 ಗೋಲುಗಳು ದಾಖಲಾಗಿವೆ.

*ಭಾರತ ತಂಡ 14ನೇ ಬಾರಿ ಟೂರ್ನಿಗೆ ಅರ್ಹತೆ ಗಳಿಸಿ ದಾಖಲೆ ನಿರ್ಮಿಸಿದೆ.

**

ಈ ಬಾರಿಯ ಟೂರ್ನಿಯ ಅಂಕಿ ಅಂಶ

ಟೂರ್ನಿ ನಡೆಯುವ ಅವಧಿ: ನವೆಂಬರ್‌ 28–ಡಿಸೆಂಬರ್‌ 16

ಸ್ಥಳ: ಕಳಿಂಗ ಕ್ರೀಡಾಂಗಣ, ಭುವನೇಶ್ವರ (ಒಡಿಶಾ).

16 ಈ ಬಾರಿ ಭಾಗವಹಿಸುತ್ತಿರುವ ತಂಡಗಳು

36 ಈ ಬಾರಿ ನಡೆಯುವ ಒಟ್ಟು ಪಂದ್ಯಗಳು

27 ಟೂರ್ನಿಯಲ್ಲಿ ಕಾರ್ಯನಿರ್ವಹಿಸುವ ತಾಂತ್ರಿಕ ಸಿಬ್ಬಂದಿ

**

ಯಾವ ಗುಂಪಿನಲ್ಲಿ ಯಾರು?

‘ಎ’ ಗುಂಪು – ಫ್ರಾನ್ಸ್‌, ಸ್ಪೇನ್‌, ನ್ಯೂಜಿಲೆಂಡ್‌, ಅರ್ಜೆಂಟೀನಾ

‘ಬಿ’ ಗುಂಪು – ಇಂಗ್ಲೆಂಡ್‌, ಆಸ್ಟ್ರೇಲಿಯಾ, ಚೀನಾ, ಐರ್ಲೆಂಡ್‌

‘ಸಿ’ ಗುಂಪು – ಭಾರತ, ಕೆನಡಾ‌, ಬೆಲ್ಜಿಯಂ, ದಕ್ಷಿಣ ಆಫ್ರಿಕಾ

‘ಡಿ’ ಗುಂಪು – ನೆದರ್ಲೆಂಡ್ಸ್‌, ಜರ್ಮನಿ, ಪಾಕಿಸ್ತಾನ, ಮಲೇಷ್ಯಾ

**

ಕಳಿಂಗ ಕ್ರೀಡಾಂಗಣದ ಬಗ್ಗೆ

1978ರಲ್ಲಿ ಈ ಕ್ರೀಡಾಂಗಣವನ್ನು ಸ್ಥಾಪಿಸಲಾಯಿತು. ಇದರಲ್ಲಿ ಫುಟ್‌ಬಾಲ್‌, ಹಾಕಿ, ಬ್ಯಾಸ್ಕೆಟ್‌ಬಾಲ್‌, ಟೆನಿಸ್‌, ಟೇಬಲ್‌ ಟೆನಿಸ್‌ ಮತ್ತು ವಾಲಿಬಾಲ್‌ ಅಂಗಳಗಳಿವೆ. ಜೊತೆಗೆ ಅತ್ಯಾಧುನಿಕ ಈಜುಕೊಳ ಮತ್ತು ಎಂಟು ಲೇನ್‌ಗಳ ಅಥ್ಲೆಟಿಕ್ಸ್‌ ಟ್ರ್ಯಾಕ್‌ ಕೂಡಾ ಇದೆ. ಹಾಕಿ ಕ್ರೀಡಾಂಗಣ 15,000 ಆಸನ ಸಾಮರ್ಥ್ಯ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.