ADVERTISEMENT

ಫ್ರಾನ್ಸ್ ತಂಡವನ್ನು ಮಣಿಸಿ ಕ್ವಾರ್ಟರ್‌ಫೈನಲ್‌ಗೆ ಜರ್ಮನಿ

ಪಿಟಿಐ
Published 23 ಜನವರಿ 2023, 17:40 IST
Last Updated 23 ಜನವರಿ 2023, 17:40 IST
ಫ್ರಾನ್ಸ್ ತಂಡದ ಪೀಟರ್ ವ್ಯಾನ್ ಸ್ಟ್ರಾಟೆನ್‌ (ಎಡ) ಮತ್ತು ಜರ್ಮನಿಯ ಹ್ಯಾನೆಸ್‌ ಮುಲ್ಲರ್ ನಡುವೆ ಚೆಂಡಿಗಾಗಿ ಪೈಪೋಟಿ– ಪಿಟಿಐ ಚಿತ್ರ
ಫ್ರಾನ್ಸ್ ತಂಡದ ಪೀಟರ್ ವ್ಯಾನ್ ಸ್ಟ್ರಾಟೆನ್‌ (ಎಡ) ಮತ್ತು ಜರ್ಮನಿಯ ಹ್ಯಾನೆಸ್‌ ಮುಲ್ಲರ್ ನಡುವೆ ಚೆಂಡಿಗಾಗಿ ಪೈಪೋಟಿ– ಪಿಟಿಐ ಚಿತ್ರ   

ಭುವನೇಶ್ವರ: ಫ್ರಾನ್ಸ್ ಎದುರು ಭರ್ಜರಿ ಜಯ ಗಳಿಸಿದ ಜರ್ಮನಿ ತಂಡವು ಎಫ್‌ಐಎಚ್‌ ಪುರುಷರ ವಿಶ್ವಕಪ್ ಹಾಕಿ ಟೂರ್ನಿಯ ಎಂಟರಘಟ್ಟ ತಲುಪಿತು.

ಇಲ್ಲಿಯ ಕಳಿಂಗ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಕ್ರಾಸ್‌ಓವರ್ ಪಂದ್ಯದಲ್ಲಿ ಜರ್ಮನಿ 5–1ರಿಂದ ಫ್ರಾನ್ಸ್ ತಂಡವನ್ನು ಮಣಿಸಿತು.

ಪಂದ್ಯದ ಆರಂಭದಿಂದಲೇ ಪಾರಮ್ಯ ಮೆರೆದ ಜರ್ಮನಿ ತಂಡದ ಪರ ಮಿಟ್‌ಕಾವು ಮಾರ್ಕೊ 14ನೇ ನಿಮಿಷದಲ್ಲಿ ಫೀಲ್ಡ್ ಗೋಲು ದಾಖಲಿಸಿ ಮುನ್ನಡೆ ತಂದುಕೊಟ್ಟರು. ವೆಲ್ಲೆನ್‌ ನಿಕ್ಲಾಸ್‌ (18ನೇ ನಿ.), ಗ್ರಾಂಬಸ್‌ ಮ್ಯಾಟ್ಸ್ (23ನೇ ನಿ.) ಗಳಿಸಿದ ಗೋಲುಗಳು ತಂಡದ ಮುನ್ನಡೆಯನ್ನು 3–0ಗೆ ಹೆಚ್ಚಿಸಿದವು.

ADVERTISEMENT

24ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಟ್ರಾಂಪರ್ಟ್ಜ್‌ ಮೊರಿಜ್‌ ಗೋಲಿನಲ್ಲಿ ಪರಿವರ್ತಿಸಿ ಜರ್ಮನಿ ಮುನ್ನಡೆಯನ್ನು ಹಿಗ್ಗಿಸಿದರು.

ಗೋಲಿಗಾಗಿ ಪ್ರಯತ್ನಿಸುತ್ತಲೇ ಇದ್ದ ಫ್ರಾನ್ಸ್ 57ನೇ ನಿಮಿಷದಲ್ಲಿ ಯಶಸ್ಸು ಸಾಧಿಸಿತು. ಪೆನಾಲ್ಟಿ ಕಾರ್ನರ್‌ನಲ್ಲಿ ಗೊಯೆತ್ ಫ್ರಾಂಕೊಯಿಸ್‌ ಚೆಂಡನ್ನು ಗುರಿ ಸೇರಿಸಿದರು. ಇದಾದ ಎರಡು ನಿಮಿಷಗಳ ಬಳಿಕ ಪೆಲ್ಲಾಟ್‌ ಗೊಂಜಾಲೊ ಜರ್ಮನಿ ತಂಡದ ಪರ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಐದನೇ ಗೋಲು ಗಳಿಸಿದರು.

ಇನ್ನೊಂದು ಪಂದ್ಯದಲ್ಲಿ ಕೊರಿಯಾ ಪೆನಾಲ್ಟಿ ಶೂಟೌಟ್‌ನಲ್ಲಿ 3–2ರಿಂದ ಅರ್ಜೆಂಟೀನಾವನ್ನು ಮಣಿಸಿ ಎಂಟರಘಟ್ಟ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.