ADVERTISEMENT

ವಿಶ್ವಕಪ್‌ ಹಾಕಿ: ಫ್ರಾನ್ಸ್‌ ತಂಡದ ಜಯಭೇರಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 19:51 IST
Last Updated 7 ಡಿಸೆಂಬರ್ 2018, 19:51 IST
ಅರ್ಜೆಂಟೀನಾ ಮತ್ತು ಫ್ರಾನ್ಸ್‌ ತಂಡದ ಆಟಗಾರರ ಪೈಪೋಟಿಯ ಕ್ಷಣ –ಪಿಟಿಐ ಚಿತ್ರ
ಅರ್ಜೆಂಟೀನಾ ಮತ್ತು ಫ್ರಾನ್ಸ್‌ ತಂಡದ ಆಟಗಾರರ ಪೈಪೋಟಿಯ ಕ್ಷಣ –ಪಿಟಿಐ ಚಿತ್ರ   

ಭುವನೇಶ್ವರ: ಐದು ಫೀಲ್ಡ್‌ ಗೋಲುಗಳನ್ನು ದಾಖಲಿಸಿದ ಫ್ರಾನ್ಸ್‌ ತಂಡ ಹಾಕಿ ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಜಯಭೇರಿ ಮೊಳಗಿಸಿದೆ.

ಕಳಿಂಗ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಹಣಾಹಣಿಯಲ್ಲಿ ಫ್ರಾನ್ಸ್‌ 5–3 ಗೋಲುಗಳಿಂದ ಅರ್ಜೆಂಟೀನಾ ತಂಡವನ್ನು ಸೋಲಿಸಿತು.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಫ್ರಾನ್ಸ್‌ ತಂಡ 18ನೇ ನಿಮಿಷದಲ್ಲಿ ಖಾತೆ ತೆರೆಯಿತು. ಹ್ಯೂಗೊ ಜೆನೆಸ್ಟೆಟ್‌ ಚೆಂಡನ್ನು ಗುರಿ ಮುಟ್ಟಿಸಿದರು.

ADVERTISEMENT

23ನೇ ನಿಮಿಷದಲ್ಲಿ ಕೈಚಳಕ ತೋರಿದ ವಿಕ್ಟರ್‌ ಚಾರ್ಲೆಟ್‌ 2–0 ಮುನ್ನಡೆಗೆ ಕಾರಣರಾದರು. 26ನೇ ನಿಮಿಷದಲ್ಲಿ ಅರಿಸ್ಟಿಡೆ ಕೊರಿಸ್ನೆ ಗೋಲು ಬಾರಿಸಿ ಮುನ್ನಡೆಯನ್ನು 3–0ಗೆ ಹೆಚ್ಚಿಸಿದರು. 28ನೇ ನಿಮಿಷದಲ್ಲಿ ಅರ್ಜೆಂಟೀನಾ ತಂಡದ ಲುಕಾಸ್‌ ಮಾರ್ಟಿನೆಜ್‌ ಫೀಲ್ಡ್‌ ಗೋಲು ಗಳಿಸಿದರು. 30ನೇ ನಿಮಿಷದಲ್ಲಿ ಫೀಲ್ಡ್‌ ಗೋಲು ದಾಖಲಿಸಿದ ಗ್ಯಾಸ್ಪರ್ಡ್‌ ಬೌಮಾಗಾರ್ಟೆನ್‌ ಫ್ರಾನ್ಸ್‌ ತಂಡಕ್ಕೆ 4–1ರ ಮುನ್ನಡೆ ತಂದುಕೊಟ್ಟರು. 44 ಮತ್ತು 48ನೇ ನಿಮಿಷಗಳಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ಅರ್ಜೆಂಟೀನಾ ತಂಡದ ಗೊಂಜಾಲೊ ಪೀಲಟ್‌ ಚೆಂಡನ್ನು ಗುರಿ ಮುಟ್ಟಿಸಿದರು. 54ನೇ ನಿಮಿಷದಲ್ಲಿ ಫ್ರಾಂಕೊಯಿಸ್‌ ಗೋಯೆತ್‌ ಗೋಲು ಗಳಿಸಿ ಫ್ರಾನ್ಸ್‌ ತಂಡದ ಸಂಭ್ರಮಕ್ಕೆ ಕಾರಣರಾದರು.

ನ್ಯೂಜಿಲೆಂಡ್‌ ಮತ್ತು ಸ್ಪೇನ್‌ನ ನಡುವಣ ದಿನದ ಇನ್ನೊಂದು ಪಂದ್ಯ 2–2 ಗೋಲುಗಳಿಂದ ಸಮಬಲವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.