ADVERTISEMENT

90 ಮೀ. ಸಾಧನೆ ಗುರಿ: ಚೋಪ್ರಾ

​ಪ್ರಜಾವಾಣಿ ವಾರ್ತೆ
Published 7 ಜನವರಿ 2023, 14:42 IST
Last Updated 7 ಜನವರಿ 2023, 14:42 IST
ನೀರಜ್ ಚೋಪ್ರಾ
ನೀರಜ್ ಚೋಪ್ರಾ   

ನವದೆಹಲಿ (ಪಿಟಿಐ): ಜಾವೆಲಿನ್‌ಅನ್ನು 90 ಮೀಟರ್ಸ್‌ ಗೆರೆ ದಾಟಿಸುವುದು ಈ ವರ್ಷದ ನನ್ನ ಗುರಿ ಎಂದು ನೀರಜ್‌ ಚೋಪ್ರಾ ಹೇಳಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದ 24 ವರ್ಷದ ಚೋಪ್ರಾ 2022 ರಲ್ಲೂ ನಿರೀಕ್ಷೆಗೆ ತಕ್ಕಂತೆ ಉತ್ತಮ ಪ್ರದರ್ಶನ ನೀಡಿದ್ದರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಹಾಗೂ ಡೈಮಂಡ್‌ ಲೀಗ್‌ ಫೈನಲ್ಸ್‌ನಲ್ಲಿ ಚಿನ್ನ ಜಯಿಸಿದ್ದರು. ಆದರೆ 90 ಮೀ. ಸಾಧನೆ ಮಾಡಲು ಆಗಿರಲಿಲ್ಲ.

ಡೈಮಂಡ್‌ ಲೀಗ್‌ನಲ್ಲಿ ಸ್ಟಾಕ್‌ಹೋಂ ಲೆಗ್‌ ಸ್ಪರ್ಧೆಯಲ್ಲಿ ಅವರು ಜಾವೆಲಿನ್‌ಅನ್ನು 89.94 ಮೀ. ದೂರ ಎಸೆದಿದ್ದರು. 90 ಮೀ. ಸಾಧನೆಯನ್ನು ಕೇವಲ 6 ಸೆಂ.ಮೀ. ಅಂತರದಿಂದ ಕಳೆದುಕೊಂಡಿದ್ದರು.

ADVERTISEMENT

‘ನೀರಜ್‌ 90 ಮೀ. ಸಾಧನೆ ಮಾಡುವರೇ ಎಂಬ ಪ್ರಶ್ನೆಗೆ ಈ ವರ್ಷ ಅಂತ್ಯಹಾಡುವೆನು ಎಂಬ ವಿಶ್ವಾಸವಿದೆ’ ಎಂದು ಮಾಧ್ಯಮವರೊಂದಿಗಿನ ವಿಡಿಯೊ ಸಂವಾದದಲ್ಲಿ ಅವರು ತಿಳಿಸಿದರು.

‘ಹೌದು. 90 ಮೀ. ಸಾಧನೆಯನ್ನು ಕೇವಲ ಆರು ಸೆಂ.ಮೀ.ಗಳ ಅಂತರದಿಂದ ತಪ್ಪಿಸಿಕೊಂಡಿದ್ದೆ. ಜಾವೆಲಿನ್‌ ಎಸೆಯುವ ವೇಳೆ ನನ್ನ ಕಾಲನ್ನು ಅಲ್ಪ ಮುಂದಿಟ್ಟಿದ್ದರೂ, ಆ ಸಾಧನೆ ಮಾಡಬಹುದಿತ್ತು’ ಎಂದರು.

‘ನಿರೀಕ್ಷೆಗಳ ಭಾರ ನನ್ನ ಮೇಲೆ ಯಾವುದೇ ಪರಿಣಾಮ ಬೀರದು. ಒಂದು ದಿನ ಆ ಸಾಧನೆ ಮೂಡಿಬರಲಿದೆ. ಕಳೆದ ವರ್ಷ ಅಥವಾ ಅದಕ್ಕಿಂತ ಹಿಂದಿನ ವರ್ಷ ಆಗಬೇಕಿತ್ತು. ಆದರೆ ಆ ಸಾಧನೆ ಮೂಡಿಬರಲು ದೇವರು ಒಂದು ಸೂಕ್ತ ಸಮಯ ಮತ್ತು ಸ್ಥಳವನ್ನು ನಿಗದಿಪಡಿಸಿರಬೇಕು’ ಎಂದು ನುಡಿದರು.

‘ಈ ಋತುವಿನಲ್ಲಿ ನನಗೆ ಮೂರು ಪ್ರಮುಖ ಕೂಟಗಳು ಇವೆ. ವಿಶ್ವ ಚಾಂಪಿಯನ್‌ಷಿಪ್‌, ಏಷ್ಯನ್‌ ಕ್ರೀಡಾಕೂಟ ಮತ್ತು ಡೈಮಂಡ್‌ ಲೀಗ್‌ ಫೈನಲ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಲು ಪ್ರಯತ್ನಿಸುವೆನು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.