ADVERTISEMENT

ಸೆಪ್ಟೆಂಬರ್‌ ವೇಳೆಗೆ ಟೂರ್ನಿಗಳು ಆರಂಭ: ಕ್ರೀಡಾ ಸಚಿವ‌ ರಿಜಿಜು ವಿಶ್ವಾಸ

ಪಿಟಿಐ
Published 24 ಜುಲೈ 2020, 14:30 IST
Last Updated 24 ಜುಲೈ 2020, 14:30 IST
ಕಿರಣ್‌ ರಿಜಿಜು
ಕಿರಣ್‌ ರಿಜಿಜು   

ನವದೆಹಲಿ: ದೇಶದಲ್ಲಿ ಸೆಪ್ಟೆಂಬರ್‌–ಅಕ್ಟೋಬರ್‌ ವೇಳೆಗೆ ಹಂತ ಹಂತವಾಗಿ ಟೂರ್ನಿಗಳನ್ನು ಸಂಘಟಿಸಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ. ಕೊರೊನಾ ಕಾಲದಲ್ಲಿ ಈ ಚಟುವಟಿಕೆಗಳು ಜನರ ಆತ್ಮವಿಶ್ವಾಸ ವೃದ್ಧಿಗೆ ನೆರವಾಗಲಿವೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

’ಕೋವಿಡ್‌ ಹಿನ್ನೆಲೆಯಲ್ಲಿ ರೂಪಿಸಿರುವ ನಿಯಮಗಳ (ಎಸ್‌ಒಪಿ) ಅನ್ವಯ ಈಗಾಗಲೇ ಕೆಲವು ನಿರ್ಬಂಧಗಳೊಂದಿಗೆ ಕೆಲವು ಕ್ರೀಡಾ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಈ ಮಾರ್ಗಸೂಚಿಗಳನ್ನು ಪ್ರತಿ ಕ್ರೀಡಾ ಸಂಸ್ಥೆಗಳು ಪಾಲಿಸಲೇಬೇಕು‘ ಎಂದು ಗುರುವಾರ ಕಾಮನ್‌ವೆಲ್ತ್‌ ರಾಷ್ಟ್ರಗಳ ಸಚಿವರ ಫೋರಮ್‌ ಉದ್ದೇಶಿಸಿ ಅವರು ಮಾತನಾಡಿದರು.

‘ಭಾರತದ ಪ್ರಮುಖ, ಒಲಿಂಪಿಕ್‌ ಟಿಕೆಟ್‌ ಗಿಟ್ಟಿಸಿರುವ ಕ್ರೀಡಾಪಟುಗಳು ವಿಶೇಷ ಶಿಬಿರಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ’ ಎಂದು ರಿಜಿಜು ನುಡಿದರು.

ADVERTISEMENT

’ಹಂತ ಹಂತವಾಗಿ ಕ್ರೀಡಾ ಟೂರ್ನಿಗಳನ್ನು ಆಯೋಜಿಸುವಂತೆ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಿಗೆ ಸೂಚಿಸಿದ್ದೇನೆ. ಈ ಸಂಕಷ್ಟದಕಾಲದಲ್ಲಿ ಜನರ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡಬೇಕಿದೆ. ಸೆಪ್ಟೆಂಬರ್‌–ಅಕ್ಟೋಬರ್‌ ವೇಳೆಗೆ ದೊಡ್ಡಮಟ್ಟದ ಟೂರ್ನಿಗಳೂ ಸೇರಿದಂತೆ ಸ್ಪರ್ಧಾತ್ಮಕ ಕ್ರೀಡೆಗಳು ಪುನರಾರಂಭವಾಗುವ ವಿಶ್ವಾಸವಿದೆ‘ ಎಂದು ರಿಜಿಜು ಹೇಳಿದರು.

ಕೋಚ್‌ಗಳಿಗಾಗಿ ಕೌಶಲ ವೃದ್ಧಿ ಹಾಗೂ ಅಥ್ಲೀಟ್‌ಗಳಿಗಾಗಿ ಆನ್‌ಲೈನ್‌ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ಭಾರತ ನಡೆಸಿರುವ ಪ್ರಯತ್ನವನ್ನು ಸಚಿವರು ಕಾಮನ್‌ವೆಲ್ತ್‌ ನಾಯಕರೊಂದಿಗೆ ಹಂಚಿಕೊಂಡರು.

ಕೋವಿಡ್‌ ಪಿಡುಗು ಹೆಚ್ಚಾಗಿರುವ ಈ ಸಂದರ್ಭದಲ್ಲಿ ದೇಹವನ್ನು ಸದೃಢವಾಗಿಟ್ಟುಕೊಳ್ಳುವ ಕುರಿತು ರಿಜಿಜು ಒತ್ತಿ ಹೇಳಿದರು. ‘ಫಿಟ್‌ ಇಂಡಿಯಾ ಆಂದೋಲನ‘ದ ಬಗ್ಗೆ ಗಮನಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.