ADVERTISEMENT

2021ರ ಆರಂಭದಲ್ಲಿ ಕ್ರೀಡಾ ಚಟುವಟಿಕೆಗಳ ಆಯೋಜನೆ: ರಿಜಿಜು ವಿಶ್ವಾಸ

ಪಿಟಿಐ
Published 3 ಅಕ್ಟೋಬರ್ 2020, 12:09 IST
Last Updated 3 ಅಕ್ಟೋಬರ್ 2020, 12:09 IST
ಕಿರಣ್‌ ರಿಜಿಜು–ಪಿಟಿಐ ಚಿತ್ರ
ಕಿರಣ್‌ ರಿಜಿಜು–ಪಿಟಿಐ ಚಿತ್ರ   

ನವದೆಹಲಿ: 2021ರ ಆರಂಭದಲ್ಲಿ ಕೆಲವು ಟೂರ್ನಿಗಳನ್ನು ಆಯೋಜಿಸುವ ವಿಶ್ವಾಸವಿದೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಈ ವರ್ಷದ ಮಾರ್ಚ್‌ನಿಂದ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿವೆ. ರಾಷ್ಟ್ರೀಯ ಶಿಬಿರಗಳೂ ನಡೆದಿರಲಿಲ್ಲ.

ಕಳೆದ ಕೆಲವು ತಿಂಗಳಿನಿಂದ ಅಥ್ಲೀಟುಗಳು ಕ್ರಮೇಣ ತರಬೇತಿ ಆರಂಭಿಸಿದ್ದಾರೆ.

ADVERTISEMENT

’ಅಕ್ಟೋಬರ್‌ನಲ್ಲಿ ಕ್ರೀಡಾಚಟುವಟಿಕೆಗಳನ್ನು ಆರಂಭಿಸುವ ಯೋಚನೆ ಇತ್ತು. ಆದರೆ ಕೊರೊನಾ ಸೋಂಕು ಪ್ರಕರಣಗಳು ಏರುಗತಿಯಲ್ಲೇ ಸಾಗಿದ್ದರಿಂದ ಸಾಧ್ಯವಾಗಿಲ್ಲ‘ ಎಂದು ಶನಿವಾರ ನಡೆದ ಸ್ಪೋರ್ಟ್ಸ್ ಡಾಟ್‌ ಕಾಮ್‌ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ರಿಜಿಜು ಹೇಳಿದರು.

‘ಕೊರೊನಾಗೆ ಲಸಿಕೆ ಕಂಡುಹಿಡಿಯುವ ವಿಷಯದಲ್ಲಿ ಕೆಲವು ಆಶಾದಾಯಕ ಬೆಳವಣಿಗೆಗಳು ನಡೆಯುತ್ತಿವೆ. ಮುಂದಿನ ವರ್ಷದ ಆರಂಭದಲ್ಲಿ ಟೂರ್ನಿಗಳನ್ನು ಆರಂಭಿಸಬಹುದು‘ ಎಂದು ರಿಜಿಜು ನುಡಿದರು.

ಭಾರತದಲ್ಲಿ ಇದುವರೆಗೆ 64 ಲಕ್ಷಕ್ಕಿಂತ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಒಂದು ಲಕ್ಷಕ್ಕಿಂತ ಅಧಿಕ ಜನರ ಸಾವು ಸಂಭವಿಸಿದೆ.

ಕೆಲವು ಹಾಕಿ ಆಟಗಾರರು ಸೇರಿದಂತೆ ಹಲವು ಅಥ್ಲೀಟುಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು.

‘ಈಗಾಗಲೇ ತರಬೇತಿ ಪಡೆಯುತ್ತಿರುವ ಅಥ್ಲೀಟುಗಳ ಪ್ರಗತಿ ಪರಿಶೀಲಿಸಲಾಗುತ್ತಿದೆ. ಜೂನಿಯರ್‌ ಅಥ್ಲೀಟುಗಳ ಅಭ್ಯಾಸಕ್ಕೆ ಶೀಘ್ರ ಅವಕಾಶ ಕಲ್ಪಿಸಲಾಗುವುದು‘ ಎಂದು ರಿಜಿಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.