ADVERTISEMENT

ಕ್ಯಾಂಡಿಡೇಟ್ಸ್‌ ಚೆಸ್‌ ಮಹಿಳಾ ವಿಭಾಗ;ಹಂಪಿಗೆ 2ನೇ ಸ್ಥಾನ, ವೈಶಾಲಿಗೆ 5ನೇ ಗೆಲುವು

ಝೊಂಗ್‌ಯಿ ತಾನ್‌ಗೆ ಮಹಿಳಾ ಕಿರೀಟ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2024, 12:43 IST
Last Updated 22 ಏಪ್ರಿಲ್ 2024, 12:43 IST
ಚೀನಾದ ಝೊಂಗ್‌ಯಿ ತಾನ್
ಪಿಟಿಐ ಚಿತ್ರ
ಚೀನಾದ ಝೊಂಗ್‌ಯಿ ತಾನ್ ಪಿಟಿಐ ಚಿತ್ರ   

ಟೊರಾಂಟೊ: ಭಾರತದ ಗ್ರ್ಯಾಂಡ್‌ಮಾಸ್ಟರ್‌ ಕೋನೇರು ಹಂಪಿ ಅವರು ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯ ಮಹಿಳಾ ವಿಭಾಗದಲ್ಲಿ ಎಡರನೇ ಸ್ಥಾನ ಪಡೆದು ಉತ್ತಮ ಪ್ರದರ್ಶನ ನೀಡಿದರು. ಹಂಪಿ, ಈ ಟೂರ್ನಿಯಲ್ಲಿ ಬಹುತೇಕ ಅವಧಿಯಲ್ಲಿ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದ ಚೀನಾದ ಟಿಂಗ್ಜೀ ಲೀ ಅವರನ್ನು ಕೊನೆಯ (14ನೇ) ಸುತ್ತಿನಲ್ಲಿ 62 ನಡೆಗಳಲ್ಲಿ ಸೋಲಿಸಿದರು.

ನಿರೀಕ್ಷೆಯಂತೆ ಝೊಂಗ್‌ಯಿ ತಾನ್ (ಚೀನಾ) ಅವರು ಅಂತಿಮ ಸುತ್ತಿನಲ್ಲಿ ಉಕ್ರೇನ್‌ನ ಅನ್ನಾ ಮುಝಿಚುಕ್‌ ಜೊತೆ ‘ಡ್ರಾ’ ಮಾಡಿಕೊಂಡು ಪ್ರಶಸ್ತಿ ಗೆದ್ದುಕೊಂಡರು. ಅವರು 9 ಪಾಯಿಂಟ್ಸ್‌ ಸಂಗ್ರಹಿಸಿದರು. ಹಂಪಿ, ಟಿಂಗ್ಜೀ ಮತ್ತು ವೈಶಾಲಿ ಅವರು ತಲಾ 8.5 ಪಾಯಿಂಟ್ಸ್ ಸಂಗ್ರಹಿಸಿದರೂ ಟೈಬ್ರೇಕ್ ಆಧಾರದಲ್ಲಿ ಹಂಪಿ ಎರಡನೇ ಸ್ಥಾನಕ್ಕೇರಿದರು. ಟಿಂಗ್ಜೀ ಮೂರನೇ, ವೈಶಾಲಿ ನಾಲ್ಕನೇ ಸ್ಥಾನ ಪಡೆದರು.

ಇಲ್ಲಿ ಗೆಲ್ಲುವ ಮೂಲಕ ಝೊಂಗ್‌ಯಿ ಅವರು ತಮ್ಮ ದೇಶದವರೇ ಆದ ಹಾಲಿ ವಿಶ್ವ ಚಾಂಪಿಯನ್‌ ಜು ವೆನ್‌ಜುನ್‌ ಅವರಿಗೆ ಸವಾಲು ಹಾಕುವ ಅರ್ಹತೆ ಗಿಟ್ಟಿಸಿಕೊಂಡರು.

ADVERTISEMENT

ವೈಶಾಲಿಗೆ ಐದನೇ ಜಯ:

ಆದರೆ ಪ್ರಜ್ಞಾನಂದ ಅವರ ಅಕ್ಕ ಆರ್‌.ವೈಶಾಲಿ ಟೂರ್ನಿಯಲ್ಲಿ ಸತತ ಐದನೇ ಗೆಲುವನ್ನು ದಾಖಲಿಸಿದರು. ಈ ಬಾರಿ ರಷ್ಯಾದ ಕ್ಯಾಥೆರಿನಾ ಲಾಗ್ನೊ ಅವರನ್ನು ಸೋಲಿಸಿದರು. ಟೈಬ್ರೇಕರ್‌ನಲ್ಲಿ ಅವರಿಗೆ ನಾಲ್ಕನೇ ಸ್ಥಾನ ಒಲಿಯಿತು. ರೌಂಡ್‌ರಾಬಿನ್‌ ಟೂರ್ನಿಯ ಮೊದಲ ಏಳು ಸುತ್ತುಗಳಲ್ಲಿ ಚೆನ್ನೈ ಆಟಗಾರ್ತಿ ಅಷ್ಟೇನೂ ಉತ್ತಮ ಸಾಧನೆ ತೋರಿರಲಿಲ್ಲ. ಮೊದಲ ಏಳು ಸುತ್ತುಗಳ ನಂತರ ಅವರು ಬರೇ 2.5 ಪಾಯಿಂಟ್ಸ್ ಗಳಿಸಿದ್ದರು.

31ನೇ ನಡೆಯಲ್ಲಿ ಲಾಗ್ನೊ ಅವರು ತಪ್ಪು ಎಸಗಿದರು. ಅದರ ಪ್ರಯೋಜನ ಎತ್ತಿದ ವೈಶಾಲಿ 14 ನಡೆಗಳ ನಂತರ ಗೆಲುವನ್ನಾಗಿ ಪರಿವರ್ತಿಸಿದರು.

ಇನ್ನೊಂದು ಪಂದ್ಯದಲ್ಲಿ ಅಲೆಕ್ಸಾಂಡ್ರಾ ಗೊರ್ಯಾಚ್ಕಿನಾ (7) ಅವರು ಬಲ್ಗೇರಿಯಾದ ನುರ್ಗ್ಯುಲ್ ಸಲಿಮೋವಾ ಜೊತೆ ಡ್ರಾ ಮಾಡಿಕೊಂಡರು.

ಅಂತಿಮ ಸ್ಥಾನ: 1. ಝೊಂಗ್‌ಯಿ ತಾನ್‌, 2. ಕೋನೇರು ಹಂಪಿ. 3. ಟಿಂಗ್ಜೀ ಲೀ, 4. ವೈಶಾಲಿ ಆರ್‌., 5. ಅಲೆಕ್ಸಾಂಡ್ರಾ ಗೊರ್ಯಾಚ್ಕಿನಾ, 6. ಕ್ಯಾಥೆರಿನಾ ಲಾಗ್ನೊ, 7. ಸಲಿಮೋವಾ 8. ಅನ್ನಾ ಮುಝಿಚುಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.