ADVERTISEMENT

ಆ್ಯಗ್ನೆಸ್‌ ಪತಿ ಪೊಲೀಸ್ ಕಸ್ಟಡಿಯಲ್ಲಿ

ಏಜೆನ್ಸೀಸ್
Published 15 ಅಕ್ಟೋಬರ್ 2021, 16:06 IST
Last Updated 15 ಅಕ್ಟೋಬರ್ 2021, 16:06 IST
ಆ್ಯಗ್ನೆಸ್ ತಿರೊಪ್‌ –ರಾಯಿಟರ್ಸ್‌ ಚಿತ್ರ
ಆ್ಯಗ್ನೆಸ್ ತಿರೊಪ್‌ –ರಾಯಿಟರ್ಸ್‌ ಚಿತ್ರ   

ನೈರೋಬಿ: ಕೆನ್ಯಾದ ದೂರ ಅಂತರದ ಓಟಗಾರ್ತಿ ಆ್ಯಗ್ನೆಸ್ ತಿರೊಪ್‌ ಅವರ ಕೊಲೆಗೆ ಸಂಬಂಧಿಸಿ ಬಂಧನಕ್ಕೆ ಒಳಗಾಗಿರುವ ಪತಿ ಇಮ್ಯಾನ್ಯುಯೆಲ್ ರಾಟಿಚ್‌ ಅವರನ್ನು ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿ ಪದಕ ಗೆದ್ದಿರುವ 25 ವರ್ಷದ ತಿರೊಪ್‌ ಅವರನ್ನು ಪಶ್ಚಿಮ ಕೆನ್ಯಾದ ಇಟನ್‌ನಲ್ಲಿರುವ ಮನೆಯಲ್ಲಿ ಕತ್ತುಕೊಯ್ದು ಕೊಲೆ ಮಾಡಲಾಗಿತ್ತು. ಇದು ಕೆನ್ಯಾವನ್ನು ಮತ್ತು ಅಥ್ಲೆಟಿಕ್ಸ್ ಜಗತ್ತನ್ನು ಬೆಚ್ಚಿಬೀಳುವಂತೆ ಮಾಡಿತ್ತು. ಮೊಂಬಾಸ ನಗರದಲ್ಲಿ ಗುರುವಾರ ತಡರಾತ್ರಿ ಬಂಧಿಸಿರುವರಾಟಿಚ್‌ ಅವರನ್ನು ಶುಕ್ರವಾರ ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ. ಪ್ರಕರಣದಲ್ಲಿ ಅವರು ಪ್ರಮುಖ ಶಂಕಿತ ವ್ಯಕ್ತಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ನಡುವೆ ತಿರೊಪ್ ಅವರಿಗೆ ಎಲ್ಲೆಡೆಯಿಂದ ಶ್ರದ್ಧಾಂಜಲಿ ಹರಿದು ಬರುತ್ತಿದೆ. ನಿಗದಿತ ಅಥ್ಲೆಟಿಕ್ಸ್ ಕೂಟಗಳನ್ನು ಅವರ ಸ್ಮರಣಾರ್ಥ ಎರಡು ವಾರ ಮುಂದೂಡಲಾಗಿದೆ ಎಂದು ಅಥ್ಲೆಟಿಕ್ಸ್ ಕೆನ್ಯಾ ತಿಳಿಸಿದೆ.

ADVERTISEMENT

ಕಳೆದ ತಿಂಗಳು ಜರ್ಮನಿಯಲ್ಲಿ ನಡೆದಿದ್ದ 10 ಕಿಲೋಮೀಟರ್ಸ್ ಓಟದಲ್ಲಿ ತಿರೊಪ್ ವಿಶ್ವ ದಾಖಲೆ ಬರೆದಿದ್ದರು. ಟೋಕಿಯೊ ಒಲಿಂಪಿಕ್ಸ್‌ನ ಐದು ಸಾವಿರ ಮೀಟರ್ಸ್‌ ಓಟದಲ್ಲಿ ಅವರು ನಾಲ್ಕನೇ ಸ್ಥಾನ ಗಳಿಸಿದ್ದರು. 2017 ಮತ್ತು 2019ರ ವಿಶ್ವ ಚಾಂಪಿಯನ್‌ಷಿಪ್‌ನ10,000 ಮೀಟರ್ಸ್ ಓಟದಲ್ಲಿ ಕಂಚಿನ ಪದಕ ಗೆದ್ದಿದ್ದರು. 2015ರಲ್ಲಿ ಮಹಿಳೆಯರ ಕ್ರಾಸ್ ಕಂಟ್ರಿಯಲ್ಲಿ ಚಾಂಪಿಯನ್ ಆದ ಅತಿ ಕಿರಿಯ ಓಟಗಾರ್ತಿ ಎನಿಸಿಕೊಂಡಿದ್ದರು.

ರೈತ ಕುಟುಂಬದಲ್ಲಿ ಜನಿಸಿದ ತಿರೊಪ್ ಒಂದು ದಶಕದ ಹಿಂದೆ ಅಥ್ಲೆಟಿಕ್ಸ್‌ಗೆ ಪದಾರ್ಪಣೆ ಮಾಡಿದ್ದರು. ಆದರೆ ಕೆಲವೇ ವರ್ಷಗಳಲ್ಲಿ ಖ್ಯಾತಿ ಗಳಿಸಿದ್ದರು. ಕುಟುಂಬದ ಎಲ್ಲ ಜವಾಬ್ದಾರಿ ಅವರ ಹೆಗಲ ಮೇಲೆ ಇತ್ತು. ಮಕ್ಕಳ ಶಾಲಾ ಶುಲ್ಕ ಮತ್ತು ಬಟ್ಟೆಗೆ ಹಣ ಕೊಡುತ್ತಿದ್ದವರು ಅವರೇ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.