ADVERTISEMENT

ಹೈಲೊ ಓಪನ್‌: ಪೊಪೊವ್‌ಗೆ ಆಘಾತ ನೀಡಿದ ಕಿರಣ್‌ ಜಾರ್ಜ್

ಎಂಟರ ಘಟ್ಟಕ್ಕೆ ಲಕ್ಷ್ಯ, ರಕ್ಷಿತಾ

ಪಿಟಿಐ
Published 30 ಅಕ್ಟೋಬರ್ 2025, 15:54 IST
Last Updated 30 ಅಕ್ಟೋಬರ್ 2025, 15:54 IST
ಬ್ಯಾಡ್ಮಿಂಟನ್
ಬ್ಯಾಡ್ಮಿಂಟನ್   

ಸಾರ್‌ಬ್ರುಕೆನ್ (ಜರ್ಮನಿ): ವಿಶ್ವ ಕ್ರಮಾಂಕದಲ್ಲಿ 13ನೇ ಸ್ಥಾನದಲ್ಲಿರುವ ಟೋಮಾ ಜೂನಿಯರ್ ಪೊಪೊವ್‌ ಅವರಿಗೆ ಆಘಾತ ನೀಡಿದ ಭಾರತದ ಕಿರಣ್‌ ಜಾರ್ಜ್ ಅವರು ಹೈಲೊ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ಎಂಟರ ಘಟ್ಟಕ್ಕೆ ಲಗ್ಗೆಯಿಟ್ಟರು.

ಮಾಜಿ ರಾಷ್ಟ್ರೀಯ ಚಾಂಪಿಯನ್ ಜಾರ್ಜ್ ಥಾಮಸ್‌ ಅವರ ಪುತ್ರನಾಗಿರುವ ಕಿರಣ್‌, ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ 18–21, 21–18, 21–19 ರಿಂದ ಎಂಟನೇ ಶ್ರೇಯಾಂಕದ ಫ್ರಾನ್ಸ್‌ನ ಪೊಪೊವ್ ಅವರನ್ನು ಹಿಮ್ಮೆಟ್ಟಿಸಿದರು. 69 ನಿಮಿಷಗಳ ಸೆಣಸಾಟದಲ್ಲಿ ಕಿರಣ್ ಮೊದಲ ಸೆಟ್‌ ಕಳೆದುಕೊಂಡ ಬಳಿಕ ಚೇತರಿಸಿಕೊಳ್ಳುವಲ್ಲಿ ಯಶಸ್ವಿ ಆದರು.

ಬೆಂಗಳೂರಿನ ಪ್ರಕಾಶ ಪಡುಕೋಣೆ ಅಕಾಡೆಮಿಯಲ್ಲಿ ತರಬೇತಿಯಲ್ಲಿರುವ 25 ವರ್ಷ ವಯಸ್ಸಿನ ಕಿರಣ್ ಹೋದ ಜನವರಿಯಲ್ಲಿ ಕೊನೆಯ ಬಾರಿ ಸೂಪರ್ 750 ಟೂರ್ನಿಯ ಕ್ವಾರ್ಟರ್‌ಫೈನಲ್ ತಲುಪಿದ್ದರು.

ADVERTISEMENT

ಮುಂದಿನ ಸುತ್ತಿನಲ್ಲಿ ಅವರು ಎರಡನೇ ಶ್ರೇಯಾಂಕದ ಜೊನಾಥನ್ ಕ್ರಿಸ್ಟಿ (ಇಂಡೊನೇಷ್ಯಾ) ಮತ್ತು ತೈವಾನ್‌ನ ಚಿ ಯು ಜೆನ್ ನಡುವಣ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.

ಇದಕ್ಕೆ ಮೊದಲು ಲಕ್ಷ್ ಸೇನ್ 21–14, 21–11 ರಿಂದ ಸ್ವದೇಶದ ಎಸ್‌.ಸುಬ್ರಮಣಿಯನ್ ಅವರನ್ನು ಸೋಲಿಸಿ ಎಂಟರ ಘಟ್ಟ ತಲುಪಿದರು. ಲಕ್ಷ್ಯ ಮುಂದಿನ ಸುತ್ತಿನಲ್ಲಿ ಆರನೇ ಶ್ರೇಯಾಂಕದ ಲಿನ್‌ ಕ್ರಿಸ್ಟೋಫರ್‌ಸೆನ್‌ ಅವರನ್ನು ಎದುರಿಸಲಿದ್ದಾರೆ.

ಭಾರತದ ಆಟಗಾರ್ತಿಯರ ವ್ಯವಹಾರವಾಗಿದ್ದ ಸಿಂಗಲ್ಸ್‌ ಪಂದ್ಯದಲ್ಲಿ ರಕ್ಷಿತಾ ರಮೇಶ್ 19–21, 21–8, 21–13 ರಿಂದ ಸ್ವದೇಶದ ಶ್ರೀಯಾನ್ಶಿ ವಲಿಶೆಟ್ಟಿ ಅವರನ್ನು ಸೋಲಿಸಿ ಕ್ವಾರ್ಟರ್‌ಫೈನಲ್‌ಗೆ ಮುನ್ನಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.