ADVERTISEMENT

ಹೈಲೊ ಓಪನ್: ಎರಡನೇ ಸುತ್ತಿಗೆ ಲಕ್ಷ್ಯ ಸೇನ್

ಶ್ರೀಕಾಂತ್ ನಿರ್ಗಮನ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 13:13 IST
Last Updated 29 ಅಕ್ಟೋಬರ್ 2025, 13:13 IST
ಬ್ಯಾಡ್ಮಿಂಟನ್‌
ಬ್ಯಾಡ್ಮಿಂಟನ್‌   

ಸಾರ್‌ಬ್ರೂಕನ್ (ಜರ್ಮನಿ): ಭಾರತದ ತಾರೆ ಲಕ್ಷ್ಯ ಸೇನ್ ಅವರು ಬುಧವಾರ ಐದನೇ ಶ್ರೇಯಾಂಕದ ಕ್ರಿಸ್ಟೊ ಪೊಪೋವ್ ಅವರಿಗೆ ಆಘಾತ ನೀಡಿ ಹೈಲೊ ಓಪನ್ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್ ಪ್ರಿಕ್ವಾರ್ಟರ್‌ಫೈನಲ್ ತಲುಪಿದರು.

ಸುಮಾರು ₹4.19 ಕೋಟಿ ಬಹುಮಾನ ಹಣ ಹೊಂದಿರುವ ಈ ಟೂರ್ನಿಯ ಮೊದಲ ಸುತ್ತಿನಲ್ಲಿ ಲಕ್ಷ್ಯ 21–16, 22–20 ರಿಂದ ತಮಗಿಂತ ಉನ್ನತ ಕ್ರಮಾಂಕದ ಫ್ರೆಂಚ್‌ ಆಟಗಾರನನ್ನು ಸೋಲಿಸಿದರು.

ಹಾಂಗ್‌ಕಾಂಗ್‌ ಓಪನ್ ಫೈನಲ್ ತಲುಪಿದ್ದ ಲಕ್ಷ್ಯ ಮುಂದಿನ ಸುತ್ತಿನಲ್ಲಿ ಸ್ವದೇಶದ ಎಸ್‌.ಶಂಕರ್ ಮುತ್ತುಸಾಮಿ ಸುಬ್ರಮಣಿಯನ್ ಅವರನ್ನು ಎದುರಿಸಲಿದ್ದಾರೆ. ಶಂಕರ್ ಅವರು ಇನ್ನೊಂದು ಪಂದ್ಯದಲ್ಲಿ ಮಲೇಷ್ಯಾದ ಜುನ್ ಹಾವೊ ಲಿಯೊಂಗ್ ಅವರನ್ನು 21–14, 18–21, 21–16 ರಿಂದ ಸೋಲಿಸಿದರು.

ADVERTISEMENT

ಆದರೆ ಮತ್ತೊಬ್ಬ ಅನುಭವಿ ಆಟಗಾರ ಕಿದಂಬಿ ಶ್ರೀಕಾಂತ್ ಸವಾಲು ಬೇಗನೆ ಕೊನೆಗೊಂಡಿತು. ಅವರು ಮೊದಲ ಸುತ್ತಿನಲ್ಲಿ ಸ್ವದೇಶದ ಕಿರಣ್ ಜಾರ್ಜ್ ಅವರಿಗೆ 19–21, 11–21 ರಲ್ಲಿ ಸೋತರು. ಜಾರ್ಜ್ ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಎಂಟನೇ ಶ್ರೇಯಾಂಕದ ಟೊಮಾ ಜೂನಿಯರ್ ಪೊಪೊವ್ (ಫ್ರಾನ್ಸ್‌) ಅವರನ್ನು ಎದುರಿಸಲಿದ್ದಾರೆ. ಕ್ರಿಸ್ಟೊ ಅವರ ಸೋದರನಾಗಿರುವ ಟೊಮಾ ಇನ್ನೊಂದು ಪಂದ್ಯದಲ್ಲಿ ಇಂಗ್ಲೆಂಡ್‌ನ ಹ್ಯಾರಿ ಹುವಾಂಗ್ ಅವರನ್ನು 21–17, 19–21, 21–19 ರಿಂದ ಸೋಲಿಸಿದರು.

ಮಹಿಳೆಯರ ಸಿಂಗಲ್ಸ್‌ನ ಫಲಿತಾಂಶಗಳು ಭಾರತಕ್ಕೆ ಉತ್ತೇಜಕಾರಿಯಾಗಿದ್ದವು.  ಶ್ರೇಯಾಂಕರಹಿತ ಆಟಗಾರ್ತಿ, ಭಾರತದ ಶ್ರೀಯಾನ್ಶಿ ವಲಿಶೆಟ್ಟಿ 21–19, 21–12 ರಿಂದ ಮೂರನೇ ಶ್ರೇಯಾಂಕದ ಲಿನ್‌ ಹೊಜ್ಮಾರ್ಕ್ ಜಿಯರ್ಸ್ಫೆಲ್ಟ್‌ (ಡೆನ್ಮಾರ್ಕ್) ಅವರನ್ನು ಸೋಲಿಸಿದರು.

ಯುವ ಆಟಗಾರ್ತಿ ರಕ್ಷಿತಾ ರಾಮರಾಜ್‌ ಇನ್ನೊಂದು ಪಂದ್ಯದಲ್ಲಿ 21–14, 21–16 ರಿಂದ ಸ್ಪೇನ್‌ನ ಕ್ಲಾರಾ ಅಝರ್ಮೆಂಡಿ ಅವರನ್ನು ಸೋಲಿಸಿ 16ರ ಸುತ್ತಿಗೆ ಮುನ್ನಡೆದರು.

ಆದರೆ ಪ್ರತಿಭಾನ್ವಿತೆ ಅನ್ಮೋಲ್ ಖಾರ್ಬ್ ಬೇಗನೇ ನಿರ್ಗಮಿಸಿದರು. ಎಂಟನೇ ಶ್ರೇಯಾಂಕದ ಜೂಲಿ ದವಾಲ್ ಜಾಕೋಬ್‌ಸೆನ್ (ಡೆನ್ಮಾರ್ಕ್) ಅವರು 26–24, 23–21ರಲ್ಲಿ ಅನ್ಮೋಲ್ ಅವರನ್ನು ಪರಾಭವಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.