ADVERTISEMENT

ಒಲಿಂಪಿಕ್ ಕ್ವಾಲಿಫೈಯರ್ಸ್ ಟ್ರಯಲ್ಸ್‌: ಬಜರಂಗ್,ಸಾಕ್ಷಿಗೆ ಆಹ್ವಾನ: ಸಂಜಯ್ ಸಿಂಗ್

ಮಹಾರಾಷ್ಟ್ರದಲ್ಲಿ ಒಲಿಂಪಿಕ್ ಕ್ವಾಲಿಫೈಯರ್ಸ್ ಟ್ರಯಲ್ಸ್‌

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2024, 15:54 IST
Last Updated 16 ಫೆಬ್ರುವರಿ 2024, 15:54 IST
 ಸಂಜಯ್‌ ಸಿಂಗ್‌
 ಸಂಜಯ್‌ ಸಿಂಗ್‌   

ನವದೆಹಲಿ: ಮಹಾರಾಷ್ಟ್ರದಲ್ಲಿ ನಡೆಯಲಿರುವ ಒಲಿಂಪಿಕ್‌ ಕ್ವಾಲಿಫೈರ್ಸ್‌ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಕುಸ್ತಿಪಟುಗಳಾದ ಬಜರಂಗ್ ಪೂನಿಯಾ, ವಿನೇಶಾ ಫೋಗಾಟ್‌, ಸಾಕ್ಷಿ ಮಲಿಕ್ ಅವರಿಗೆ ಆಹ್ವಾನ ನೀಡಲಾಗುವುದು ಎಂದು ಭಾರತ ಕುಸ್ತಿ ಸಂಸ್ಥೆ (ಡಬ್ಲ್ಯುಎಫ್‌ಐ) ಅಧ್ಯಕ್ಷ ಸಂಜಯ್ ಸಿಂಗ್ ಅವರು ಶುಕ್ರವಾರ ಹೇಳಿದ್ದಾರೆ.

ವಿಶ್ವ ಆಡಳಿತ ಮಂಡಳಿ (ಯುಡಬ್ಲ್ಯುಬ್ಲ್ಯು) ಯಾವುದೇ ಕುಸ್ತಿಪಟು ತಾರತಮ್ಯವನ್ನು ಎದುರಿಸಬಾರದು ಎಂಬ ನಿಯಮದೊಂದಿಗೆ ಡಬ್ಲ್ಯುಎಫ್ಐ ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ತೆಗೆದುಹಾಕಿತ್ತು.

'ಭಾರತೀಯ ಕುಸ್ತಿಯ ಬೆಳವಣಿಗೆಗೆ ಯೋಜನೆ ಆರಂಭಿಸಿದ್ದೇವೆ. ಶೀಘ್ರದಲ್ಲೇ ಮಹಾರಾಷ್ಟ್ರದಲ್ಲಿ ಒಲಿಂಪಿಕ್ ಅರ್ಹತಾ ಸ್ಪರ್ಧೆಗಳಿಗಾಗಿ ಟ್ರಯಲ್ಸ್ ಆಯೋಜಿಸುತ್ತೇವೆ. ಬಜರಂಗ್, ವಿನೇಶ್ ಮತ್ತು ಸಾಕ್ಷಿ ಎಲ್ಲವನ್ನೂ ಮರೆತು ಟ್ರಯಲ್ಸ್‌ಗೆ ತಯಾರಿ ಪ್ರಾರಂಭಿಸಿ ದೇಶಕ್ಕಾಗಿ ಪದಕಗಳನ್ನು ಗೆಲ್ಲುವಂತೆ ಕೋರುತ್ತೇನೆ’ ಎಂದು ಸಂಜಯ್ ಸಿಂಗ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

ADVERTISEMENT

‘ಮೂವರು ಕುಸ್ತಿಪಟುಗಳಿಗೆ ಇಮೇಲ್, ವಾಟ್ಸ್‌ಆ್ಯಪ್ ಸಂದೇಶವನ್ನು ಕಳುಹಿಸುತ್ತೇನೆ ಮತ್ತು ಅಗತ್ಯವಿದ್ದರೆ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತೇನೆ. ನಿವೃತ್ತಿಯ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮತ್ತು ಒಲಿಂಪಿಕ್ ಪದಕ ಗೆಲ್ಲಲು ಮತ್ತೊಮ್ಮೆ ಪ್ರಯತ್ನಿಸುವಂತೆ  ಸಾಕ್ಷಿಯನ್ನು ಕೇಳುತ್ತೇನೆ’ ಎಂದು ಅವರು ಹೇಳಿದರು.

‘ಫೆಬ್ರವರಿ 9 ರಂದು ಯುಡಬ್ಲ್ಯುಬ್ಲ್ಯು ಭಾರತ ಕುಸ್ತಿ ಫೆಡರೇಷನ್‌ ಮೇಲಿನ ಅಮಾನತು ತೆಗೆದುಹಾಕಿದೆ. ಈಗ ಕುಸ್ತಿಪಟುಗಳು ಯಾರನ್ನು ಸಂಪರ್ಕಿಸಬೇಕು ಎಂಬ ಗೊಂದಲ ಇರುವುದಿಲ್ಲ ’ ಎಂದು ಸಂಜಯ್ ಹೇಳಿದರು.

ಪುರುಷರು ಮತ್ತು ಮಹಿಳೆಯರಿಗಾಗಿ ರಾಷ್ಟ್ರೀಯ ಶಿಬಿರವನ್ನು ಹೊಸ ಸ್ಥಳಕ್ಕೆ ಸ್ಥಳಾಂತರಿಸಬಹುದು ಎಂದು ಸಂಜಯ್‌ ಸಿಂಗ್ ಸುಳಿವು ನೀಡಿದರು.

ಈ ಹಿಂದೆ ಸೋನೆಪತ್ (ಪುರುಷರು) ಮತ್ತು ಲಖನೌ (ಮಹಿಳೆಯರು) ಸಾಯ್ ಕೇಂದ್ರಗಳಲ್ಲಿ ಶಿಬಿರಗಳು ನಡೆಯುತ್ತಿದ್ದವು.

‘ಪುರುಷರ ರಾಷ್ಟ್ರೀಯ ಶಿಬಿರಕ್ಕೆ ಮಹಾರಾಷ್ಟ್ರದಲ್ಲಿ ಉತ್ತಮ ಮೂಲಸೌಕರ್ಯಗಳಿವೆ ಎಂದು ಭಾವಿಸುತ್ತೇವೆ. ಈ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸುತ್ತೇವೆ. ಸಾಯ್ ಕೇಂದ್ರಗಳಲ್ಲಿ ಶಿಬಿರಗಳು ನಡೆಯಬೇಕಾದರೆ ಸರ್ಕಾರದ ಅನುಮತಿ ಬೇಕು’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.