ADVERTISEMENT

ಜಿಮ್ನಾಸ್ಟ್‌ ದೀಪಾ ಕರ್ಮಾಕರ್ ಅಮಾನತು: ಜಿಮ್ನಾಸ್ಟಿಕ್ ಸಂಸ್ಥೆಗೇ ಗೊತ್ತಿಲ್ಲ!

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2022, 15:22 IST
Last Updated 1 ಮಾರ್ಚ್ 2022, 15:22 IST
ದೀಪಾ ಕರ್ಮಾಕರ್
ದೀಪಾ ಕರ್ಮಾಕರ್   

ನವದೆಹಲಿ: ಭಾರತದ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರನ್ನು ಅಂತರರಾಷ್ಟ್ರೀಯ ಜಿಮ್ನಾಸ್ಟಿಕ್ಸ್‌ ಫೆಡರೇಷನ್ (ಎಫ್‌ಐಜಿ) ಅಮಾನತಿನಲ್ಲಿಟ್ಟಿದೆ. ಈ ವಿಷಯದ ಕುರಿತು ಭಾರತ ಜಿಮ್ನಾಸ್ಟಿಕ್ಸ್ ಫೆಡರೇಷನ್ ಅಚ್ಚರಿ ವ್ಯಕ್ತಪಡಿಸಿದೆ. ಈ ಕುರಿತು ತನಗೆ ಮಾಹಿತಿಯೇ ಇಲ್ಲ ಎಂದೂ ಹೇಳಿದೆ.

ಎಫ್‌ಐಜಿಯ ವೆಬ್‌ಸೈಟ್‌ನಲ್ಲಿ ದೀಪಾ ಅವರ ಹೆಸರು ಅಮಾನತು ಪಟ್ಟಿಯಲ್ಲಿದೆ. ಭಾರತದ ಜಿಮ್ನಾಸ್ಟ್‌ಗಳೆಲ್ಲರ ಹೆಸರುಗಳೆಲ್ಲವೂ ಈ ವೆಬ್‌ಸೈಟ್‌ನಲ್ಲಿವೆ. ಆದರೆ, ದೀಪಾ ಅವರ ಹೆಸರಿನ ಮುಂದೆ ಅಮಾನತು ಎಂದು ಗುರುತಿಸಲಾಗಿದೆ. ಉಳಿದವರೆಲ್ಲರನ್ನೂ ಸಕ್ರಿಯ ಎಂದು ಗುರುತಿಸಲಾಗಿದೆ.

2016ರ ರಿಯೊ ಒಲಿಂಪಿಕ್ಸ್‌ನ ವಾಲ್ಟ್‌ನಲ್ಲಿ ದೀಪಾ ನಾಲ್ಕನೇ ಸ್ಥಾನ ಗಳಿಸಿ ಗಮನ ಸೆಳೆದಿದ್ದರು. ಆದರೆ, ಗಾಯದ ಸಮಸ್ಯೆಯಿಂದಾಗಿ ಅವರು 2019ರಿಂದ ಯಾವುದೇ ಸ್ಪರ್ಧೆಯಲ್ಲಿಯೂ ಭಾಗವಹಿಸಿಲ್ಲ.

ADVERTISEMENT

‘ಎಫ್‌ಐಜಿಯಿಂದ ಈ ಕುರಿತು ನಮಗೆ ಯಾವುದೇ ಸಂದೇಶ ಬಂದಿಲ್ಲ. ಅವರನ್ನು ಅಮಾನತಿನಲ್ಲಿಡಲು ಕಾರಣವೇನು ಎಂಬುದೂ ಗೊತ್ತಿಲ್ಲ. ಇದು ಸತ್ಯವೋ ಅಥವಾ ಅಚಾತುರ್ಯದಿಂದ ನಡೆದಿರುವುದೋ ಗೊತ್ತಿಲ್ಲ. ಎಫ್‌ಐಜಿಯೊಂದಿಗಿನ ಮಾತುಕತೆಯಿಂದಷ್ಟೇ ಇದು ತಿಳಿಯಬೇಕಿದೆ’ ಎಂದು ಜಿಎಫ್‌ಐ ಅಧ್ಯಕ್ಷ ಸುಧೀರ್ ಮಿತ್ತಲ್ ತಿಳಿಸಿದ್ದಾರೆ.

ಅಗರ್ತಲಾದಲ್ಲಿರುವ ದೀಪಾ ಮತ್ತು ಅವರ ಕೋಚ್ ವಿಶ್ವೇಶ್ವರ್ ನಂದಿ ಅವರಿಂದ ಮಾಹಿತಿ ಪಡೆಯಲು ಮಾಡಿದ ಪ್ರಯತ್ನಗಳು ಫಲಿಸಲಿಲ್ಲ. ಅವರು ಫೋನ್ ಕರೆಗಳನ್ನು ಸ್ವೀಕರಿಸುತ್ತಿಲ್ಲ.

‘ಅಶಿಸ್ತು ಅಥವಾ ನಿಯಮ ಉಲ್ಲಂಘನೆಗಾಗಿ ಎಫ್‌ಐಜಿ ಇಂತಹ ಕ್ರಮ ತೆಗೆದುಕೊಂಡಿರಬೇಕು. ಆದರೆ, ಉದ್ದೀಪನ ಮದ್ದು ಸೇವನೆಯ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಆರೋಪ ಅವರ ಮೇಲಿಲ್ಲ. ಆ ಕಾರಣಕ್ಕೂ ಅವರ ಮೇಲೆ ಅಮಾನತು ಹಾಕಿರುವ ಸಾಧ್ಯತೆಗಳಿಲ್ಲ‘ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

2017ರಲ್ಲಿ ಅವರು ಗಾಯಗೊಂಡಿದ್ದರು. ಶಸ್ತ್ರಚಿಕಿತ್ಸೆ ಪಡೆದು ವಿಶ್ರಾಂತಿಗೆ ತೆರಳಿದ್ದರು. 2019ರಲ್ಲಿ ಬಾಕುನಲ್ಲಿ ನಡೆದಿದ್ದ ವಿಶ್ವಕಪ್ ಜಿಮ್ನಾಸ್ಟಿಕ್‌ನಲ್ಲಿ ಭಾಗವಹಿಸಿದ್ದರು. ಅದರ ನಂತರ ಯಾವುದೇ ಸ್ಪರ್ಧೆಯಲ್ಲಿಯೂ ಕಣಕ್ಕಿಳಿದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.