ADVERTISEMENT

ಛಲದಿಂದ ಹೋರಾಡಿ ಗೆದ್ದ ಹೀರೋಸ್‌

ಐಐಪಿಕೆಎಲ್‌: ತೆಲುಗು ಬುಲ್ಸ್‌ಗೆ ಸತತ ಎಂಟನೇ ಸೋಲು; ನಾಕೌಟ್‌ ಹಾದಿ ದುರ್ಗಮ

​ಪ್ರಜಾವಾಣಿ ವಾರ್ತೆ
Published 27 ಮೇ 2019, 18:58 IST
Last Updated 27 ಮೇ 2019, 18:58 IST
ಹರಿಯಾಣ ಹೀರೋಸ್‌ ತಂಡದ ಆಟಗಾರರು ತೆಲುಗು ಬುಲ್ಸ್‌ (ಹಸಿರು ಪೋಷಾಕು) ರೈಡರ್‌ನನ್ನು ಹಿಡಿದ ಕ್ಷಣ –ಪ್ರಜಾವಾಣಿ ಚಿತ್ರ/ಸವಿತಾ ಬಿ.ಆರ್‌
ಹರಿಯಾಣ ಹೀರೋಸ್‌ ತಂಡದ ಆಟಗಾರರು ತೆಲುಗು ಬುಲ್ಸ್‌ (ಹಸಿರು ಪೋಷಾಕು) ರೈಡರ್‌ನನ್ನು ಹಿಡಿದ ಕ್ಷಣ –ಪ್ರಜಾವಾಣಿ ಚಿತ್ರ/ಸವಿತಾ ಬಿ.ಆರ್‌   

ಬೆಂಗಳೂರು: ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ಹಿನ್ನಡೆ ಕಂಡರೂ ಎದೆಗುಂದದೆ ಛಲದಿಂದ ಹೋರಾಡಿದ ಹರಿಯಾಣ ಹೀರೋಸ್‌ ತಂಡದವರು ಚೊಚ್ಚಲ ಆವೃತ್ತಿಯ ಇಂಡೊ ಇಂಟರ್‌ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ನಲ್ಲಿ (ಐಐಪಿಕೆಎಲ್‌) ಗೆಲುವಿನ ಸಿಹಿ ಸವಿದಿದ್ದಾರೆ.

ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹೋರಾಟದಲ್ಲಿ ಹರಿಯಾಣ 44–36 ಪಾಯಿಂಟ್ಸ್‌ನಿಂದ ತೆಲುಗು ಬುಲ್ಸ್‌ ತಂಡವನ್ನು ಪರಾಭವಗೊಳಿಸಿತು.

ಹರಿಯಾಣ ತಂಡ ಲೀಗ್‌ನಲ್ಲಿ ದಾಖಲಿಸಿದ ಎರಡನೇ ಗೆಲುವು ಇದಾಗಿದೆ. ಇದರೊಂದಿಗೆ ತಂಡವು ಒಟ್ಟು ಪಾಯಿಂಟ್ಸ್‌ ಅನ್ನು ಐದಕ್ಕೆ ಹೆಚ್ಚಿಸಿಕೊಂಡಿದ್ದು ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಕಾಪಾಡಿಕೊಂಡಿದೆ.

ADVERTISEMENT

ಬುಲ್ಸ್‌ ತಂಡವು ಸತತ ಎಂಟನೇ ಪಂದ್ಯದಲ್ಲಿ ಸೋತಿದ್ದು, ನಾಕೌಟ್‌ ಪ್ರವೇಶದ ಹಾದಿಯನ್ನು ಇನ್ನಷ್ಟು ದುರ್ಗಮ ಮಾಡಿಕೊಂಡಿದೆ.

ಗೆಲುವಿನ ಅನಿವಾರ್ಯತೆಯೊಂದಿಗೆ ಅಂಗಣಕ್ಕಿಳಿದಿದ್ದ ತೆಲುಗು ತಂಡವು ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ಮೇಲುಗೈ ಸಾಧಿಸಿತು. ಪ್ರಥಮ ಕ್ವಾರ್ಟರ್‌ನಲ್ಲಿ ಈ ತಂಡದ ಆಟಗಾರರು ಆಕರ್ಷಕ ರೈಡಿಂಗ್‌ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ರಕ್ಷಣಾ ವಿಭಾಗದಲ್ಲೂ ಪರಿಣಾಮಕಾರಿ ಸಾಮರ್ಥ್ಯ ತೋರಿ 10–6ಯಿಂದ ಮುನ್ನಡೆ ಸಾಧಿಸಿದರು.

ಎರಡನೇ ಕ್ವಾರ್ಟರ್‌ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತು. ಉಭಯ ತಂಡಗಳ ಆಟಗಾರರೂ ರೈಡಿಂಗ್‌ನಲ್ಲಿ ಚುರುಕುತನ ತೋರಿದರು. ಅಂತಿಮವಾಗಿ ತೆಲುಗು ತಂಡವು 19–14ಯಿಂದ ಮುನ್ನಡೆ ಪಡೆದು ವಿರಾಮಕ್ಕೆ ಹೋಯಿತು.

ಆರಂಭಿಕ ನಿರಾಸೆಯಿಂದ ಹರಿಯಾಣ ಆಟಗಾರರು ವಿಶ್ವಾಸ ಕಳೆದುಕೊಳ್ಳಲಿಲ್ಲ. ಗುಣಮಟ್ಟದ ಆಟಕ್ಕೆ ಒತ್ತು ನೀಡಿದ ಈ ತಂಡವು ಮೂರನೇ ಕ್ವಾರ್ಟರ್‌ನಲ್ಲಿ 16–9ರಿಂದ ಎದುರಾಳಿಗಳನ್ನು ಹಿಂದಿಕ್ಕಿತು. ಇದರೊಂದಿಗೆ ತಂಡ 30–28ರಿಂದ ಮುನ್ನಡೆ ಗಳಿಸಿ ತಿರುಗೇಟು ನೀಡಿತು.

ನಿರ್ಣಾಯಕ ಎನಿಸಿದ್ದ ನಾಲ್ಕನೇ ಕ್ವಾರ್ಟರ್‌ನಲ್ಲೂ ಹರಿಯಾಣ ತಂಡದ ಕೈ ಮೇಲಾಯಿತು. ರೈಡಿಂಗ್‌ನಲ್ಲಿ ಮಿಂಚಿದ ಈ ತಂಡದ ಆಟಗಾರರು ಎದುರಾಳಿ ಆಟಗಾರರನ್ನು ರಕ್ಷಣಾ ಬಲೆಯೊಳಗೆ ಕೆಡವಿದರು. ಈ ಮೂಲಕ ಪಂದ್ಯ ಜಯಿಸಿ ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು.

ಮುಂದಿನ ಪಂದ್ಯದಲ್ಲಿ ಹರಿಯಾಣ ತಂಡವು ಚೆನ್ನೈ ಚಾಲೆಂಜರ್ಸ್‌ ಎದುರು ಪೈಪೋಟಿ ನಡೆಸಲಿದೆ. ತೆಲುಗು ತಂಡಕ್ಕೆ ಪಾಂಡಿಚೇರಿ ಪ್ರಿಡೇಟರ್ಸ್‌ ಸವಾಲು ಎದುರಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.