ADVERTISEMENT

ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ನಾಲ್ಕರ ಘಟ್ಟಕ್ಕೆ ಸಂಜೀತ್‌, ಸಿಮ್ರನ್‌ಜೀತ್

ಭಾರತದ ನಾಲ್ವರು ಸೆಮಿಫೈನಲ್‌ಗೆ

ಪಿಟಿಐ
Published 26 ಮೇ 2021, 12:48 IST
Last Updated 26 ಮೇ 2021, 12:48 IST
ಜಯದ ಸಂತಸದಲ್ಲಿ ಸಿಮ್ರನ್‌ಜೀತ್ ಕೌರ್‌ (ಬಲ)– ಟ್ವಿಟರ್ ಚಿತ್ರ
ಜಯದ ಸಂತಸದಲ್ಲಿ ಸಿಮ್ರನ್‌ಜೀತ್ ಕೌರ್‌ (ಬಲ)– ಟ್ವಿಟರ್ ಚಿತ್ರ   

ದುಬೈ:ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿಭಾರತದ ಬಾಕ್ಸರ್‌ಗಳು ಅದ್ಭುತ ಸಾಮರ್ಥ್ಯ ಮುಂದುವರಿಸಿದ್ದಾರೆ. ಮೂವರು ಮಹಿಳೆಯರು ಸೇರಿ ನಾಲ್ವರು ಮಂಗಳವಾರ ತಡರಾತ್ರಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು.

ಸಂಜೀತ್‌ (ಪುರುಷರ 91 ಕೆಜಿ ವಿಭಾಗ), ಸಾಕ್ಷಿ (ಮಹಿಳೆಯರ 54 ಕೆಜಿ ವಿಭಾಗ), ಜೈಸ್ಮಿನ್‌ (57 ಕೆಜಿ) ಹಾಗೂ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಸಿಮ್ರನ್‌ಜೀತ್ ಕೌರ್‌ (60 ಕೆಜಿ) ನಾಲ್ಕರ ಘಟ್ಟ ತಲುಪಿದವರು. ಮಂಗಳವಾರ ಶಿವ ಥಾಪಾ (64 ಕೆಜಿ) ಕೂಡ ಸೆಮಿಫೈನಲ್‌ಗೆ ಕಾಲಿಟ್ಟಿದ್ದರು.

ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ (51 ಕೆಜಿ) ಅವರು ಡ್ರಾ ಪ್ರಕಟಗೊಂಡ ದಿನವೇ ನಾಲ್ಕರ ಘಟ್ಟದಲ್ಲಿ ಸ್ಥಾನ ಖಚಿತಪಡಿಸಿದ್ದರು.

ADVERTISEMENT

ಇಂಡಿಯಾ ಓಪನ್ ಚಿನ್ನದ ಪದಕ ವಿಜೇತ ಸಂಜೀತ್ ಅವರು ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ 5–0ಯಿಂದ ಜಾಸುರ್‌ ಒರ್ಬೊನೊಯ್ ಸವಾಲು ಮೀರಿದರು. ಮುಂದಿನ ಬೌಟ್‌ನಲ್ಲಿ ಅವರು ಉಜ್ಬೆಕಿಸ್ತಾನದ ಸಂಜಾರ್ ತುರ್ಸನೊವ್ ಅವರನ್ನು ಎದುರಿಸುವರು. ತುರ್ಸನೊವ್‌ ಕಳೆದ ಆವೃತ್ತಿಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.

ಮಹಿಳೆಯರ ವಿಭಾಗದಲ್ಲಿ ಸಾಕ್ಷಿ 5–0ಯಿಂದ ತಜಿಕಿಸ್ತಾನದ ರುಹಾಫ್ಜೊ ಹಗಜರೊವಾ ಅವರನ್ನು ಮಣಿಸಿದ್ದು, ನಾಲ್ಕರ ಘಟ್ಟದಲ್ಲಿ ಕಜಕಸ್ತಾನ ದಿನಾ ಜೊಲೊಮನ್ ಅವರಿಗೆ ಮುಖಾಮುಖಿಯಾಗುಲಿದ್ದಾರೆ.

ಜೈಸ್ಮಿನ್‌ 4–1ರಿಂದ ಮಂಗೋಲಿಯಾದ ಓಯುಂಟ್ಸೆತ್ಸೆಗ್‌ ಯೇಸುಜೆನ್‌ ಅವರ ಸವಾಲು ಮೀರಿದ್ದು, ಮುಂದಿನ ಹಣಾಹಣಿಯಲ್ಲಿ ಕಜಕಸ್ತಾನದ ವ್ಲಾಡಿಸ್ಲಾವಾ ಕುಖ್ತಾ ಅವರನ್ನು ಎದುರಿಸುವರು. ಮತ್ತೊಂದು ಬೌಟ್‌ನಲ್ಲಿ, ಇತ್ತೀಚೆಗೆ ಕೋವಿಡ್‌ನಿಂದ ಚೇತರಿಸಿಕೊಂಡಿರುವ ಸಿಮ್ರನ್‌ಜೀತ್ ಅವರು 4–1ರಿಂದ ಉಜ್ಬೆಕಿಸ್ತಾನದ ರಾಯಖೊನಾ ಕೋದಿರೋವಾ ಅವರನ್ನು ಸೋಲಿಸಿದರು. ಸೆಮಿಫೈನಲ್‌ ಬೌಟ್‌ನಲ್ಲಿ ಅವರಿಗೆ ಕಜಕಸ್ತಾನದ ರಿಮ್ಮಾ ವೊಲೊಸೆಂಕೊ ಸವಾಲು ಎದುರಾಗಿದೆ.

ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ, ವಿಶ್ವ ಚಾಂಪಿಯನ್‌ಷಿಪ್ ಬೆಳ್ಳಿ ಪದಕ ವಿಜೇತ ಅಮಿತ್ ಪಂಘಲ್‌ (52 ಕೆಜಿ), ವಿಕಾಸ್ ಕೃಷ್ಣನ್ (69 ಕೆಜಿ) ಹಾಗೂ ಆಶಿಶ್ ಕುಮಾರ್ (75 ಕೆಜಿ) ಇನ್ನಷ್ಟೇ ಕಣಕ್ಕಿಳಿಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.