ADVERTISEMENT

ಸುಲ್ತಾನ್ ಆಫ್ ಜೋಹರ್ ಕಪ್ ಜೂನಿಯರ್‌ ಹಾಕಿ: ಭಾರತ ಫೈನಲ್‌ಗೆ

ಮಲೇಷ್ಯಾ ವಿರುದ್ಧ ಗೆಲುವು

ಪಿಟಿಐ
Published 17 ಅಕ್ಟೋಬರ್ 2025, 19:36 IST
Last Updated 17 ಅಕ್ಟೋಬರ್ 2025, 19:36 IST
ಗೋಲು ಗಳಿಸಿದ ಸಂಭ್ರಮದಲ್ಲಿ ಭಾರತ ಜೂನಿಯರ್‌ ಹಾಕಿ ತಂಡದ ಆಟಗಾರರು –ಹಾಕಿ ಇಂಡಿಯಾ ಎಕ್ಸ್‌ ಚಿತ್ರ
ಗೋಲು ಗಳಿಸಿದ ಸಂಭ್ರಮದಲ್ಲಿ ಭಾರತ ಜೂನಿಯರ್‌ ಹಾಕಿ ತಂಡದ ಆಟಗಾರರು –ಹಾಕಿ ಇಂಡಿಯಾ ಎಕ್ಸ್‌ ಚಿತ್ರ   

ಜೊಹರ್, ಮಲೇಷ್ಯಾ : ಭಾರತ ಜೂನಿಯರ್ ಪುರುಷರ ಹಾಕಿ ತಂಡವು ಶುಕ್ರವಾರ ಸುಲ್ತಾನ್ ಆಫ್ ಜೋಹರ್ ಕಪ್ ಟೂರ್ನಿಯಲ್ಲಿ ತನ್ನ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಆತಿಥೇಯ ಮಲೇಷ್ಯಾ ತಂಡವು 2–1 ಗೋಲುಗಳಿಂದ ಮಣಿಸಿ, ಫೈನಲ್‌ ಪ್ರವೇಶಿಸಿತು. 

ಭಾರತಕ್ಕೆ ಲಭಿಸಿದ ಎರಡು ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಗುರ್‌ಜೋತ್ ಸಿಂಗ್ (22ನೇ ನಿಮಿಷ) ಮತ್ತು ಸೌರಭ್ ಆನಂದ್ ಕುಶ್ವಾಹ (48ನೇ) ಗೋಲಾಗಿ ಪರಿವರ್ತಿಸಿದರು. ಮಲೇಷ್ಯಾ ಪರ ನವೀಶ್ ಪಣಿಕ್ಕರ್ (43ನೇ) ಚೆಂಡನ್ನು ಗುರಿ ಸೇರಿಸಿದರು. ಈ ಗೆಲುವಿನೊಂದಿಗೆ ಸುಲ್ತಾನ್ ಆಫ್ ಜೋಹರ್‌ ಕಪ್‌ನಲ್ಲಿ ಭಾರತವು ದಾಖಲೆಯ ಎಂಟನೇ ಬಾರಿ ಪ್ರಶಸ್ತಿ ಸುತ್ತು ತಲುಪಿದೆ.

ಭಾರತ ತಂಡವು (10 ಅಂಕ) ಶನಿವಾರಫೈನಲ್‌ನಲ್ಲಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿರುವ ಆಸ್ಟ್ರೇಲಿಯಾ (11 ಅಂಕ) ತಂಡವನ್ನು ಎದುರಿಸಲಿದೆ. ಗುಂಪು ಹಂತದಲ್ಲಿ ಆಸ್ಟ್ರೇಲಿಯಾ 4–2ರಿಂದ ಭಾರತದ ವಿರುದ್ಧ ಪಾರಮ್ಯ ಮೆರೆದಿತ್ತು. 

ADVERTISEMENT

ಗುಂಪಿನಲ್ಲಿ ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನ ಪಡೆದ ಬ್ರಿಟನ್‌ (7) ಮತ್ತು ಪಾಕಿಸ್ತಾನ (5) ತಂಡಗಳು ಮೂರನೇ ಸ್ಥಾನಕ್ಕಾಗಿ ಪೈಪೋಟಿ ನಡೆಸಲಿವೆ. ಮಲೇಷ್ಯಾ (4) ಮತ್ತು ನ್ಯೂಜಿಲೆಂಡ್‌ (4) ತಂಡಗಳು ಐದನೇ ಸ್ಥಾನಕ್ಕಾಗಿ ಸೆಣಸಾಡಲಿವೆ. ಟೂರ್ನಿಯಲ್ಲಿ ಒಟ್ಟು ಆರು ತಂಡಗಳು ಪಾಲ್ಗೊಂಡಿದ್ದವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.