ADVERTISEMENT

ಏಷ್ಯನ್‌ ವಾಲಿಬಾಲ್‌: ಕ್ವಾರ್ಟರ್‌ಗೆ ಭಾರತ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 19:30 IST
Last Updated 6 ಆಗಸ್ಟ್ 2019, 19:30 IST
ಭಾರತ ತಂಡದವರು ಸಮಾಲೋಚನೆಯಲ್ಲಿ ತೊಡಗಿದ್ದ ಕ್ಷಣ –ಟ್ವಿಟರ್‌ ಚಿತ್ರ
ಭಾರತ ತಂಡದವರು ಸಮಾಲೋಚನೆಯಲ್ಲಿ ತೊಡಗಿದ್ದ ಕ್ಷಣ –ಟ್ವಿಟರ್‌ ಚಿತ್ರ   

ನವದೆಹಲಿ (ಪಿಟಿಐ): ಭಾರತದ 23 ವರ್ಷದೊಳಗಿನವರ ಪುರುಷರ ತಂಡದವರು ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಏಷ್ಯನ್‌ ವಾಲಿಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಸೋಮವಾರ ರಾತ್ರಿ ನಡೆದ ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ ಅಮಿತ್‌ ಗುಲಿಯಾ ಸಾರಥ್ಯದ ಭಾರತ 2–3 ಸೆಟ್‌ಗಳಿಂದ ಥಾಯ್ಲೆಂಡ್‌ ಎದುರು ಪರಾಭವಗೊಂಡಿತು.

ಮೊದಲ ಎರಡು ಪಂದ್ಯಗಳಲ್ಲಿ ಚೀನಾ ಮತ್ತು ನ್ಯೂಜಿಲೆಂಡ್‌ ತಂಡಗಳನ್ನು ಮಣಿಸಿದ್ದ ಗುಲಿಯಾ ಬಳಗ ‘ಡಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು. ಇದರೊಂದಿಗೆ ಟೂರ್ನಿಯಲ್ಲಿ ಚೊಚ್ಚಲ ಬಾರಿ ಎಂಟರ ಘಟ್ಟ ಪ್ರವೇಶಿಸಿದ ಸಾಧನೆ ಮಾಡಿತು.

ADVERTISEMENT

ಭಾರತ ತಂಡದವರು ಥಾಯ್ಲೆಂಡ್‌ ಎದುರಿನ ಪೈಪೋಟಿಯ ಮೊದಲ ಸೆಟ್‌ನಲ್ಲಿ ಮಿಂಚಿದರು. 25–15ರಿಂದ ಸೆಟ್‌ ಕೈವಶ ಮಾಡಿಕೊಂಡು 1–0 ಮುನ್ನಡೆ ಗಳಿಸಿದರು.

ಎರಡನೇ ಸೆಟ್‌ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. ಉಭಯ ತಂಡಗಳು ತಲಾ 23 ಪಾಯಿಂಟ್ಸ್‌ ಗಳಿಸಿದ್ದವು. ಈ ಹಂತದಲ್ಲಿ ಚುರುಕಾಗಿ ಎರಡು ಪಾಯಿಂಟ್ಸ್‌ ಕಲೆಹಾಕಿದ ಥಾಯ್ಲೆಂಡ್‌ ಸಂಭ್ರಮಿಸಿತು.

ಮೂರನೇ ಸೆಟ್‌ನಲ್ಲೂ ಥಾಯ್ಲೆಂಡ್‌ ಆಟಗಾರರು ಮೇಲುಗೈ ಸಾಧಿಸಿದರು. 25–22ರಿಂದ ಗೆದ್ದ ಈ ತಂಡ 2–1 ಮುನ್ನಡೆ ಪಡೆಯಿತು.

ನಾಲ್ಕನೇ ಸೆಟ್‌ನಲ್ಲಿ ಭಾರತ ತಿರುಗೇಟು ನೀಡಿತು. ಗುಲಿಯಾ ಪಡೆಯ ಆಟಗಾರರು ಆಕರ್ಷಕ ಸರ್ವ್‌ ಮತ್ತು ಅಮೋಘ ಸ್ಮ್ಯಾಷ್‌ಗಳ ಮೂಲಕ ಎದುರಾಳಿಗಳನ್ನು ಕಂಗೆಡಿಸಿದರು. 25–19ರಿಂದ ಸೆಟ್‌ ಗೆದ್ದು 2–2ರಲ್ಲಿ ಸಮಬಲ ಸಾಧಿಸಿದರು.

ನಿರ್ಣಾಯಕ ಎನಿಸಿದ್ದ ಐದನೇ ಸೆಟ್‌ನಲ್ಲೂ ಉಭಯ ತಂಡಗಳು ಪರಿಣಾಮಕಾರಿಯಾಗಿ ಆಡಿದವು. 13–13ರಿಂದ ಸಮಬಲ ಹೊಂದಿದ್ದ ವೇಳೆ ಭಾರತದ ಆಟಗಾರರು ಕೆಲ ತಪ್ಪುಗಳನ್ನು ಮಾಡಿ ಕೈ ಸುಟ್ಟುಕೊಂಡರು.

ಭಾರತವು ಕ್ವಾರ್ಟರ್‌ ಫೈನಲ್‌ಗೂ ಮುನ್ನ ಜಪಾನ್‌ ಮತ್ತು ಕಜಕಸ್ತಾನ ತಂಡಗಳ ವಿರುದ್ಧ ಕ್ಲಾಸಿಫಿಕೇಷನ್‌ ಪಂದ್ಯಗಳನ್ನು ಆಡಲಿದೆ.

‘ಚೀನಾ ಮತ್ತು ನ್ಯೂಜಿಲೆಂಡ್‌ ತಂಡಗಳ ವಿರುದ್ಧ ನಮ್ಮವರು ಭಿನ್ನ ರಣನೀತಿ ಹೆಣೆದು ಆಡಿದ್ದರು. ಹೀಗಾಗಿ ಸುಲಭವಾಗಿ ಗೆಲ್ಲಲು ಸಾಧ್ಯವಾಗಿತ್ತು. ಥಾಯ್ಲೆಂಡ್‌ ಎದುರೂ ನಮ್ಮವರು ಚೆನ್ನಾಗಿ ಆಡಿದ್ದರು. ಎದುರಾಳಿಗಳು ಸ್ಮ್ಯಾಷ್‌ ಮಾಡಿದ ಚೆಂಡನ್ನು ‘ಬ್ಲ್ಯಾಕ್‌’ ಮಾಡುವಲ್ಲಿ ನಾವು ಎಡವಿದೆವು. ಕ್ವಾರ್ಟರ್‌ ಫೈನಲ್‌ಗೂ ಮುನ್ನ ಈಗಾಗಿರುವ ತಪ್ಪುಗಳನ್ನು ತಿದ್ದಿಕೊಳ್ಳುತ್ತೇವೆ’ ಎಂದು ಭಾರತ ತಂಡದ ಮುಖ್ಯ ಕೋಚ್‌ ಪ್ರೀತಮ್‌ ಸಿಂಗ್‌ ಚೌಹಾಣ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.