ಎಫ್‌ಐಎಚ್ ಪ್ರೊ ಹಾಕಿ ಲೀಗ್
ಲಂಡನ್: ಎಫ್‌ಐಎಚ್ ಪ್ರೊ ಹಾಕಿ ಲೀಗ್‌ನ ಯುರೋಪಿಯನ್ ಲೆಗ್‌ನಲ್ಲಿ ಅಲ್ಪ ಅಂತರದ ಎರಡು ಸೋಲು ಕಂಡಿರುವ ಭಾರತ ಮಹಿಳಾ ಹಾಕಿ ತಂಡ, ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ವಿಶ್ವದ ಎರಡನೇ ಕ್ರಮಾಂಕದ ಅರ್ಜೆಂಟೀನಾ ವಿರುದ್ಧ ಆಡಲಿದ್ದು, ಪುಟಿದೇಳುವ ತವಕದಲ್ಲಿದೆ.
ಹೋದ ವಾರದ ಕೊನೆಯಲ್ಲಿ ಭಾರತ 1–2 ಮತ್ತು 2–3 ಅಂತರದಲ್ಲಿ ಆಸ್ಟ್ರೇಲಿಯಾ ಎದುರು ಸೋಲು ಕಂಡಿತ್ತು. ಈಗ ಸೋಲಿನ ಗುಂಗಿನಿಂದ ಹೊರಬಂದು ಪ್ರಬಲ ಅರ್ಜೆಂಟೀನಾ ವಿರುದ್ಧ ಆಡಬೇಕಾಗಿದೆ. ಅರ್ಜೆಂಟೀನಾ ಇದುವರೆಗೆ ಆಡಿರುವ 12 ಪಂದ್ಯಗಳ ಪೈಕಿ ಏಳು ಪಂದ್ಯಗಳನ್ನು ಗೆದ್ದುಕೊಂಡಿದೆ.
‘ಅರ್ಜೆಂಟೀನಾ ತಂಡ ಕಠಿಣ ತಂಡಗಳಲ್ಲಿ ಒಂದು. ಆದರೆ ನಾವು ಹೋರಾಟ ನೀಡುವುದು ಶತಃಸಿದ್ಧ. ಅವರನ್ನು ಎದುರಿಸಲು ಉತ್ತಮ ರೀತಿಯಲ್ಲಿ ತರಬೇತಿ ಪಡೆದಿದ್ದೇವೆ. ಆ ತಂಡದ ವಿರುದ್ಧ ನಿರ್ಣಾಯಕ ಪಾಯಿಂಟ್‌ಗಳನ್ನು ಪಡೆಯಲು ತಂತ್ರಗಳನ್ನು ರೂಪಿಸಿದ್ದೇವೆ’ ಎಂದು ಭಾರತ ತಂಡದ ನಾಯಕಿ ಸಲೀಮಾ ಟೆಟೆ ಪ್ರತಿಕ್ರಿಯಿಸಿದ್ದಾರೆ.
ಅಂಕಪಟ್ಟಿಯಲ್ಲಿ ಸದ್ಯ ಎರಡನೇ ಸ್ಥಾನದಲ್ಲಿರುವ ಅರ್ಜೆಂಟೀನಾ, ಭಾರತದ ವಿರುದ್ಧ ಗೆದ್ದು, ಮೊದಲ ಸ್ಥಾನದಲ್ಲಿರುವ ನೆದರ್ಲೆಂಡ್ಸ್‌ಗೆ ಪೈಪೋಟಿ ನೀಡುವ ಗುರಿ ಹೊಂದಿದೆ. ಇನ್ನೊಂದೆಡೆ, ಭಾರತ ತಂಡವು 9 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ. ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.