ADVERTISEMENT

ಭಾರತದ ಹಾಕಿಯ ರಾಣಿ

ಜಿ.ಶಿವಕುಮಾರ
Published 18 ಮೇ 2020, 7:13 IST
Last Updated 18 ಮೇ 2020, 7:13 IST
ಹಾಕಿ ಆಟಗಾರ್ತಿ ರಾಣಿ ರಾಂಪಾಲ್
ಹಾಕಿ ಆಟಗಾರ್ತಿ ರಾಣಿ ರಾಂಪಾಲ್   

ಆ ಹುಡುಗಿಗೆ ಆಗಿನ್ನೂ ಆರು ವರ್ಷ ವಯಸ್ಸು. ಆಗಲೇ ಹಾಕಿ ಕ್ರೀಡೆಯಲ್ಲಿ ಮಹೋನ್ನತ ಸಾಧನೆ ಮಾಡುವ ಕನಸು ಕಂಡಿದ್ದಳು. ಅಪ್ಪ ಅಮ್ಮನ ಬಳಿ ತನ್ನ ಬಯಕೆ ವ್ಯಕ್ತಪಡಿಸಿದಾಗ ಅದಕ್ಕವರು ಒಪ್ಪಲಿಲ್ಲ. ನೆರೆ ಹೊರೆಯವರು ಹಾಗೂ ಸಂಬಂಧಿಕರೂ ಕೊಂಕು ನುಡಿದರು.

ಹಾಕಿ ಆಡಿ ಯಾರನ್ನ ಉದ್ಧಾರ ಮಾಡ್ತೀಯಾ..ಸ್ಕರ್ಟ್‌ ಹಾಕಿಕೊಂಡು ಅಂಗಳದ ತುಂಬಾ ಓಡಾಡ್ತಾ ಇದ್ರೆ ಕುಟುಂಬದ ಮರ್ಯಾದೆ ಬೀದಿ ಪಾಲಾಗುತ್ತದೆ ಅಷ್ಟೇ.. ಎಂದು ಮೂದಲಿಸಿದ್ದರು.

ಅಷ್ಟಾದರೂ ಆಕೆ ಎದೆಗುಂದಲಿಲ್ಲ. ಹಾಕಿಯನ್ನೇ ಉಸಿರಾಗಿಸಿಕೊಂಡಿದ್ದ ಆ ಬಾಲೆ ದೃಢ ಸಂಕಲ್ಪ ತೊಟ್ಟಳು. ಹರ ಸಾಹಸ ಪಟ್ಟು ಪೋಷಕರ ಮನ ಒಲಿಸಿದಳು. ಕಿತ್ತು ತಿನ್ನುವ ಬಡತನವನ್ನೂ ಲೆಕ್ಕಿಸದೇ ಹಗಲಿರುಳುಕಠಿಣ ಅಭ್ಯಾಸ ನಡೆಸಿ ಹದಿನಾಲ್ಕನೇ ವಯಸ್ಸಿನಲ್ಲೇ ಸೀನಿಯರ್‌ ಮಹಿಳಾ ಹಾಕಿ ತಂಡಕ್ಕೆ ಪದಾರ್ಪಣೆ ಮಾಡಿದಳು. ಈ ಸಾಧನೆ ಮಾಡಿದ ಭಾರತದ ಅತೀ ಕಿರಿಯ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರಳಾದಳು. ಕಲಾತ್ಮಕ ಆಟ ಹಾಗೂ ಚಾಣಾಕ್ಷ ನಾಯಕತ್ವದ ಮೂಲಕ ಭಾರತದ ಹಾಕಿಯ ‘ರಾಣಿ’ಯಾಗಿ ಮೆರೆಯುತ್ತಿರುವ ಆ ಸಾಧಕಿ ರಾಣಿ ರಾಂಪಾಲ್‌.

ADVERTISEMENT

ಹರಿಯಾಣದ ಶಹಬಾದ್‌ ಮಾರ್ಕಂಡದಲ್ಲಿ ಜನಿಸಿದ ರಾಣಿ, ಈ ವರ್ಷ ಪ್ರತಿಷ್ಠಿತ ಪದ್ಮಶ್ರೀ ಗೌರವಕ್ಕೆ ಭಾಜನರಾಗಿದ್ದಾರೆ. 25 ವರ್ಷ ವಯಸ್ಸಿನ ಈ ಆಟಗಾರ್ತಿ, ಲಾಕ್‌ಡೌನ್‌ ಕಾರಣ ಬೆಂಗಳೂರಿನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್‌) ಕೇಂದ್ರದಲ್ಲಿ ಬಂಧಿಯಾಗಿದ್ದಾರೆ. ಸಾಯ್‌ನ ಸಹಾಯಕ ಕೋಚ್‌ ಕೂಡ ಆಗಿರುವ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

***

ಪ್ರತಿಷ್ಠಿತ ‘ವರ್ಲ್ಡ್‌ ಗೇಮ್ಸ್‌ ಅಥ್ಲೀಟ್‌ ಆಫ್‌ ದಿ ಇಯರ್‌’ ಗೌರವಕ್ಕೆ ಭಾಜನರಾದ ವಿಶ್ವದ ಮೊದಲ ಮತ್ತು ಏಕೈಕ ಹಾಕಿಪಟು ಎಂಬ ಹಿರಿಮೆಗೆ ಭಾಜನರಾಗಿದ್ದೀರಿ. ಈ ಸಾಧನೆಯ ಬಗ್ಗೆ ಹೇಳಿ?

ಇದು ಬಹುದೊಡ್ಡ ಗೌರವ. ಈ ಪ್ರಶಸ್ತಿಗೆ ನನ್ನನ್ನು ಮತದಾನದ ಮೂಲಕ ಆಯ್ಕೆ ಮಾಡಿದ ಎಲ್ಲರಿಗೂ ಚಿರಋಣಿಯಾಗಿದ್ದೇನೆ. ಇದು ಭಾರತದ ಮಹಿಳಾ ಹಾಕಿಗೆ ಸಿಕ್ಕ ಮನ್ನಣೆ ಎಂದೇ ಭಾವಿಸುತ್ತೇನೆ.

ಟೋಕಿಯೊ ಒಲಿಂಪಿಕ್ಸ್‌ ಅನ್ನು ಒಂದು ವರ್ಷ ಮುಂದಕ್ಕೆ ಹಾಕಿದ್ದಾರಲ್ಲ?

ಈ ವರ್ಷವೇ ಕೂಟ ನಡೆಯುತ್ತದೆ ಎಂದು ಭಾವಿಸಿದ್ದೆವು. ಹೀಗಾಗಿ ಸಕಲ ಸಿದ್ಧತೆಯನ್ನೂ ಮಾಡಿಕೊಂಡಿದ್ದೆವು. ಕೂಟ ಮುಂದೂಡಿರುವುದರಿಂದ ಕೊಂಚ ನಿರಾಸೆಯಾಗಿದೆ. ಹಿಂದಿನ ಎರಡು ವರ್ಷಗಳಿಂದ ನಾವು ತುಂಬಾ ಚೆನ್ನಾಗಿ ಆಡುತ್ತಿದ್ದೇವೆ. ರ‍್ಯಾಂಕಿಂಗ್‌ನಲ್ಲಿ ನಮಗಿಂತ ಮೇಲಿನ ಸ್ಥಾನದಲ್ಲಿರುವ ತಂಡಗಳ ವಿರುದ್ಧ ಅಮೋಘ ಸಾಮರ್ಥ್ಯ ತೋರಿದ್ದೇವೆ. ಒಲಿಂಪಿಕ್ಸ್‌ಗೆ ಇನ್ನೂ 15 ತಿಂಗಳು ಬಾಕಿ ಇದೆ. ಈ ಅವಧಿಯಲ್ಲಿ ಇನ್ನಷ್ಟು ಕಠಿಣ ಅಭ್ಯಾಸ ನಡೆಸಿ ಆಟದ ಗುಣಮಟ್ಟ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ‌

ಲಾಕ್‌ಡೌನ್‌ ಅವಧಿಯಲ್ಲಿ ಹೇಗೆ ದಿನ ದೂಡುತ್ತಿದ್ದೀರಿ?

ಸಾಯ್‌ ಕೇಂದ್ರದಲ್ಲಿ ಟ್ರೈನರ್‌‌ ಇದ್ದಾರೆ. ನಿತ್ಯವೂ ಅವರ ಮೇಲ್ವಿಚಾರಣೆಯಲ್ಲಿ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಅಗತ್ಯವಿರುವ ವ್ಯಾಯಾಮಗಳನ್ನು ಮಾಡುತ್ತಿದ್ದೇವೆ. ನಾವು ಈ ಹಿಂದೆ ಆಡಿರುವ ಪಂದ್ಯಗಳ ವಿಡಿಯೊ ತುಣುಕುಗಳನ್ನು ವೀಕ್ಷಿಸಿ ಏನು ತಪ್ಪು ಮಾಡಿದ್ದೀವಿ ಎಂಬುದನ್ನು ಅರಿತುಕೊಳ್ಳುತ್ತಿದ್ದೇವೆ. ಜೊತೆಗೆ ಸ್ನಾತಕೋತ್ತರ ಪದವಿಯ (ಎಂ.ಎ. ಇಂಗ್ಲಿಷ್‌) ಪಠ್ಯಪುಸ್ತಕಗಳನ್ನು ಓದುತ್ತೇನೆ.

ನಿಮ್ಮ ನಾಯಕತ್ವದಲ್ಲಿ ಭಾರತ ತಂಡವು ಸತತ ಎರಡನೇ ಬಾರಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದೆ. ಈ ಬಗ್ಗೆ ಹೇಳಿ?

2016ರ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ ಬಳಿಕ ನಮ್ಮ ವಿಶ್ವಾಸ ಇಮ್ಮಡಿಸಿತು. ಟೋಕಿಯೊ ಕೂಟಕ್ಕೂ ರಹದಾರಿ ಪಡೆಯುವ ಸಾಮರ್ಥ್ಯ ನಮ್ಮಲ್ಲಿದೆ ಎಂಬುದೂ ಮನದಟ್ಟಾಯಿತು. ಇದು ನನ್ನೊಬ್ಬಳ ಸಾಧನೆಯಲ್ಲ. ಇದಕ್ಕಾಗಿ ತಂಡದ ಎಲ್ಲಾ ಸದಸ್ಯರೂ ಹಗಲಿರುಳು ಕಷ್ಟಪಟ್ಟಿದ್ದಾರೆ. ಟೋಕಿಯೊ ಕೂಟದಲ್ಲಿ ಅಗ್ರ ನಾಲ್ಕರೊಳಗೆ ಸ್ಥಾನ ಪಡೆಯುವುದು ನಮ್ಮ ಗುರಿ. ಇದಕ್ಕಾಗಿ ಶಕ್ತಿಮೀರಿ ಪ್ರಯತ್ನಿಸುತ್ತೇವೆ.

ನಾಯಕಿಯಾಗಿ ನೀವು ಎದುರಿಸುತ್ತಿರುವ ಸವಾಲುಗಳೇನು?

ನಾಯಕತ್ವ ಎನ್ನುವುದು ಬಹುದೊಡ್ಡ ಜವಾಬ್ದಾರಿ. ತಂಡದಲ್ಲಿರುವ ಎಲ್ಲರ ಅಭಿಪ್ರಾಯಗಳಿಗೂ ಮನ್ನಣೆ ನೀಡಬೇಕು. ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುಂದೆ ಸಾಗಬೇಕು. ಕಿರಿಯ ಆಟಗಾರ್ತಿಯರಿಗೆ ಅಗತ್ಯ ಮಾರ್ಗದರ್ಶನ ನೀಡಿ ಅವರ ಆಟದ ಗುಣಮಟ್ಟ ಹೆಚ್ಚಿಸಲು ನೆರವಾಗಬೇಕು. ಇದನ್ನು ಸವಾಲೆಂದು ಭಾವಿಸುವುದಿಲ್ಲ.

ನೀವು ಗ್ರಾಮೀಣ ಭಾಗದಿಂದ ಬಂದವರು. ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಭಾಗವಹಿಸುವ ವೇಳೆ ಭಾಷೆಯ ಸಮಸ್ಯೆ ಎದುರಾಗಲಿಲ್ಲವೇ?

ಆರಂಭದಲ್ಲಿ ಇಂಗ್ಲಿಷ್‌ ಮಾತನಾಡುವುದು ಮತ್ತು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟವಾಗುತ್ತಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದೆ. ತಪ್ಪಾದರೂ ಪರವಾಗಿಲ್ಲಇಂಗ್ಲಿಷ್‌ನಲ್ಲೇ ವ್ಯವಹರಿಸಬೇಕೆಂದು ದೃಢವಾಗಿ ನಿಶ್ಚಯಿಸಿದ್ದೆ. ಹೀಗಾಗಿ ಈ ಭಾಷೆಯನ್ನು ಬೇಗನೆ ಕಲಿಯಲು ಸಾಧ್ಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.