ADVERTISEMENT

ಭಾರತದಲ್ಲಿ ಪುರುಷರ ಹಾಕಿ ವಿಶ್ವಕಪ್‌

ಪಿಟಿಐ
Published 8 ನವೆಂಬರ್ 2019, 20:25 IST
Last Updated 8 ನವೆಂಬರ್ 2019, 20:25 IST

ಲಾಸನ್‌: ಮುಂಬರುವ ಪುರುಷರ ಹಾಕಿ ವಿಶ್ವಕಪ್‌ ಟೂರ್ನಿಯು ಭಾರತದಲ್ಲಿ ನಡೆಯಲಿದೆ. ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ (ಎಫ್‌ಐಎಚ್‌) ಶುಕ್ರವಾರ ಈ ವಿಷಯ ತಿಳಿಸಿದೆ.

ಟೂರ್ನಿಯು 2023ರ ಜನವರಿ 13ರಿಂದ 29ರವರೆಗೆ ನಿಗದಿಯಾಗಿದೆ. ಇದರೊಂದಿಗೆ ಭಾರತವು ನಾಲ್ಕು ವಿಶ್ವಕಪ್‌ಗಳಿಗೆ ಆತಿಥ್ಯ ವಹಿಸಿದ ಮೊದಲ ದೇಶ ಎಂಬ ಹಿರಿಮೆಗೆ ಪಾತ್ರವಾಗಿದೆ.

1982 (ಮುಂಬೈ), 2010 (ನವದೆಹಲಿ) ಮತ್ತು 2018ರಲ್ಲಿ (ಭುವನೇಶ್ವರ) ಭಾರತದಲ್ಲಿ ಟೂರ್ನಿ ಆಯೋಜನೆಯಾಗಿತ್ತು. ನೆದರ್ಲೆಂಡ್ಸ್‌ ತಂಡವು ಮೂರು ಬಾರಿ ಆತಿಥ್ಯ ವಹಿಸಿತ್ತು.

ADVERTISEMENT

ಎಫ್‌ಐಎಚ್‌ ಚಾಂಪಿಯನ್ಸ್‌ ಟ್ರೋಫಿ (2014), ಜೂನಿಯರ್‌ ಪುರುಷರ ವಿಶ್ವಕಪ್‌ (2016), ಹಾಕಿ ವಿಶ್ವ ಲೀಗ್‌ ಫೈನಲ್‌ (2017), ಎಫ್‌ಐಎಚ್‌ ಪುರುಷರ ಸೀರಿಸ್‌ ಫೈನಲ್ಸ್‌ (2019) ಹಾಗೂ ಇತ್ತೀಚೆಗೆ ನಡೆದಿದ್ದ ಹಾಕಿ ಒಲಿಂಪಿಕ್‌ ಅರ್ಹತಾ ಟೂರ್ನಿಗಳನ್ನು ಭಾರತ ಯಶಸ್ವಿಯಾಗಿ ಆಯೋಜಿಸಿತ್ತು.

2023ರ ವಿಶ್ವಕಪ್‌ ಆತಿಥ್ಯಕ್ಕಾಗಿ ಭಾರತ, ಬೆಲ್ಜಿಯಂ ಮತ್ತು ಮಲೇಷ್ಯಾ ದೇಶಗಳು ಬಿಡ್‌ ಸಲ್ಲಿಸಿದ್ದವು.

2022ರ ಮಹಿಳಾ ಹಾಕಿ ವಿಶ್ವಕಪ್‌ಗೆ ನೆದರ್ಲೆಂಡ್ಸ್‌ ಮತ್ತು ಸ್ಪೇನ್‌ ಜಂಟಿಯಾಗಿ ಆತಿಥ್ಯ ವಹಿಸಲಿವೆ. ಈ ಟೂರ್ನಿ ಜುಲೈ 1ರಿಂದ 22ರವರೆಗೆ ನಿಗದಿಯಾಗಿದೆ. ಈ ಟೂರ್ನಿಯ ಆಯೋಜನೆಗಾಗಿ ಜರ್ಮನಿ, ಸ್ಪೇನ್‌, ನೆದರ್ಲೆಂಡ್ಸ್‌, ಮಲೇಷ್ಯಾ ಮತ್ತು ನ್ಯೂಜಿಲೆಂಡ್‌ ದೇಶಗಳು ಬಿಡ್‌ ಮಾಡಿದ್ದವು.

‘2023ಕ್ಕೆ ಭಾರತಕ್ಕೆ ಸ್ವಾತಂತ್ರ್ಯಬಂದು 75 ವ‌ರ್ಷಗಳು ತುಂಬಲಿವೆ. ಇಂತಹ ವಿಶೇಷ ಸಂದರ್ಭದಲ್ಲೇ ವಿಶ್ವಕಪ್‌ ಪಂದ್ಯಗಳನ್ನು ನಡೆಸಲು ಅವಕಾಶ ಸಿಕ್ಕಿರುವುದು ಖುಷಿಯ ವಿಷಯ. ಈ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇವೆ’ ಎಂದು ಹಾಕಿ ಇಂಡಿಯಾ (ಎಚ್‌ಐ) ಅಧ್ಯಕ್ಷ ಮೊಹಮ್ಮದ್‌ ಮುಷ್ತಾಕ್‌ ಅಹಮದ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.