ADVERTISEMENT

ಒಲಿಂಪಿಕ್ಸ್‌ಗೆ 50 ದಿನ: ಅಥ್ಲೀಟ್‌ಗಳಿಗೆ ಭರವಸೆ ತುಂಬಿದ ಕೌಂಟ್‌ಡೌನ್ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 15:26 IST
Last Updated 3 ಜೂನ್ 2021, 15:26 IST
ಒಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಧರಿಸುವ ಪೋಷಾಕನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು –ಸಾಯ್ ಟ್ವಿಟರ್ ಚಿತ್ರ
ಒಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಧರಿಸುವ ಪೋಷಾಕನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು –ಸಾಯ್ ಟ್ವಿಟರ್ ಚಿತ್ರ   

ಬೆಂಗಳೂರು: ಆತಂಕ, ದುಗುಡದ ನಡುವೆಯೂ ಕ್ರೀಡಾಪಟುಗಳಲ್ಲಿ ಸಂಭ್ರಮವಿತ್ತು. ಆಡಳಿತ ಮತ್ತು ಜನತೆ ನಿಮ್ಮೊಂದಿಗಿದೆ, ಕೆಚ್ಚೆದೆಯಿಂದ ಮುನ್ನುಗ್ಗಿ ‘ವಿಶ್ವವನ್ನು‘ ಗೆದ್ದು ಬನ್ನಿ ಎಂಬ ಮಾತುಗಳು ಅವರಲ್ಲಿ ಭರವಸೆ ಮೂಡಿಸಿದವು. ಹೊಸ ಪೋಷಾಕು ಅನಾವರಣಗೊಳ್ಳುತ್ತಿದ್ದಂತೆ ಅವರು ಆನಂದತುಂದಿಲರಾದರು.

ಟೋಕಿಯೊ ಒಲಿಂಪಿಕ್ಸ್‌ಗೆ ಐವತ್ತು ದಿನಗಳು ಉಳಿದಿರುವ ಹಿನ್ನೆಲೆಯಲ್ಲಿ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರ ನಿವಾಸದಲ್ಲಿ ಭಾರತ ಒಲಿಂಪಿಕ್‌ ಸಂಸ್ಥೆ (ಐಒಎ) ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಧರಿಸಲಿರುವ ಪೋಷಾಕು ಬಿಡುಗಡೆ ಮಾಡಲಾಯಿತು. ವರ್ಚುವಲ್‌ ಆಗಿ ಪಾಲ್ಗೊಳ್ಳಲು ಪತ್ರಕರ್ತರಿಗೆ ಅವಕಾಶವಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಐಒಎ ಅಧ್ಯಕ್ಷ ನರಿಂದರ್ ಬಾತ್ರಾ ’ಅಧಿಕಾರಿಗಳು ಸೇರಿದಂತೆ ಒಟ್ಟು 200 ಮಂದಿಯ ತಂಡವನ್ನು ಭಾರತದಿಂದ ಕಳುಹಿಸಲಾಗುವುದು. 44 ಮಹಿಳೆಯರು ಸೇರಿದಂತೆ 100 ಮಂದಿಈ ವರೆಗೆ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ. ಇನ್ನೂ 25ರಿಂದ 35 ಮಂದಿ ಆಯ್ಕೆಯಾಗುವ ಸಾಧ್ಯತೆ ಇದೆ. ಈ ತಿಂಗಳ ಕೊನೆಯ ಒಳಗೆ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳಲಿದೆ’ ಎಂದು ತಿಳಿಸಿದರು.

ADVERTISEMENT

‘ಎಲ್ಲ ಅಥ್ಲೀಟ್‌ಗಳಿಗೂ ಕೋವಿಡ್‌–19 ಲಸಿಕೆಯ ಮೊದಲ ಡೋಸ್ ಹಾಕಿಸಲಾಗಿದೆ. ಒಲಿಂಪಿಕ್ಸ್‌ಗೆ ಹೋಗುವ ಮುನ್ನ ಎರಡನೇ ಡೋಸ್ ಕೂಡ ಹಾಕಲು ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಒಲಿಂಪಿಕ್ಸ್‌ಗೆ ಸಂಬಂಧಿಸಿದ ಮಾಹಿತಿ ಪುಸ್ತಕವನ್ನು ಈ ತಿಂಗಳ ಅಂತ್ಯದೊಳಗೆ ಬಿಡುಗಡೆ ಮಾಡಲಾಗುವುದು. ಇದರಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಲಾಗಿದೆ’ ಎಂದು ಅವರು ಆಗ್ರಹಿಸಿದರು.

ಪ್ರಧಾನಿಯಿಂದಪರಿಶೀಲನಾ ಸಭೆ

ಸ್ಪರ್ಧೆಗಳ ಸಂದರ್ಭದಲ್ಲಿ ಧರಿಸುವ ಮತ್ತು ಸಮಾರಂಭದಲ್ಲಿ ಪಾಲ್ಗೊಳ್ಳುವಾಗ ತೊಡುವ ಪೋಷಾಕನ್ನು ಸಚಿವ ಕಿರಣ್ ರಿಜಿಜು ಬಿಡುಗಡೆ ಮಾಡಿದರು. ’ಒಲಿಂಪಿಕ್ಸ್‌ಗೆ ಸಂಬಂಧಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದು ಎಲ್ಲ ಸೌಲಭ್ಯಗಳನ್ನು ಒದಗಿಸಲು ಸೂಚಿಸಿದ್ದಾರೆ. ಕೋವಿಡ್‌ನಿಂದಾಗಿ ಕ್ರೀಡಾಪಟುಗಳು ಸವಾಲು–ಸಮಸ್ಯೆ ಎದುರಿಸುತ್ತಿದ್ದರೆ ಪರಿಹಾರ ಒದಗಿಸಲಾಗುವುದು’ ಎಂದು ಅವರು ಭರವಸೆ ನೀಡಿದರು.

ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ, ಚೆಫ್ ಡಿ ಮಿಷನ್ ಬಿ.ಪಿ.ಬೈಷ್ಯ ಮತ್ತು ಉಪಚೆಫ್ ಡಿ ಮಿಷನ್ ಪ್ರೇಮ್ ಚಂದ್ ವರ್ಮಾ ಇದ್ದರು. ಕ್ರೀಡಾಪಟುಗಳಾದ ನೀರಜ್ ಚೋಪ್ರಾ, ಬಜರಂಗ್ ಪೂನಿಯಾ, ರವಿ ದಹಿಯಾ, ಸುಮಿತ್‌ ಮಲಿಕ್‌ ಮತ್ತು ಸೀಮಾ ಬಿಸ್ಲಾ ಅವರನ್ನು ಗೌರವಿಸಲಾಯಿತು.

ಕಿರುಚಿತ್ರದ ಮೂಲಕ ಪ್ರಚಾರ

ಒಲಿಂಪಿಕ್ ಕೂಟದಲ್ಲಿ ಪಾಲ್ಗೊಳ್ಳುವ ಭಾರತದ ಪ್ರತಿ ಕ್ರೀಡಾಪಟುವಿಗೆ ಸಂಬಂಧಿಸಿ ಕಿರುಚಿತ್ರವನ್ನು ನಿರ್ಮಿಸಲಾಗಿದೆ. ಇದನ್ನು ಬಳಸಿಕೊಂಡು ದೇಶದಾದ್ಯಂತ ಪ್ರಚಾರ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು. ಇಡೀ ದೇಶ ಕ್ರೀಡಾಪಟುಗಳನ್ನು ಹುರಿದುಂಬಿಸುವಂತೆ ಪ್ರೇರೇಪಿಸಲಾಗುವುದು. ಅತ್ಯುತ್ತಮ ಗುಣಮಟ್ಟದ ತರಬೇತಿಗೆ ಏರ್ಪಾಡು ಮಾಡಲಾಗಿದೆ ಎಂದು ಸಚಿವ ಕಿರಣ್ ರಿಜಿಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.