ADVERTISEMENT

ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಮೈಸ್ನಮ್‌ ಮೀರಾಬಾ, ಮಾಳವಿಕಾ ನಾಯಕತ್ವ

ಏಷ್ಯನ್‌ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ಗೆ ಭಾರತ ತಂಡ ಪ್ರಕಟ

ಪಿಟಿಐ
Published 20 ಜೂನ್ 2019, 20:00 IST
Last Updated 20 ಜೂನ್ 2019, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಏಷ್ಯನ್‌ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು ಮಣಿಪುರದ ಮೈಸ್ನಮ್‌ ಮೀರಾಬಾ ಲುವಾಂಗ್‌ ಬಾಲಕರ ಸಿಂಗಲ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ. ಚೀನಾದ ಸುಜೌನಲ್ಲಿ ಜುಲೈ 20ರಿಂದ 28ರವೆರೆಗೆ ಕೂಟ ನಡೆಯಲಿದ್ದು, ಒಟ್ಟು 23 ಆಟಗಾರರನ್ನು ಆಯ್ಕೆ ಮಾಡಲಾಗಿದೆ.

ಸ್ಥಳೀಯ ಟೂರ್ನಿಗಳಲ್ಲಿ ಉತ್ತಮ ಆಟದಿಂದ ಮೈಸ್ನಮ್‌ ಗಮನಸೆಳೆದಿದ್ದು, ಸತತ ನಾಲ್ಕು ಬಾರಿ ಜೂನಿಯರ್‌ ಪ್ರಶಸ್ತಿಯನ್ನು ಜಯಿಸಿದ್ದಾರೆ. ತಮಿಳುನಾಡಿನ ತ್ರಿವಳಿಗಳಾದ ಸತೀಶ್‌ಕುಮಾರ್‌, ಸಿದ್ಧಾಂತ್‌ ಗುಪ್ತಾ ಹಾಗೂ ಶಂಕರ್‌ ಮುತ್ತುಸ್ವಾಮಿ ಬಾಲಕರ ತಂಡದಲ್ಲಿದ್ದಾರೆ.

ಚೆನ್ನೈ ಹಾಗೂ ತಿರುವನಂತಪುರದಲ್ಲಿ ನಡೆದ ಅಖಿಲ ಭಾರತ ಜೂನಿಯರ್‌ ರ‍್ಯಾಂಕಿಂಗ್‌ ಟೂರ್ನಿಗಳಲ್ಲಿ ಗಳಿಸಿದ ಪಾಯಿಂಟ್‌ಗಳನ್ನು ತಂಡದ ಆಯ್ಕೆಗೆ ಭಾರತ ಬ್ಯಾಡ್ಮಿಂಟನ್‌ ಸಂಸ್ಥೆಯು ಪರಿಗಣಿಸಿದೆ ಎಂದು ಫೆಡರೇಷನ್‌ ಪ್ರಧಾನ ಕಾರ್ಯದರ್ಶಿ ಅಜಯ್‌ ಸಿಂಘಾನಿಯಾ ತಿಳಿಸಿದರು.

ADVERTISEMENT

ಬಾಲಕಿಯರ ಸಿಂಗಲ್ಸ್ ತಂಡವನ್ನು ಮಾಳವಿಕಾ ಬಾನ್ಸೋಡ್‌ ಮುನ್ನಡೆಸಲಿರುವರು. ದೆಹಲಿಯ ಆಶಿ ರಾವತ್‌, ಉತ್ತರಾಖಂಡದ ಉನ್ನತಿ ಬಿಷ್ತ್‌, ತೆಲಂಗಾಣದ ಸಮಿಯಾ ಇಮಾದ್‌ ಫಾರೂಕಿ ಅವರು ಮಾಳವಿಕಾಗೆ ಜೊತೆಯಾಗಲಿರುವರು.

ಇಶಾನ್‌ ಭಟ್ನಾಗರ್‌ ಹಾಗೂ ವಿಷ್ಣುವರ್ಧನ್‌ ಗೌಡ ಅವರು ಬಾಲಕರ್ ಡಬಲ್ಸ್ ವಿಭಾಗವನ್ನು ಮುನ್ನಡೆಸಲಿದ್ದು, ಬಾಲಕಿಯರ ಡಬಲ್ಸ್‌ನಲ್ಲಿ ಅದಿತಿ ಭಟ್‌ ಹಾಗೂ ತನೀಶಾ ಕ್ರಾಸ್ತೊ ಮೋಡಿ ಮಾಡಲಿರುವರು. ಉತ್ತಮ ಲಯದಲ್ಲಿರುವ ಕೆ.ಡಿಂಕು ಸಿಂಗ್‌ ಹಾಗೂ ರಿತೀಕಾ ಟಕ್ಕರ್‌ ಮಿಶ್ರ ಡಬಲ್ಸ್‌ ನ ಪ್ರಮುಖ ಜೋಡಿಯಾಗಿದೆ.

ಈ ಹಿಂದಿನ ಆವೃತ್ತಿಯ ಏಷ್ಯನ್‌ ಚಾಂಪಿಯನ್‌ಷಿಪ್‌ ಇಂಡೋನೇಷ್ಯಾದಲ್ಲಿ ನಡೆದಿತ್ತು. ಇಲ್ಲಿ ಭಾರತ ತಂಡ 54 ವರ್ಷಗಳ ಬಳಿಕ ಬಂಗಾರದ ಪದಕಕ್ಕೆ ಮುತ್ತಿಟ್ಟಿತ್ತು. ಲಕ್ಷ್ಯಸೇನ್‌ ಅವರು ಬಾಲಕರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿದ್ದರು.

ರಾಷ್ಟ್ರೀಯ ಜೂನಿಯರ್‌ ಕೋಚ್‌ ಸಂಜಯ್‌ ಮಿಶ್ರಾ ತರಬೇತುದಾರರ ತಂಡದ ನೇತೃತ್ವ ವಹಿಸಿದ್ದು, ಚೇತನ್‌ ಆನಂದ್‌ ಹಾಗೂ ಅರುಣ್‌ ವಿಷ್ಣು ಅವರಿಗೆ ಸಹಕಾರ ನೀಡಲಿದ್ದಾರೆ. ಭಾರತ ತಂಡವು ಜುಲೈ 3ರಿಂದ ಪಂಚಕುಲಾದಲ್ಲಿ ನಡೆಯುವ 15 ದಿನಗಳ ಶಿಬಿರದಲ್ಲಿ ಪಾಲ್ಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.