ಜೋಹರ್ (ಮಲೇಷ್ಯಾ): ಸೆಪ್ಟೆಂಬರ್‌ನಲ್ಲಿ ನಡೆದ ಏಷ್ಯಾ ಕಪ್ ಟೂರ್ನಿಯ ಭಾರತ–ಪಾಕಿಸ್ತಾನ ಪಂದ್ಯಗಳು ನಕಾರಾತ್ಮಕ ಕಾರಣಗಳಿಂದ ಸುದ್ದಿಯಾಗಿದ್ದವು. ಈ ಚಿತ್ರಣಕ್ಕೆ ಸಂಪೂರ್ಣ ಭಿನ್ನವೆಂಬಂತೆ ಈ ಎರಡು ದೇಶಗಳ ಜೂನಿಯರ್ ಹಾಕಿ ತಂಡಗಳ ಆಟಗಾರರು ಸುಲ್ತಾನ್ ಆಫ್ ಜೋಹರ್ ಕಪ್ ಟೂರ್ನಿಯಲ್ಲಿ ಪರಸ್ಪರರಿಗೆ ಶುಭ ಹಾರೈಸಿ, ಕ್ರೀಡಾಸ್ಫೂರ್ತಿ ಮೆರೆದರು.
ಟಾಸ್ ವೇಳೆ ಉಭಯ ತಂಡಗಳ ನಾಯಕರು ‘ಸಾಂಪ್ರದಾಯಿಕ’ ಹಸ್ತಲಾಘವವನ್ನು ನಿರಾಕರಿಸಿದ್ದರು. ಪಂದ್ಯದ ವೇಳೆಯೂ ಆಟಗಾರರ ನಡುವೆ ವಾಗ್ವಾದಗಳು ನಡೆದಿದ್ದವು. ಪಂದ್ಯ ಮುಗಿದ ನಂತರವೂ ಕೈಕುಲುಕಿ ಶುಭಾಶಯ ಹೇಳಿರಲಿಲ್ಲ. ಅಲ್ಲದೆ, ಭಾರತ ಕ್ರಿಕೆಟ್ ತಂಡವು ಏಷ್ಯಾ ಕಪ್ ಗೆದ್ದ ನಂತರ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ, ಪಾಕಿಸ್ತಾನದ ಮೊಹ್ಸಿನ್ ನಕ್ವಿ ಅವರಿಂದ ಟ್ರೋಫಿ ಸ್ವೀಕರಿಸಿರಲಿಲ್ಲ.
ಭಾರತ ಮಹಿಳಾ ತಂಡವೂ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಪಾಕ್ ಆಟಗಾರ್ತಿಯರ ಕೈಕುಲುಕಿರಲಿಲ್ಲ.
ಇದಕ್ಕೆ ಭಿನ್ನವಾಗಿ, ಈ ಎಲ್ಲವೂ ಹಸಿರಾಗಿರುವಾಗಲೇ ಹಾಕಿ ತಂಡದ ಯುವ ಆಟಗಾರರು ಪರಸ್ಪರ ಶುಭಕೋರಿ, ಹೈಫೈ ಮಾಡುತ್ತಿರುವ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪಂದ್ಯ 3–3 ಡ್ರಾ: ಭಾರತ ಜೂನಿಯರ್ ಪುರುಷರ ಹಾಕಿ ತಂಡವು ಮಂಗಳವಾರ ನಡೆದ ಟೂರ್ನಿಯ ಗುಂಪು ಹಂತದ ತನ್ನ ಮೂರನೇ ಪಂದ್ಯದಲ್ಲಿ 3–3ರಿಂದ ಪಾಕಿಸ್ತಾನ ವಿರುದ್ಧ ಡ್ರಾ ಸಾಧಿಸಿತು.
ಒಂದು ಹಂತದಲ್ಲಿ ಎರಡು ಗೋಲುಗಳ ಹಿನ್ನಡೆಯಲ್ಲಿದ್ದ ಭಾರತ ತಂಡ ತೀವ್ರ ಒತ್ತಡದಲ್ಲಿತ್ತು. ಮೂರನೇ ಮತ್ತು ನಾಲ್ಕನೇ ಕ್ವಾರ್ಟರ್‌ನಲ್ಲಿ ಭಾರತ ಆಟಗಾರರು 10 ನಿಮಿಷಗಳ ಅಂತರದಲ್ಲಿ ಮೂರು ಗೋಲು ದಾಖಲಿಸಿ ಡ್ರಾ ಮಾಡಿಕೊಂಡರು. ಈ ಮೂಲಕ ಟೂರ್ನಿಯಲ್ಲಿ ಅಜೇಯವಾಗಿ ಉಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.