ADVERTISEMENT

ಕಾಮನ್‌ವೆಲ್ತ್‌ ಗೇಮ್ಸ್‌ ಆತಿಥ್ಯ ಬಿಡ್‌ ಸಲ್ಲಿಸಿದ ಭಾರತ

ಪಿಟಿಐ
Published 20 ಮಾರ್ಚ್ 2025, 23:54 IST
Last Updated 20 ಮಾರ್ಚ್ 2025, 23:54 IST
   

ನವದೆಹಲಿ : 2036ರ ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯದ ಗುರಿಯನ್ನು ಹೊಂದಿರುವ ಭಾರತವು ಅದಕ್ಕೂ ಪೂರ್ವಭಾವಿಯಾಗಿ 2030ರ ಕಾಮನ್‌ವೆಲ್ತ್ ಕ್ರೀಡಾಕೂಟ ವನ್ನು ಅಹಮದಾಬಾದ್‌ನಲ್ಲಿ ನಡೆಸಲು ಔಪಚಾರಿಕವಾಗಿ ಬಿಡ್ ಸಲ್ಲಿಸಿದೆ.

ಈ ವಿಷಯವನ್ನು ಕ್ರೀಡಾ ಸಚಿವಾಲಯದ ಉನ್ನತ ಮೂಲಗಳು ಗುರುವಾರ ಪಿಟಿಐಗೆ ತಿಳಿಸಿವೆ. ಕ್ರೀಡಾಕೂಟದ ಆತಿಥ್ಯಕ್ಕೆ ‘ಆಸಕ್ತಿ ಪತ್ರ’ ಸಲ್ಲಿಸಲು ಮಾರ್ಚ್‌ 31 ಕೊನೆಯ ದಿನವಾಗಿದೆ. ಭಾರತ ಒಲಿಂಪಿಕ್ ಸಮಿತಿಯು (ಐಒಎ) ಕೆಲವು ದಿನಗಳ ಹಿಂದೆ ಅರ್ಜಿ ಸಲ್ಲಿಸಿದೆ. 2010ರಲ್ಲಿ ಕೊನೆಯ ಬಾರಿ ಭಾರತವು ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಆತಿಥ್ಯ (ದೆಹಲಿಯಲ್ಲಿ) ವಹಿಸಿತ್ತು.

‘2030ರ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಲು ಭಾರತದ ಬಿಡ್, ಭಾರತ ಒಲಿಂಪಿಕ್ ಸಂಸ್ಥೆ ಮತ್ತು ಗುಜರಾತ್ ರಾಜ್ಯದಿಂದ ಸಲ್ಲಿಕೆಯಾಗಿದೆ’ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ADVERTISEMENT

ವಿಶ್ವಕಪ್‌ ಟಿಕೆಟ್‌ ಪಡೆದ ಜಪಾನ್‌

ಸೈತಾಮಾ (ಜಪಾನ್‌): ಬಹರೇನ್ ತಂಡದ ವಿರುದ್ಧ ಅರ್ಹತಾ ಪಂದ್ಯದ ಉತ್ತರಾರ್ಧದಲ್ಲಿ ಗಳಿಸಿದ ಎರಡು ಗೋಲುಗಳ ನೆರವಿನಿಂದ 2–0ಯಿಂದ ಗೆದ್ದ ಜಪಾನ್, 2026ರ ಫುಟ್‌ಬಾಲ್‌ ವಿಶ್ವಕಪ್‌ಗೆ ಅರ್ಹತೆ ಪಡೆದ ಮೊದಲ ತಂಡ ಎನಿಸಿತು.

ಗುರುವಾರ ನಡೆದ ಏಷ್ಯನ್ ‘ಸಿ’ ಗುಂಪಿನ ಈ ಅರ್ಹತಾ ಪಂದ್ಯದಲ್ಲಿ ದಾಯ್ಚಿ ಕಮಾಡ (66ನೇ ನಿಮಿಷ) ಮತ್ತು ತಕೆಫುಸಾ ಕುಬೊ (87ನೇ ನಿಮಿಷ) ಗೋಲುಗಳನ್ನು ಗಳಿಸಿದರು. ಜಪಾನ್ ಸತತ ಎಂಟನೇ ಬಾರಿ ವಿಶ್ವಕಪ್‌ಗೆ ಅರ್ಹತೆ ಪಡೆದಿದೆ. ಆಸ್ಟ್ರೇಲಿಯಾ ತವರಿನಲ್ಲಿ ಇಂಡೊನೇಷ್ಯಾ ಮೇಲೆ 5–1 ರಿಂದ ಗೆದ್ದ ಬಳಿಕ, ಜಪಾನ್‌ಗೆ ಈ ಪಂದ್ಯ ಡ್ರಾ ಮಾಡಿದರೂ ವಿಶ್ವಕಪ್ ಟಿಕೆಟ್‌ ಸಿಗುತಿತ್ತು.

ಡಾಜ್‌ಬಾಲ್: 23ಕ್ಕೆ ಟ್ರಯಲ್ಸ್

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಾಣಿಯಲ್ಲಿ ಏಪ್ರಿಲ್‌ 25ರಿಂದ 27ರವರೆಗೆ ನಡೆಯುವ ಮೂರನೇ ಸೀನಿಯರ್‌ (ಪುರುಷರು, ಮಹಿಳೆಯರು ಮತ್ತು ಮಿಶ್ರ) ರಾಷ್ಟ್ರೀಯ ಡಾಜ್‌ಬಾಲ್ ಚಾಂಪಿಯನ್‌ಷಿಪ್‌ ಆಯೋಜಿಸಲಾಗಿದೆ.

ಟೂರ್ನಿಗೆ ಕರ್ನಾಟಕ ರಾಜ್ಯ ಪುರುಷರ ಮತ್ತು ಮಹಿಳಾ ತಂಡಗಳಿಗೆ ಆಟಗಾರರನ್ನು ಆಯ್ಕೆ ಮಾಡಲು ಇದೇ 23ರಂದು ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಬೆಳಿಗ್ಗೆ 8ರಿಂದ ಮಧ್ಯಾಹ್ನ 1 ರವರೆಗೆ ಟ್ರಯಲ್ಸ್‌ ನಡೆಯಲಿದೆ.

ಮಾಹಿತಿಗೆ ಮೊ: 99005 81178, 96208 21242.

ಏಷ್ಯನ್ ಈಜು: ಭಾರತದ ಆತಿಥ್ಯ

ನವದೆಹಲಿ (ಪಿಟಿಐ): ಭಾರತವು 11ನೇ ಏಷ್ಯನ್ ಈಜು ಚಾಂಪಿಯನ್‌ಷಿಪ್‌ನ ಆತಿಥ್ಯ ವಹಿಸಲಿದೆ. ಅಹಮದಾಬಾದಿನ ನರನ್‌ಪುರ ಕ್ರೀಡಾ ಕಾಂಪ್ಲೆಕ್ಸ್‌ನಲ್ಲಿ ಅ.1 ರಿಂದ 15ರವರೆಗೆ ಈ ಚಾಂಪಿಯನ್‌ಷಿಪ್‌ ನಡೆಯಲಿದೆ ಎಂದು ಭಾರತ ಈಜು ಫೆಡರೇಷನ್‌ ಗುರುವಾರ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.