ಮಾಹೆ (ಸೀಶೆಲ್ಸ್): ಭಾರತದ ಬಾಕ್ಸರ್‌ಗಳು ಇಲ್ಲಿ ನಡೆದ ಸೀಶೆಲ್ಸ್ ರಾಷ್ಟ್ರೀಯ ದಿನಾಚರಣೆಯ ಬಾಕ್ಸಿಂಗ್ ಟೂರ್ನಿಯಲ್ಲಿ ಏಳು ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರು.
ಪ್ಯಾರಡೈಸ್ ಅರೆನಾದಲ್ಲಿ ನಡೆದ ಟೂರ್ನಿಯಲ್ಲಿ ಭಾರತ ಮೂರು ಚಿನ್ನ, ಮೂರು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದುಕೊಂಡಿತು. ಆರು ಪದಕ ಗೆದ್ದ ಮಾರಿಷಸ್ ಎರಡನೇ ಸ್ಥಾನದಲ್ಲಿದೆ.
ಪುರುಷರ 50 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಹಿಮಾಂಶು ಶರ್ಮಾ ವಾಕ್ ಓವರ್ ಪಡೆದು ಚಿನ್ನ ಗೆದ್ದರು. ಆಶಿಶ್ ಮುದ್ಶಾನಿಯಾ (55 ಕೆ.ಜಿ) ತಮ್ಮ ಫೈನಲ್‌ನಲ್ಲಿ 4-1 ಅಂತರದಿಂದ ಜಯಿಸಿ ಚಿನ್ನಕ್ಕೆ ಕೊರಳೊಡ್ಡಿದರು. 90+ ಕೆ.ಜಿ ವಿಭಾಗದ ಫೈನಲ್‌ನಲ್ಲಿ ಗೌರವ್ ಚೌಹಾಣ್ 3-2 ಅಂತರದಿಂದ ಜಯ ಸಾಧಿಸಿ, ದೇಶಕ್ಕೆ ಮೂರನೇ ಚಿನ್ನ ಗೆದ್ದುಕೊಟ್ಟರು.
ಅನ್ಮೋಲ್ (60 ಕೆ.ಜಿ), ಆದಿತ್ಯ ಯಾದವ್ (65 ಕೆ.ಜಿ) ಮತ್ತು ನೀರಜ್ (75 ಕೆ.ಜಿ) ಅವರು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಇವರೆಲ್ಲರೂ ಫೈನಲ್‌ನಲ್ಲಿ 2–3 ಅಂತರದಿಂದ ಎದುರಾಳಿ ವಿರುದ್ಧ ಸೋತರು. 70 ಕೆ.ಜಿ ವಿಭಾಗದಲ್ಲಿ ಕಾರ್ತಿಕ್ ದಲಾಲ್ ಕಂಚಿನ ಪದಕ ಜಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.