ಸಿಂಗಪುರ: ಭಾರತದ ಜೂನಿಯರ್ ತಂಡದ ಆರ್ಚರಿ ಪಟುಗಳು ಶುಕ್ರವಾರ ಇಲ್ಲಿ ಮುಕ್ತಾಯಗೊಂಡ ಏಷ್ಯಾ ಕಪ್ ಲೆಗ್2 ಸ್ಪರ್ಧೆಗಳಲ್ಲಿ ಎರಡು ಚಿನ್ನ, ಆರು ಬೆಳ್ಳಿ ಮತ್ತು ಒಂದು ಕಂಚು ಸೇರಿದಂತೆ 9 ಪದಕಗಳನ್ನು ಗೆದ್ದುಕೊಂಡರು.
ಮೇಲ್ನೋಟಕ್ಕೆ ಪದಕಗಳ ಸಂಖ್ಯೆ ಉತ್ತಮ ಎಂದು ಕಾಣಬಹುದಾದರೂ, ಭಾರತದ ಸ್ಪರ್ಧಿಗಳು ನಿರ್ಣಾಯಕ ಘಟ್ಟದಲ್ಲಿ ಎಡವದೇ ಇದ್ದರೆ ಪದಕಗಳ ಸಂಖ್ಯೆ ಹೆಚ್ಚುತಿತ್ತು.
ರಿಕರ್ವ್ ಮತ್ತು ಕಾಂಪೌಂಡ್ ವಿಭಾಗದ 10 ಫೈನಲ್‌ಗಳ ಪೈಕಿ ಏಳರಲ್ಲಿ ಭಾರತದ ಸ್ಪರ್ಧಿಗಳು ಆಡುವ ಅರ್ಹತೆ ಪಡೆದಿದ್ದರು. ಆದರೆ ಎರಡರಲ್ಲಿ ಮಾತ್ರ ಚಿನ್ನ ಗೆಲ್ಲುವಲ್ಲಿ ಯಶಸ್ಸು ಕಂಡರು. ಉಳಿದ ಫೈನಲ್‌ಗಳಲ್ಲಿ ನಿರಾಶೆಗೆ ಒಳಗಾದರು. ಎಲ್ಲರೂ ಒತ್ತಡಕ್ಕೆ ಒಳಗಾದವರಂತೆ, ಹೋರಾಟ ತೊರದೇ ಸೋತ ರೀತಿ ಬೇಸರ ಉಂಟು ಮಾಡುವಂತೆ ಇತ್ತು.
ತಂಡ ವಿಭಾಗದಲ್ಲಿ ಎರಡು ಬೆಳ್ಳಿ ಬಿಟ್ಟರೆ, ಉಳಿದಂತೆ ರಿಕರ್ವ್ ಆರ್ಚರಿ ಸ್ಪರ್ಧಿಗಳು ಬರಿಗೈಯಷ್ಟೇ.
ಕ್ವಾಲಿಫಿಕೇಷನ್ ಸುತ್ತಿನ ನಂತರ ಅಗ್ರ ಶ್ರೇಯಾಂಕ ಪಡೆದಿದ್ದ ಪುರುಷರ ತಂಡ, ಜಪಾನ್ ಎದುರು ಫೈನಲ್‌ನಲ್ಲಿ ಸಪ್ಪೆಯೆನಿಸಿತು. ವಿಷ್ಣು ಚೌಧರಿ, ಪಾರಸ್ ಹೂಡಾ ಮತ್ತು ಜುಯೆಲ್ ಸರ್ಕಾರ್ ಅವರನ್ನು ಒಳಗೊಂಡ ತಂಡ ಮೂರು ಸೆಟ್‌ಗಳ ಪೈಕಿ ಎರಡರಲ್ಲಿ 50ರ ಗಡಿ ತಲುಪಲೂ ವಿಫಲವಾಯಿತು.
ರಿಕರ್ವ್ ಮಿಶ್ರ ತಂಡ ವಿಭಾಗದ ಫೈನಲ್‌ನಲ್ಲೂ ನಿರಾಸೆ ಕಾಡಿತು. ನಾಲ್ಕನೇ ಶ್ರೇಯಾಂಕದ ಚೌಧರಿ, ವೈಷ್ಣವಿ ಪವಾರ್ ಅವರಿದ್ದ ತಂಡ ಇಂಡೊನೇಷ್ಯಾ ಎದುರಿನ ಪಂದ್ಯದಲ್ಲಿ ಗುರಿಯಲ್ಲಿ ಅನೇಕ ಬಾರಿ ಎಡವಿತು. ಲಯದಲ್ಲಿ ಇಲ್ಲದೇ ಅಂತಿಮವಾಗಿ ಬೆಳ್ಳಿ ಪಡೆಯಿತು.
ಮಹಿಳಾ ರಿಕರ್ವ್ ತಂಡಕ್ಕೆ ಪದಕ ಸುತ್ತು ಪ್ರವೇಶಿಸಲೂ ಸಾಧ್ಯವಾಗಲಿಲ್ಲ.
ಕಾಂಪೌಂಡ್ ವಿಭಾಗದಲ್ಲಿ ಭಾರತದ ಸ್ಪರ್ಧಿಗಳಿಂದ ಸ್ವಲ್ಪ ಸುಧಾರಿತ ಪ್ರದರ್ಶನ ಮೂಡಿಬಂತು. ಎರಡೂ ಚಿನ್ನಗಳು ಈ ವಿಭಾಗದಲ್ಲಿ ಬಂದವು. ಪುರುಷರ ವೈಯಕ್ತಿಕ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಕುಶಲ್ ದಲಾಲ್ ತಮ್ಮ ಖ್ಯಾತಿಗೆ ಯೋಗ್ಯ ಪ್ರದರ್ಶನ ನೀಡಿ 149–143 ರಿಂದ ಆಸ್ಟ್ರೇಲಿಯಾದ ಜೋಶುವಾ ಮನೊನ್ ಅವರನ್ನು ಸೋಲಿಸಿದರು. ಇದೇ ವಿಭಾಗದಲ್ಲಿ ಸಚಿನ್ ಚೇಚಿ ಕಂಚಿನ ಪದಕ ಗೆದ್ದುಕೊಂಡರು. ಅವರು ನಾಲ್ಕನೇ ಶ್ರೇಯಾಂಕದ ಹಿಮು ಬಚ್ಚಾರ್ ಅವರನ್ನು 148–146 ರಿಂದ ಸೋಲಿಸಿದರು.
ಮಹಿಳಾ ವಿಭಾಗದಲ್ಲಿ ಎರಡನೇ ಶ್ರೇಯಾಂಕದ ತೇಜಲ್ ಸಾಳ್ವೆ ಮತ್ತು ಷಣ್ಮುಖಿ ನಾಗ ಸಾಯಿ ಬುದ್ದೆ ಫೈನಲ್ ತಲುಪಿದ್ದರಿಂದ ಭಾರತಕ್ಕೆ ಸ್ವರ್ಣ ಖಚಿತವಾಗಿತ್ತು. ತೇಜಲ್ ಚಿನ್ನ ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.